Kasturi Rangan Report: ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡಲ್ಲ: ಪರಮೇಶ್ವರ
ಪಶ್ಚಿಮ ಘಟ್ಟ ಪ್ರದೇಶದ 10 ಜಿಲ್ಲೆಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿ ಕೇಂದ್ರ ಹೊರಡಿಸಿರುವ ಈ ಅಧಿಸೂಚನೆಯು ರಾಜ್ಯದ ಲಕ್ಷಾಂತರ ಕುಟುಂಬಗಳನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. ಹೀಗಾಗಿ ನಾವು ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರದ ನಿರ್ಣಯದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲು ಸಹ ನಿರ್ಧಾರ ಮಾಡಿದ್ದೇವೆ
-
ಬೆಂಗಳೂರು: ಕಸ್ತೂರಿ ರಂಗನ್ ವರದಿ(Kasturi Rangan Report) ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊರಡಿಸಿರುವ ಜನವಿರೋಧಿ ಅಧಿಸೂಚನೆ ನಮ್ಮ ಸರಕಾರ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ನೀಡಬಾರದು ಎಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ(Dr G Parameshwar) ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಶ್ಚಿಮ ಘಟ್ಟ ಪ್ರದೇಶದ 10 ಜಿಲ್ಲೆಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿ ಕೇಂದ್ರ ಹೊರಡಿಸಿರುವ ಈ ಅಧಿಸೂಚನೆಯು ರಾಜ್ಯದ ಲಕ್ಷಾಂತರ ಕುಟುಂಬಗಳನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. ಹೀಗಾಗಿ ನಾವು ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರದ ನಿರ್ಣಯದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲು ಸಹ ನಿರ್ಧಾರ ಮಾಡಿದ್ದೇವೆ ಎಂದರು.
ಇದನ್ನೂ ಓದಿ: Dr Kasturi Rangan: ಸಕಲ ಸರ್ಕಾರಿ ಗೌರವಗಳೊಂದಿಗೆ ಕಸ್ತೂರಿ ರಂಗನ್ ಅಂತ್ಯಕ್ರಿಯೆ ; ಸರ್ಕಾರ ಆದೇಶ
ಶತಮಾನಗಳಿಂದ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಲ್ಲಿನ ಪ್ರಕೃತಿ ಯೊಂದಿಗೆ ಸಮತೋಲಿತ ಜೀವನ ಶೈಲಿಯನ್ನು ಅಳವಡಿಸಿಕೊಂಡು, ತಮ್ಮ ಸುತ್ತಲಿನ ಪರಿಸರ ಗೌರವಿಸುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಮನುಷ್ಯ ಮತ್ತು ಪರಿಸರದ ನಡುವಿನ ಈ ಅನ್ಯೋನ್ಯ ಭಾವವೇ ಇಂದಿಗೂ ಪಶ್ಚಿಮ ಘಟ್ಟಗಳ ಜೀವಂತಿಕೆಯನ್ನು ಹಿಡಿದಿಟ್ಟಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸಲು ಹೊರಡುವುದು ಜೀವವಿರೋಧಿ, ಅಮಾನವೀಯ ನಡೆಯಾಗುತ್ತದೆ ಎಂದಿದ್ದಾರೆ.
ಕೇಂದ್ರ ಸರಕಾರಕ್ಕೆ ಪರಿಸರ ಸಂರಕ್ಷಣೆ ಮಾಡುವ ನೈಜ ಕಾಳಜಿ ಇದ್ದಲ್ಲಿ, ಪಶ್ಚಿಮ ಘಟ್ಟ ಪ್ರದೇಶಗಳ ಗ್ರಾಮಗಳಲ್ಲಿ ತಲೆಮಾರುಗಳಿಂದ ವಾಸಮಾಡುತ್ತಿರುವ ಜನರ ಆತಂಕ, ಅಹವಾಲುಗಳನ್ನು ಆಲಿಸಬೇಕು. ಹಾಗೆಯೇ ರಾಜ್ಯದ ಜೊತೆ ಅಗತ್ಯ ಚರ್ಚೆ ನಡೆಸಿ, ಎಲ್ಲರೂ ಒಪ್ಪುವಂತಹ ಒಮ್ಮತದ ನಿರ್ಣಯಕ್ಕೆ ಬರಬೇಕು.
ಹೀಗೆ ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರವನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ಈವರೆಗೆ 6 ಬಾರಿ ವರದಿ ಜಾರಿ ಮಾಡಬೇಕೆಂದು ಕೇಂದ್ರ ಹೊರಡಿಸಿದ್ದ ಅಽಸೂಚನೆಯನ್ನು ಕರ್ನಾಟಕದಲ್ಲಿ ತಿರಸ್ಕರಿಸಿ, ಸ್ಪಷ್ಟನೆಯನ್ನು ಸಹ ನೀಡಲಾಗಿದೆ. ಆದರೂ ಕೇಂದ್ರ ನಮ್ಮ ದನಿಗೆ ಕಿವಿಗೊಡದೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ತನ್ನ ನಿಲುವನ್ನು ಹೇರಲು ಬಯಸುತ್ತಿರುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
![]()
ಪಶ್ಚಿಮ ಘಟ್ಟ ಭಾಗದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮೊಂದಿಗೆ ನಮ್ಮ ಸರಕಾರವಿದೆ. ವರದಿ ಜಾರಿ ತಡೆಯಲು ಒಂದು ಸರಕಾರವಾಗಿ ಯಾವೆ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆ ಅದನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ.
-ಡಾ.ಜಿ.ಪರಮೇಶ್ವರ, ಡಿಸಿಎಂ