ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನ ಬೇಡ; ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಹೊಸ ನಿಯಮಗಳು ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿದ್ದು, ಕೆಲಸದ ಹಕ್ಕನ್ನು ಕಸಿಯಲಿದೆ. ಗ್ರಾಮೀಣ ಭಾಗದಲ್ಲಿ ಸಂಪನ್ಮೂಲ ಸೃಷ್ಟಿಯ ಆಶಯವನ್ನು ಬದಲಾಯಿಸಿ, ಗುತ್ತಿಗೆದಾರರ ಕೇಂದ್ರಿತ ಮಾದರಿಯಾಗಿಸಲು ದಾರಿ ಮಾಡಿಕೊಡುವ ಅಪಾಯವಿದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ. -
ಬೆಂಗಳೂರು, ಡಿ.31: ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ವಿಬಿ ಜಿ ರಾಮ್ ಜಿ ಯೋಜನೆಯಿಂದ (VB-G RAM G scheme) ರಾಜ್ಯಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದ್ದು, ಮೂಲ ಉದ್ಯೋಗ ಖಾತರಿಯ ಹಕ್ಕನ್ನೇ ಕಸಿದುಕೊಳ್ಳುವ ಅಪಾಯವನ್ನು ಹೊಂದಿದೆ. ಹೀಗಾಗಿ ವಿಬಿ-ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ವಿಕಸಿತ ಭಾರತ–ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ), (VB-G RamG) ಕಾಯ್ದೆಯನ್ನು ಜಾರಿಗೊಳಿಸುವ ಹಾಗೂ ಚಾಲ್ತಿಯಲ್ಲಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ರದ್ದುಗೊಳಿಸುವ ವಿಚಾರದ ಬಗ್ಗೆ ನನ್ನ ಒಳನೋಟಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮೊದಲಿಗೆ, ಹೊಸ ಕಾಯ್ದೆಯು ಮೂಲ ಉದ್ಯೋಗ ಖಾತರಿಯ ಹಕ್ಕನ್ನೇ ಕಸಿದುಕೊಳ್ಳುವ ಅಪಾಯವನ್ನು ಹೊಂದಿದೆ. ಹಾಗಾಗಿ ಈ ಕಾಯ್ದೆಯು ಬೇಡಿಕೆ ಆಧಾರಿತ ಹಾಗೂ ಹಕ್ಕು ಆಧಾರಿತವಾಗಿರಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ.
ಹೊಸ VB-G RamG ಕಾಯ್ದೆಯು ಕೆಲಸದ ದಿನಗಳನ್ನು 100ರಿಂದ 125ಕ್ಕೆ ಏರಿಕೆ ಮಾಡಿರುವುದಾಗಿ ಹೇಳುತ್ತಿದೆ. ಆದರೆ ಈ ಭರವಸೆಯು ಸೂಕ್ತ ವಿಕೇಂದ್ರಿಕೃತ ಯೋಜನೆಯಡಿ ಬರುವುದಿಲ್ಲ ಹಾಗೂ ಕೇಂದ್ರದ ನಿಧಿಯಿಂದ ವೆಚ್ಚ ಮಾಡುವ ಬಗ್ಗೆಯೂ ಖಾತರಿಯನ್ನು ಕೊಡುವುದಿಲ್ಲ. ಹೊಸ ಕಾಯ್ದೆಯಡಿ ಕೇಂದ್ರ ಸರ್ಕಾರದ ಹಣಕಾಸಿನ ಜವಾಬ್ದಾರಿಗೆ ಹೊಸ ಮಿತಿಯನ್ನು ಅಳವಡಿಸಲಾಗಿದ್ದು, ರಾಜ್ಯದ ಅಧಿಸೂಚಿತ ಪ್ರದೇಶಗಳಲ್ಲಿ ಮಾತ್ರ ಜಾರಿ ಮಾಡಲಾಗುತ್ತದೆ. ಆ ಅಧಿಸೂಚಿತ ಪ್ರದೇಶಗಳಿಗೆ ವೆಚ್ಚವಾಗುವ ಮೊತ್ತದಲ್ಲಿ ಶೇ 60ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ಒದಗಿಸಲಿದೆ. ಇದರಿಂದ 125 ಕೆಲಸದ ದಿನಗಳಿಗೆ ಕಾನೂನಿನ ಖಾತರಿ ಸಿಗುವುದಿಲ್ಲ. ಇದು ಉದ್ಯೋಗ ಖಾತರಿ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತದೆ. ಪೂರಕ ಬೇಡಿಕೆಯಿಲ್ಲ ಎಂಬ ಕಾರಣಕ್ಕೆ ಹಲವಾರು ಗ್ರಾಮ ಪಂಚಾಯಿತಿಗಳು ನಿಧಿಯ ಕೊರತೆಯನ್ನು ಎದುರಿಸಬೇಕಾಗುತ್ತದೆ.
ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ @narendramodi ಅವರಿಗೆ ನಾನು ಬರೆದಿರುವ ಪತ್ರದ ಕನ್ನಡ ಸಾರಾಂಶ ಹೀಗಿದೆ;
— Siddaramaiah (@siddaramaiah) December 30, 2025
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ,
ವಿಕಸಿತ ಭಾರತ–ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ), (VB-G RamG) ಕಾಯ್ದೆಯನ್ನು ಜಾರಿಗೊಳಿಸುವ ಹಾಗೂ ಚಾಲ್ತಿಯಲ್ಲಿದ್ದ… pic.twitter.com/FkC7pP44iy
ಇದಲ್ಲದೆ, ಹೊಸ ಕಾಯ್ದೆಯ ಪ್ರಕಾರ ಕೆಲವು ನಿಯಮಿತ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಪ್ರತಿ ವರ್ಷ ಎಷ್ಟು ಹಣವನ್ನು ಬಿಡುಗಡೆ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ. ಆ ಮಾನದಂಡಗಳಿಗೆ ಯಾವುದೇ ಕಾನೂನಿನ ರೂಪವನ್ನು ಕೊಟ್ಟಿಲ್ಲ. ಅದನ್ನು ಯಾವುದೇ ಸಮಯದಲ್ಲಿ ಬದಲಿಸಬಹುದಾಗಿದೆ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸದೆ ಆ ನಿಯಮಗಳನ್ನು ಅಂತಿಮಗೊಳಿಸಿದರೆ ಪ್ರತಿ ರಾಜ್ಯಗಳಲ್ಲಿರುವ ವಿವಿಧ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು, ಅದರಲ್ಲೂ ಗ್ರಾಮೀಣ ಪ್ರದೇಶಗಳ ಬೇಡಿಕೆಗಳನ್ನು ಗುರುತಿಸಲು ವಿಫಲವಾಗಬಹುದು.
ಇದರ ಪರಿಣಾಮ ಬೇಡಿಕೆ ಆಧಾರಿತ ಕ್ರಮವು ನೀಡಿಕೆ ಆಧಾರಿತ ಕ್ರಮವಾಗಿ ಬದಲಾಗಲಿದೆ. ಮೇಲ್ಮಟ್ಟದಿಂದ ತಳಮಟ್ಟದ ವ್ಯವಸ್ಥೆಯಾಗಲಿದೆ. ಇದುವರೆಗೆ ಆಯಾ ಗ್ರಾಮಗಳ ಬೇಡಿಕೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಕಾರ್ಮಿಕರ ಮುಂಗಡ ಪತ್ರವನ್ನು ತಯಾರಿಸುವುದು ಹಾಗೂ ಕೆಲಸ ಹಂಚಿಕೆ ಮಾಡುವುದು ಚಾಲ್ತಿಯಲ್ಲಿತ್ತು. ಇದಕ್ಕಾಗಿ ಪಿಎಂ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಅನ್ನು ಅನುಸರಿಸಬೇಕೆಂದಿರಲಿಲ್ಲ. ಆದರೆ ಹೊಸ ಕಾಯ್ದೆಯು ನರೇಗಾದ ಇಚ್ಛಾಶಕ್ತಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನದ 73ನೇ ತಿದ್ದುಪಡಿಯಲ್ಲಿರುವ ವಿಕೇಂದ್ರೀಕರಣ ದೃಷ್ಟಿಕೋನವನ್ನು ದುರ್ಬಲಗೊಳಿಸಲಿದೆ.
