Karnataka bypolls: ಏಪ್ರಿಲ್ 9ಕ್ಕೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ; ಮೇ 4ಕ್ಕೆ ಫಲಿತಾಂಶ
Karnataka By-elections: ದೇಶದ 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಸೇರಿ ಕರ್ನಾಟಕದ ಎರಡು ಕ್ಷೇತ್ರಗಳ ಉಡುಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಪ್ರತಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಕಟಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ರಾಜ್ಯದಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ (Bagalkote, Davanagere South bypolls) ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 9ಕ್ಕೆ ಈ ಎರಡು ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರ ಮತ್ತು ಹಿರಿಯ ಕೈ ಶಾಸಕ ಎಚ್.ವೈ.ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.
ಮಾರ್ಚ್ 16ಕ್ಕೆ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮಾರ್ಚ್ 24 ನಾಮಪತ್ರ ಪರಿಶೀಲನೆ, ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಏಪ್ರಿಲ್ 9 ಮತದಾನ ನಡೆಯಲಿದೆ. ಮೇ 4 ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ?
ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ದಾವಣಗೆರೆ ದಕ್ಷಿಣಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುವುದು ಕಾಂಗ್ರೆಸ್ ಮುಸ್ಲಿಂ ಮುಖಂಡರ ಬೇಡಿಕೆಯಾಗಿದೆ. ಆದರೆ ಇದಕ್ಕೆ ಸಚಿವ ಎಸ್.ಎಸ್. ಮಲ್ಲಕಾರ್ಜುನ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಿಂದ ತಮ್ಮ ಪುತ್ರ ಸಮರ್ಥ್‌ಗೆ ಟಿಕೆಟ್ ನೀಡುವಂತೆ ಸಚಿವ ಬೇಡಿಕೆ ಇಟ್ಟಿದ್ದಾರೆ. ಆದರೆ, ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಟಿಕೆಟ್ ಆಕಾಂಕ್ಷಿಗಳಾದ ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಮುಖಂಡರಾದ ಸೈಯದ್ ಖಾಲಿದ್ ಆಹ್ಮದ್, ಎಎಂಅರ್ ಹುಸೇನ್ ಪಟ್ಟು ಹಿಡಿದಿದ್ದಾರೆ.
ಅದೇ ರೀತಿ ಬಿಜೆಪಿಯಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿ ಪೈಪೋಟಿ ಇದೆ. ಜಿ.ಎಸ್. ಸಿದ್ದೇಶ್ವರ ಮತ್ತು ಎಂಪಿ ರೇಣುಕಾಚಾರ್ಯ ಬಣಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ಇದೆ. ಬಿ.ಜಿ. ಅಜಯ್ ಕುಮಾರ್, ಕೋಳೆನಹಳ್ಳಿ ಸತೀಶ್, ಯಶವಂತ್ ರಾವ್ ಜಾಧವ್, ಶ್ರೀನಿವಾಸ್ ದಾಸ ಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ಬಿಜೆಪಿಯ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಬಾಗಲಕೋಟೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಯಾರು?
ಇನ್ನು ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎಚ್.ವೈ. ಮೇಟಿ ಅವರ ಪುತ್ರರಾದ ಉಮೇಶ್ ಮೇಟಿ, ಮಲ್ಲಿಕಾರ್ಜುನ್ ಮೇಟಿ ಹಾಗೂ ಪುತ್ರಿ ಬಾಯಕ್ಕ ಮೇಟಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಲ್ಲಿ ಮೇಟಿ ಅವರ ಕುಟುಂಬದ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನು ಬಿಜೆಪಿಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಎಂಎಲ್‌ಸಿ ಪಿಎಚ್ ಪೂಜಾರ್ ನಡುವೆ ಪೈಪೋಟಿ ಇದೆ.
GBA Election: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ; ಮತದಾರರ ಪಟ್ಟಿ ಪ್ರಕಟ
4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ದಿನಾಂಕ ಫಿಕ್ಸ್
ಏಪ್ರಿಲ್ 9ರಂದು ಅಸ್ಸಾಂ, ಕೇರಳ, ಪುದುಚೇರಿ, ಏಪ್ರಿಲ್ 23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಚುನಾವಣೆ ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ರಾಜ್ಯಗಳ ಜತೆ ಕರ್ನಾಟಕದಲ್ಲೂ ಉಪ ಚುನಾವಣೆ ನಡೆಯಲಿದೆ.