ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karantara Suliyalli Book: ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ ಪುಸ್ತಕ ಲೋಕಾರ್ಪಣೆ

ಈ ಪುಸ್ತಕವು ಒಬ್ಬ ತಂದೆಯಾಗಿ ಕಾರಂತರು ಹೇಗಿದ್ದರು ಎಂಬುದನ್ನು ಅವರ ಮಕ್ಕಳ ಕಣ್ಣಿನಿಂದ ನೋಡುವ ಅಪರೂಪದ ಪ್ರಯತ್ನವಾಗಿದೆ. ಇದು ಡಾ.ಶಿವರಾಮ್ ಕಾರಂತರ ಮಕ್ಕಳಾದ ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಅವರು ಬರೆದ ‘ Growing Up Karanth' ’ಪುಸ್ತಕದ ಕನ್ನಡ ಅವತರಣಿಕೆಯಾಗಿದೆ.

ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ ಪುಸ್ತಕ ಲೋಕಾರ್ಪಣೆ

ಬೆಂಗಳೂರಿನಲ್ಲಿ ʼಕಾರಂತರ ಸುಳಿಯಲ್ಲಿʼ ಕೃತಿ ಬಿಡುಗಡೆ ಮಾಡಲಾಯಿತು. -

Profile
Ashok Nayak Apr 5, 2026 1:10 PM

ಬೆಂಗಳೂರು: ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ (Karantara Suliyalli Book) ಪುಸ್ತಕ ಭಾನುವಾರ ಲೋಕಾರ್ಪಣೆಗೊಂಡಿತು. ಈ ಪುಸ್ತಕವು ಕನ್ನಡದ ಮೇರು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೋಟ ಶಿವರಾಮ ಕಾರಂತ ಅವರ ಮಕ್ಕಳಾದ ಉಲ್ಲಾಸ್ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಅವರು ಬರೆದ ‘ Growing Up Karanth' ’ಪುಸ್ತಕದ ಕನ್ನಡ ಅವತರಣಿಕೆಯಾಗಿದೆ.

ವಿಶ್ವವಾಣಿ ಪುಸ್ತಕ ವತಿಯಿಂದ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕರಾದ ವನ್ಯಜೀವಿ ಜೀವಶಾಸ್ತ್ರಜ್ಞ ಉಲ್ಲಾಸ್ ಕಾರಂತ್, ಶಾಸ್ತ್ರೀಯ ನೃತ್ಯಪಟು ಕ್ಷಮಾರಾವ್, ಮನಃಶಾಸ್ತ್ರಜ್ಞರಾದ ಮಾಲವಿಕಾ ಕಪೂರ್, ಕೃತಿಯ ಅನುವಾದಕರು ಹಾಗೂ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್, ಪತ್ರಕರ್ತ ಎಸ್.ದಿವಾಕರ್, ಪಾಡ್‌ಕಾಸ್ಟರ್ ಮತ್ತು ಪತ್ರಕರ್ತ ಶೋಭಾ ನಾರಾಯಣ್, ವಿಮರ್ಶಕರಾದ ಎಸ್.ಆರ್.ವಿಜಯಶಂಕರ ಅವರು ಉಪಸ್ಥಿತರಿದ್ದರು.

ಈ ಕೃತಿಯು ಒಬ್ಬ ತಂದೆಯಾಗಿ ಕಾರಂತರು ಹೇಗಿದ್ದರು ಎಂಬುದನ್ನು ಅವರ ಮಕ್ಕಳ ಕಣ್ಣಿನಿಂದ ನೋಡುವ ಅಪರೂಪದ ಪ್ರಯತ್ನವಾಗಿದೆ. ‘ಕಾರಂತರ ಸುಳಿಯಲ್ಲಿ’ ಅವರ ಮಕ್ಕಳು ತಮ್ಮ ಬಾಲ್ಯದ ದಿನಗಳು, ತಂದೆಯೊಂದಿಗಿನ ಒಡನಾಟ, ತಾಯಿಯ ವ್ಯಕ್ತಿತ್ವ ಮತ್ತು ಅವರ ಮನೆಯ ಪರಿಸರವನ್ನು ಅತ್ಯಂತ ಆಪ್ತವಾಗಿ ಚಿತ್ರಿಸಿದ್ದಾರೆ.

ʼಕಾರಂತರ ಸುಳಿಯಲ್ಲಿʼ ಈಗ ಮಾರುಕಟ್ಟೆಯಲ್ಲಿ ಲಭ್ಯ!

_Karantara Suliyalli Book

ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ Growing Up Karanth ಕೃತಿಯನ್ನು ಕನ್ನಡದಲ್ಲಿ ತಾವು "ಕಾರಂತರ ಸುಳಿಯಲ್ಲಿ" ಎಂದು ಅನುವಾದ ಮಾಡಿದ್ದು, ಅದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ತಿಳಿಸಿದ್ದಾರೆ.

ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾರಂತರ ಬಗ್ಗೆ ಬೇರೆ ಬೇರೆಯವರು ಸಾಕಷ್ಟು ಬರೆದಿದ್ದಾರೆ. ಆದರೆ ಅವರ ಮಕ್ಕಳು ಬರೆದಿರುವುದು ಇದೇ ಮೊದಲು. ತಂದೆಯನ್ನು ಮಕ್ಕಳು ಅರ್ಥ ಮಾಡಿಕೊಳ್ಳುವುದೇ ಒಂದು ಹೊಸ ಆಯಾಮ. ತಂದೆ ಎನ್ನುವ ಬಿಗುವಿನ ಕವಚದ ಹಿಂದೆ ಅಡಗಿರುವ ಮೃದುತ್ವವನ್ನು ಗುರುತಿಸುವುದೇ ಮಕ್ಕಳ ಪಾಲಿನ ದೊಡ್ಡ ಜ್ಞಾನೋದಯ. ಬಾಲ್ಯದಲ್ಲಿ ಶಿಸ್ತಿನ ಸಿಪಾಯಿಯಂತೆ, ಕೇವಲ ನಿಯಮಗಳ ಪಾಲಕನಂತೆ ಕಾಣುವ ತಂದೆ, ವಯಸ್ಸಾದಂತೆ ಒಬ್ಬ ಮಗನಿಗೆ ಗೆಳೆಯನಾಗಿ, ಮಗಳಿಗೆ ಆಪ್ತ ಸಲಹೆಗಾರನಾಗಿ ರೂಪಾಂತರಗೊಳ್ಳುತ್ತಾನೆ.

ತಂದೆಯ ಮೌನದ ಭಾಷೆ, ಸವೆದ ಚಪ್ಪಲಿಗಳು, ಹರಿದ ಬನಿಯನ್ನಿನ ತೂತುಗಳು ಮತ್ತು ಕುಟುಂಬಕ್ಕಾಗಿ ಆತ ನುಂಗಿಕೊಂಡ ಅದೆವೆಷ್ಟೋ ನೋವುಗಳು ಅರ್ಥವಾದಾಗ, ಮಕ್ಕಳ ದೃಷ್ಟಿಕೋನದಲ್ಲಿ ಹೊಸ ಆಯಾಮ ತೆರೆದುಕೊಳ್ಳುತ್ತದೆ. ಆ ಕ್ಷಣದಲ್ಲಿ ತಂದೆ ಕೇವಲ ವ್ಯಕ್ತಿಯಾಗಿ ಉಳಿಯದೇ, ಸಹನೆ ಮತ್ತು ನಿಸ್ವಾರ್ಥ ಪ್ರೀತಿಯ ಜೀವಂತ ಪಾಠಶಾಲೆಯಾಗಿ ಕಾಣಿಸುತ್ತಾನೆ. ಈ ತಿಳಿವಳಿಕೆಯೇ ನಿಜವಾದ ಭಾವನಾತ್ಮಕ ಬೆಸುಗೆ.

ಮೂವರು ಸೇರಿ ಕಾರಂತರನ್ನು ಚಿತ್ರಿಸಿರುವ ರೀತಿಯಿಂದ ನಮಗೆ ಬೇರೊಬ್ಬ ಕಾರಂತರು ಈ ಕೃತಿಯಲ್ಲಿ ಸಿಗುತ್ತಾರೆ. ಮೂವರು ತಮ್ಮ ತಾಯಿ ಲೀಲಾ ಕಾರಂತರ ವ್ಯಕ್ತಿತ್ವದ ಮೂಲಕವೂ ಶಿವರಾಮ ಕಾರಂತರನ್ನು ನೋಡುವ ಪ್ರಯತ್ನ ಮಾಡಿರುವುದು ಒಂದು ಹೊಸ ಹೊಳಹು ಎನ್ನಬಹುದು. ಕಾರಂತರು ನಿಧನರಾದ ಇಪ್ಪತ್ತೊಂಬತ್ತು ವರ್ಷಗಳ ನಂತರ ಕನ್ನಡದಲ್ಲಿ ಇಂಥ ಕೃತಿ ಬರುತ್ತಿರುವುದು ನಿಜಕ್ಕೂ ವಿಶೇಷವೇ.

