ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಎಂಟಿಸಿ ಪ್ರಯಾಣಿಕರಿಗೆ ಮತ್ತೆ ಶಾಕ್‌; ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ಹೆಚ್ಚಳ

ಗಾಯದ ಮೇಲೆ ಬರೆ ಎಳೆದಂತೆ ಎಂಬತೆ ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರ ಮತ್ತೊಂದು ಶಾಕ್‌ ನೀಡಿದೆ. ಬಿಎಂಟಿಸಿ ಬಸ್​ಗಳ ಕಾರ್ಯವ್ಯಾಪ್ತಿ ವಿಸ್ತರಿಸಲ್ಪಟ್ಟಿರುವುದರಿಂದ ದೀರ್ಘ ಪ್ರಯಾಣದ ಬಸ್ ಪಾಸ್ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ.

ಬಿಎಂಟಿಸಿ ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ಹೆಚ್ಚಳ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 23, 2026 11:05 AM

ಬೆಂಗಳೂರು: ಗಾಯದ ಮೇಲೆ ಬರೆ ಎಳೆದಂತೆ ಎಂಬತೆ ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರ ಮತ್ತೊಂದು ಶಾಕ್‌ ನೀಡಿದೆ. ಬಿಎಂಟಿಸಿ ಬಸ್​ಗಳ (BMTC Buses) ಕಾರ್ಯವ್ಯಾಪ್ತಿ ವಿಸ್ತರಿಸಲ್ಪಟ್ಟಿರುವುದರಿಂದ ದೀರ್ಘ ಪ್ರಯಾಣದ ಬಸ್ ಪಾಸ್ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜೂನ್ 23) ಜಾರಿಗೆ ಬರುತ್ತಿದೆ. ಆದರೆ, ಸಾಮಾನ್ಯ ಮಾಸಿಕ ಬಸ್ ಪಾಸಿನ ದರ 1200 ರೂ. ಮುಂದುವರಿಯಲಿದೆ.

ಬೆಂಗಳೂರಿನ ಹೊರವಲಯದ ಜಿಲ್ಲೆ ಹಾಗೂ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ‘ವಿಸ್ತಾರ ಮಾಸಿಕ ಪಾಸ್ ಪರಿಚಯಿಸಲಾಗುತ್ತಿದ್ದು, ಅದಕ್ಕೆ ದರ 1500 ರೂ. ನಿಗದಿಪಡಿಸಲಾಗಿದೆ. ಪ್ರಸ್ತುತ ಬಿಎಂಟಿಸಿ ಒಟ್ಟು 1,819 ಮಾರ್ಗಗಳಲ್ಲಿ 6,295 ಬಸ್‌ಗಳು ಕಾರ್ಯಾಚರಿಸುತ್ತಿದ್ದು, ಅವುಗಳಲ್ಲಿ 96 ಮಾರ್ಗಗಳ 216 ಬಸ್‌ಗಳು ವಿಸ್ತಾರ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಸಾಮಾನ್ಯ ಮಾಸಿಕ ಪಾಸನ್ನು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಎಂದಿನಂತೆ ಬಳಸುತ್ತಿದ್ದು, ಅದರ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಹೊಸದಾಗಿ ಪರಿಚಯಿಸಿರುವ 'ಸಾಮಾನ್ಯ ವಿಸ್ತಾರ' ಪಾಸ್‌ಗಳು ಕೇವಲ ವಿಸ್ತಾರ ವ್ಯಾಪ್ತಿಯ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಮಾತ್ರ ಜಾರಿಗೊಳಿಸಲಾಗಿದೆ.

ಬಿಎಂಟಿಸಿ ಕಾರ್ಯಾಚರಣೆಯ ವ್ಯಾಪ್ತಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40 ಕಿ.ಮೀ.ವರೆಗೆ ವಿಸ್ತರಿಸಲಾಗಿದೆ. ಈ ನಿರ್ಧಾರದಿಂದಾಗಿ ನಗರದ ಕೇಂದ್ರ ಭಾಗದಿಂದ 40-42 ಕಿ.ಮೀ.ವರೆಗೆ ಕಾರ್ಯಾಚರಣೆಗೊಳ್ಳುತ್ತಿದ್ದ ಬಸ್‌ ಸೇವೆ ಈಗ 65 ಕಿ.ಮೀ.ನಿಂದ 70 ಕಿ.ಮೀ.ಗೆ ವಿಸ್ತರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ಬೆಂಗಳೂರು ನಗರ ಸುತ್ತಮುತ್ತಲಿನ ಪ್ರಮುಖ ಜಿಲ್ಲಾಹಾಗೂ ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಬಸ್‌ ಸೇವೆ ವಿಸ್ತರಣೆಯಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಬ್ಲೂ ಲೈನ್ ಸಂಚಾರಕ್ಕೆ ಸಿದ್ಧತೆ

ಹೊಸ ಕಾರ್ಯಾಚರಣೆ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ನಗರದ ಕೇಂದ್ರ ಭಾಗದಿಂದ ಸುಮಾರು 40 ಕಿ.ಮೀ.ವರೆಗಿನ ಪ್ರದೇಶವನ್ನು 'ಸೀಮಿತ ವ್ಯಾಪ್ತಿ' ಹಾಗೂ ಅದರಾಚೆಗಿನ ಪ್ರದೇಶವನ್ನು 'ವಿಸ್ತಾರ ವ್ಯಾಪ್ತಿ' ಎಂದು ವರ್ಗೀಕರಿಸಲಾಗಿದೆ. ಹಾಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಈಗಾಗಲೇ ಜಾರಿಯಲ್ಲಿರುವ ವಿವಿಧ ಪಾಸುಗಳನ್ನು ಸೀಮಿತ ವ್ಯಾಪ್ತಿಯವರೆಗೆ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಲಾಗಿದೆ.