ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ಬೈರತಿ ಬಸವರಾಜು ಬಂಧನ

ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಶಾಸಕ ಬೈರತಿ ಬಸವರಾಜು ಅರೆಸ್ಟ್‌

ಶಾಸಕ ಬೈರತಿ ಬಸವರಾಜು (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Feb 12, 2026 7:17 PM

ಬೆಂಗಳೂರು, ಫೆ. 12: ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜು (Byrathi Basavaraj) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಗುರುವಾರ (ಫೆಬ್ರವರಿ 12) ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಐಡಿ ತಂಡ ಬಂಧಿಸಿದೆ. ಇಂಡಿಗೋ – 6E683 ವಿಮಾನದಲ್ಲಿ ಗುಜರಾತ್‌ನ ಅಹಮದಾಬಾದ್​​ನಿಂದ ಬೆಂಗಳೂರಿಗೆ ಆಗಮಿಸಿದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜು ಕೆಲ ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಅಲ್ಲಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.

ಸುಳ್ಳು ಹೇಳಿದ್ದೇ ಮುಳುವಾಯ್ತೆ?

ರೌಡಿ ಶೀಟರ್‌ ಬಿಕ್ಲು ಶಿವ ಕೊಲೆಯಾಗಿದ್ದ. ಈ ಪ್ರಕರಣದ ಪ್ರಥಮ ಆರೋಪಿ ಜಗದೀಶ್‌ನೊಂದಿಗೆ ಬೈರತಿ ಬಸವರಾಜು ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಬೈರತಿ ಅವರನ್ನು 5ನೇ ಆರೋಪಿಯನ್ನಾಗಿಲಾಗಿತ್ತು. ವಿಚಾರಣೆ ವೇಳೆ ಬೈರತಿ ತಮಗೂ ಜಗದೀಶ್‌ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಆದರೆ ಅವರ ಕಾಲ್‌ ಹಿಸ್ಟ್ರಿ ಪರಿಶೀಲಿಸಿದಾಗ ಜಗದೀಶ್‌ ಜತೆಗೆ ನಿರಂತರ ಸಂಪರ್ಕದಲ್ಲಿದ್ದುದು ಬಯಲಾಗಿತ್ತು.

ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ; ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಅಂಶವನ್ನು ಎತ್ತಿ ಹಿಡಿದಿತ್ತು. ʼʼಕರೆ ದಾಖಲೆಯು ಬಸವರಾಜು ಜಗದೀಶ್ ಜತೆ ಸಂಪರ್ಕದಲ್ಲಿದ್ದೀರಿ ಎಂಬುದನ್ನು ತೋರಿಸುತ್ತದೆ. ಜಗದೀಶ್ ಬಂದೂಕನ್ನು ಬಳಸಿದ್ದಾನೆ, ತದನಂತರ ಶ್ರೀಲಂಕಾಕ್ಕೆ ಪರಾರಿಯಾಗಿದ್ದಾನೆ" ಎಂದು ಸಿಜೆಐ ಸೂರ್ಯಕಾಂತ್‌ ಹೇಳಿದ್ದರು.

ಅಲ್ಲದೆ ಶಾಸಕರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತ್ತು. ಅದಾಗ್ಯೂ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯವಿದೆ ಎಂದು ಹೇಳಿತ್ತು. ಹೀಗಾಗಿ ಇದೀಗ ಸಿಐಡಿ ತಂಡ ಅವರನ್ನು ವಶಕ್ಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಭೈರತಿ ಬಸವರಾಜು ಅವರನ್ನು ವಶಕ್ಕೆ ಪಡೆದ ಎಸಿಪಿ ಹರ್ಷ ಬಳಿಕ ಸಿಐಡಿಗೆ ಹಸ್ತಾಂತರಿಸಿದರು.

ಘಟನೆ ಹಿನ್ನೆಲೆ

ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪ 2025ರ ಜುಲೈ 15ರಂದು ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಬೈರತಿ ಬಸವರಾಜು 5ನೇ ಆರೋಪಿ. ಮೊದಲಿಗೆ ಎಫ್‌ಐಆರ್‌ ರದ್ದು ಕೋರಿ ಬೈರತಿ ಬಸವರಾಜು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಬೈರತಿ ಬಸವರಾಜ ಅವರನ್ನು ಬಂಧಿಸಬಾರದು ಎಂದು ಆರಂಭದಲ್ಲಿ ಹೈಕೋರ್ಟ್‌ ಸೂಚಿಸಿತ್ತು. ಬಸವರಾಜು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿದೆ. ಶಾಸಕರ ಮುಂದಿನ ನಡೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.