ಈ ಪುಸ್ತಕದ ಮುದ್ರಣ ಮತ್ತು ಒಟ್ಟಂದ ಬಹಳ ಆಕರ್ಷಕವಾಗಿ ಬಂದಿದೆ. ಆ ಕೃತಿಯನ್ನು ನೋಡಿದವರೆಲ್ಲ, ಕನ್ನಡದಲ್ಲಿ ಈ ಗುಣಮಟ್ಟದ ಪುಸ್ತಕ ಅಪರೂಪ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಕನ್ನಡದ ಪ್ರಮುಖ ಪುಸ್ತಕ ಮಾರಾಟಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವನ್ನು ನೋಡಿ, ಮೈದಡವಿದ ಬಳಿಕ ಖರೀದಿಸದೇ ಇರಲು ಸಾಧ್ಯವಿಲ್ಲ, ಅಷ್ಟೊಂದು ಸುಂದರವಾಗಿದೆ ಈ ಕೃತಿ.

ಪುಸ್ತಕ ಕೈಸೇರುತ್ತಿದ್ದಂತೆ, ಮುನ್ನೂರಕ್ಕೂ ಹೆಚ್ಚು ಪುಸ್ತಕಗಳಿಗೆ ಹಸ್ತಾಕ್ಷರ ಹಾಕಿದ್ದಾಯಿತು. ಪುಸ್ತಕ ಬರೆದ ನಿಜವಾದ ಸಂತೃಪ್ತಿ ಸಿಗುವುದು ಲೇಖಕನಾದವನು ಆಟೋಗ್ರಾಫ್ ಹಾಕುವುದರಲ್ಲಿ. ಮುದ್ರಿತ ಅಕ್ಷರಗಳು ಎಲ್ಲರಿಗೂ ಸಮಾನವಾಗಿದ್ದರೂ, ಲೇಖಕನ ಸಹಿ ಆ ನಿರ್ದಿಷ್ಟ ಪ್ರತಿಯನ್ನು ಆ ಓದುಗನಿಗೆ ಮಾತ್ರ ಸೀಮಿತಗೊಳಿಸುತ್ತದೆ. ಅನಾಮಧೇಯ ಓದುಗನಿಗೂ, ಲೇಖಕನಿಗೂ ನಡುವೆ ಒಂದು ಭಾವನಾತ್ಮಕ ಸೇತುವೆ ನಿರ್ಮಾಣವಾಗುತ್ತದೆ. ಪುಸ್ತಕ ಬರೆಯುವುದು ಒಂದು ಸೃಷ್ಟಿಯ ಆನಂದವಾದರೆ, ಹಸ್ತಾಕ್ಷರ ಹಾಕುವುದು ಆ ಸೃಷ್ಟಿ ಸಾರ್ಥಕವಾಯಿತು ಎನ್ನುವ ಸಂಭ್ರಮ.

ಪ್ರೀ-ಆರ್ಡರ್ ಮಾಡಿದವರಿಗೆಲ್ಲ ಪುಸ್ತಕ ರವಾನೆಯಾಗುತ್ತಿದೆ. ನಿಮಗೆ ಪ್ರತಿಗಳು ಬೇಕಿದ್ದರೆ, 6362393966 ಸಂಪರ್ಕಿಸಿ. ನಾವೇ ಅಂಚೆ ವೆಚ್ಚ ಭರಿಸಿ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಪುಸ್ತಕಪ್ರಿಯನಾಗಿ ನಾನು ಹೇಳುವುದಿಷ್ಟೆ - ಈ ಕೃತಿ ನಿಮ್ಮ ಸಂಗ್ರಹದಲ್ಲಿರಲು ಯೋಗ್ಯ! ಎಂದು ತಿಳಿಸಿದ್ದಾರೆ.