CM Siddaramaiah: ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲ ಮುಚ್ಚಲು ಸಿಎಂ ಸಿದ್ದರಾಮಯ್ಯ ಆದೇಶ
Bengaluru: ಹೊಸ ಹೊಸ ಔಟರ್ ರಿಂಗ್ ರಸ್ತೆ, ಸುರಂಗ ಮಾರ್ಗ, ಫ್ಲೈ ಓವರ್, ಡಬಲ್ ಡೆಕ್ಕರ್ ರಸ್ತೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಗೆ ₹1,20,000 ಕೋಟಿ ನೀಡುತ್ತಿದ್ದೇವೆ. ಆದ್ದರಿಂದ ಕೆಲಸ ಮಾಡುವವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

-

ಬೆಂಗಳೂರು : ಒಂದು ವಾರದಲ್ಲಿ ನಗರದ (Bengaluru) ರಸ್ತೆ ಗುಂಡಿಗಳನ್ನೆಲ್ಲಾ (Pothole) ಮುಚ್ಚಿ ಒಂದು ಲೇಯರ್ ಟಾರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದ್ದಾರೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಗಾಂಧಿನಗರ ಕ್ಷೇತ್ರದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ದಿನೇಶ್ ಗುಂಡೂರಾವ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಕು. ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಇಲ್ಲಿನ ಪೇಟೆಗಳು ಈಗಲೂ ಆ ಕಾಲದ ಸ್ವಭಾವವನ್ನೇ ಹೊಂದಿವೆ. ನಾವೊಮ್ಮೆ ಇಲ್ಲಿನ ರಸ್ತೆಗಳ ಅಗಲೀಕರಣದ ಬಗ್ಗೆ ಚಿಂತಿಸಿದ್ದೆವು. ಆದರೆ ದಿನೇಶ್ ಗುಂಡೂರಾವ್ ಅವರು ಒಪ್ಪಲಿಲ್ಲ. ನಮ್ಮ ಜನಗಳಿಗೆ ಸಮಸ್ಯೆ ಆಗುತ್ತದೆ ಸರ್ ಎಂದು ಸ್ಪಷ್ಟವಾಗಿ ನಿರಾಕರಿಸಿ, ರಸ್ತೆ ಅಗಲೀಕರಣ ಮಾಡದೆ, ರಸ್ತೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿರುವ ನಗರ. ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಈ ಸವಾಲನ್ನು ಗೆಲ್ಲಲು ಬೆಂಗಳೂರಿನ ರಸ್ತೆಗಳ ಆಧುನೀಕರಣ ಮತ್ತು ಅಭಿವೃದ್ಧಿಗೆ ಹೇರಳವಾದ ಹಣ ಒದಗಿಸುತ್ತಿದ್ದೇವೆ. ಬೆಂಗಳೂರಿನ ಮೆಟ್ರೋಗೆ ಶೇ.87 ರಷ್ಟು ಹಣ ಕೊಡುವುದು ನಾವೇ. ಅಂದರೆ ರಾಜ್ಯದ ಜನತೆಯ ಶೇ.87 ರಷ್ಟು ಹಣದಲ್ಲಿ ಮೆಟ್ರೋ ಆಗಿದೆ. ಆದರೆ ಬಿಜೆಪಿಯವರು ಮೆಟ್ರೋ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮೆಟ್ರೋಗೆ ಶೇ.87ರಷ್ಟು ಹಣ ಕೊಡುವುದು ನಾವೇ: ಸಿಎಂ ಸಿದ್ದರಾಮಯ್ಯ
ಜಿಎಸ್‌ಟಿ ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ನರೇಂದ್ರ ಮೋದಿ ಅವರು. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ಫೋಟೋ ಹಾಕಿ “ದೀಪಾವಳಿ ಗಿಫ್ಟ್” ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇಂಥಾ ನಕಲಿಗಳಿಗೆ ನೀವು ಓಟು ಹಾಕಿ ಈಗ ಏಕೆ ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ ಎಂದರು.
“ದೀಪಾವಳಿ ಗಿಫ್ಟ್” ಎಂದು ಜಾಹಿರಾತು ನೀಡಿರುವ ಮೋದಿ ಸರ್ಕಾರದ ಜಿಎಸ್‌ಟಿ ಬದಲಾವಣೆಯಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ಒಂದೇ ಒಂದು ರಸ್ತೆ ಗುಂಡಿ ಮುಚ್ಚಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ನಮ್ಮ ಸರ್ಕಾರದ ಕಾಲದಲ್ಲೇ ಆಗಿರುವಂಥವು. ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಿ ಒಂದು ಲೇಯರ್ ಟಾರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಇಲ್ಲಿಯೇ ಸೂಚನೆ ನೀಡುತ್ತಿದ್ದೇನೆ ಎಂದರು.
ಹೊಸ ಹೊಸ ಔಟರ್ ರಿಂಗ್ ರಸ್ತೆ, ಸುರಂಗ ಮಾರ್ಗ, ಫ್ಲೈ ಓವರ್, ಡಬಲ್ ಡೆಕ್ಕರ್ ರಸ್ತೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಗೆ ₹1,20,000 ಕೋಟಿ ನೀಡುತ್ತಿದ್ದೇವೆ. ಆದ್ದರಿಂದ ಕೆಲಸ ಮಾಡುವವರ ಪರವಾಗಿ ನೀವು ಗಟ್ಟಿಯಾಗಿ ನಿಲ್ಲಬೇಕು. ದಿನೇಶ್ ಗುಂಡೂರಾವ್ ಅವರಂಥ ಶಾಸಕ ಸಿಕ್ಕಿರುವುದು ನಿಮ್ಮ ಅದೃಷ್ಟ ಎಂದು ಹೇಳಿದರು.