ಜೊತೆಯಲ್ಲಿ, ವೆಚ್ಚ ಹಂಚಿಕೆ ಮಾದರಿಯಲ್ಲಿನ ಬದಲಾವಣೆಯು ಇನ್ನೊಂದು ಆತಂಕಕಾರಿ ವಿಷಯವಾಗಿದೆ. ಪ್ರಸ್ತುತ ಮನರೇಗಾ (MGNREGA) ನಿಯಮಗಳಡಿ ಮುಖ್ಯವಾಹಿನಿಯ ರಾಜ್ಯಗಳು ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುಪಾತ ಕ್ರಮವಾಗಿ 90:10 ಮಾದರಿಯನ್ನು ಅನುಸರಿಸುತ್ತಿವೆ. ಹೊಸ ಕಾಯ್ದೆಯು ಇದನ್ನು 60:40ರ ಅನುಪಾತಕ್ಕೆ ಬದಲಾಯಿಸುತ್ತದೆ, ಇದು ಸಂವಿಧಾನಾತ್ಮಕ ಖಾತರಿಯನ್ನು ಸಾಮಾನ್ಯ ಕಾರ್ಯಕ್ರಮವಾಗಿ ಪರಿವರ್ತಿಸುತ್ತದೆ ಮತ್ತು ವಿಶೇಷವಾಗಿ ರಾಜ್ಯಗಳು ಜಿಎಸ್‌ಟಿ ಪರಿಹಾರದ ಕೊರತೆ ಮತ್ತು ಹಣಕಾಸು ಹಂಚಿಕೆಯಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದು, ಆರ್ಥಿಕ ಒತ್ತಡದಲ್ಲಿರುವಾಗ ರಾಜ್ಯಗಳ ಹಣಕಾಸಿನ ಮೇಲೆ ಇದು ಹೆಚ್ಚುವರಿ ಹೊರೆಯನ್ನು ಹೇರುತ್ತದೆ. ರಾಜ್ಯ ಸರ್ಕಾರಗಳೊಂದಿಗೆ ಸೂಕ್ತ ಸಮಾಲೋಚನೆಯಿಲ್ಲದೆ ಈ ಬದಲಾವಣೆಯನ್ನು ತರುತ್ತಿರುವುದು ಸ್ಪಷ್ಟವಾಗುತ್ತಿದೆ.
ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆಯನ್ನು ಮೀರಿ ಭರಿಸಬೇಕಾದ ಯಾವುದೇ ವೆಚ್ಚವನ್ನು ಕೇಂದ್ರ ಸರ್ಕಾರವು ನಿರ್ದೇಶಿಸಿದ ಕ್ರಮಗಳ ಪ್ರಕಾರ ರಾಜ್ಯಗಳೇ ಹೊರಬೇಕು ಎಂದು ಹೇಳುತ್ತದೆ. ಇದು ಕೇಂದ್ರವು ನಿಗದಿಪಡಿಸಿದ ಮಿತಿಯನ್ನು ಮೀರಿದ ಬೇಡಿಕೆಗೆ 100% ಜವಾಬ್ದಾರಿಯನ್ನು ರಾಜ್ಯಗಳು ಹೊರುವಂತೆ ಮಾಡಬಹುದು. ರಾಜ್ಯವು ನಿಗದಿತ ಅಥವಾ ಅದನ್ನು ಮೀರಿದ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ, ಜನರ ಅರ್ಹ ಕೂಲಿ ಅವಧಿಯ ಹಕ್ಕನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಇದು ಬೇಡಿಕೆ ಇರುವ ಕಡೆಗಳಲ್ಲಿ ಅನುದಾನ ನೀಡಲೇಬೇಕು ಎಂಬ ಮೂಲ ಆಶಯಕ್ಕೆ ವಿರುದ್ಧವಾಗಿದೆ.
ಈ ಕಾಯ್ದೆಯು ಬಿತ್ತನೆ ಮತ್ತು ಕೊಯ್ಲು ಹೆಚ್ಚಾಗಿ ನಡೆಯುವ ಸಮಯದಲ್ಲಿ ಒಟ್ಟು 60 ದಿನಗಳ ಅವಧಿ ಕಾಮಗಾರಿಗಳನ್ನು ನಡೆಸದಿರುವ ಬಗ್ಗೆ ಮುಂಚಿತವಾಗಿ ಅಧಿಸೂಚಿಸಬೇಕು ಎಂದು ಆದೇಶಿಸುತ್ತದೆ. ಕೃಷಿ ಚಟುವಟಿಕೆಗಳು ಆ ಸಮಯದಲ್ಲಿ ಹೆಚ್ಚಾಗಬಹುದಾದರೂ, ಇಂತಹ ಒಂದು ಸಮಗ್ರ ನಿರ್ಬಂಧವು ಇನ್ನೂ ಕೂಲಿ ಉದ್ಯೋಗದ ಅಗತ್ಯವಿರುವವರ ಹಕ್ಕನ್ನು ಕಸಿಯುತ್ತದೆ, ವಿಶೇಷವಾಗಿ ಆದಿವಾಸಿ ಮತ್ತು ಅತಿ ಹಿಂದುಳಿದ ಸಮುದಾಯಗಳಂತಹ ದುರ್ಬಲ ಸಮುದಾಯಗಳು ಸಾಕಷ್ಟು ಕೃಷಿ ಕೆಲಸವನ್ನು ಪಡೆಯದೆ ಇರಬಹುದು. ಈ ನಿಬಂಧನೆಯು ಕೆಲಸದ ಅವಧಿಯನ್ನು ಕಡಿಮೆ ಮಾಡುವುದರಿಂದ ಕುಟುಂಬಗಳ ಸಂಪಾದನೆ ಕ್ಷೀಣಿಸುವ ಸ್ಥಿತಿಯನ್ನು ತಂದೊಡ್ಡುತ್ತದೆ, ಇದರಿಂದ ಅವರ ಜೀವನ ನಿರ್ವಹಣೆಯೂ ಕಷ್ಟವಾಗುತ್ತದೆ. ಪರಿಣಾಮವಾಗಿ ಜೀತ ಪದ್ಧತಿಗೆ ದಾರಿಯಾಗಬಹುದು, ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆಯಾಗಲಿದೆ ಹಾಗೂ ನಗರ ಪ್ರದೇಶಗಳತ್ತ ಕೂಲಿಕಾರ್ಮಿಕರ ವಲಸೆಯೂ ಹೆಚ್ಚಾಗಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ನಿಯಮಗಳು ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿದ್ದು, “ಕೆಲಸದ ಹಕ್ಕು” ಅನ್ನು “ಅನುಮತಿ ಸಿಕ್ಕರೆ ಮಾತ್ರ ಕೂಲಿ”ಗೆ ಬದಲಾಯಿಸುತ್ತದೆ; “ಗ್ರಾಮೀಣ ಪ್ರದೇಶಗಳಾದ್ಯಂತ ಕೆಲಸ” ಇಂದ “ಅನುಮತಿ ನೀಡಿದೆಡೆ ಮಾತ್ರ ಕೂಲಿ”ಗೆ; ಮತ್ತು “ವರ್ಷಪೂರ್ತಿ ಕೆಲಸ” ದಿಂದ “ಕೃಷಿ ಚಟುವಟಿಕೆಗಳ ಋತುವಿನಲ್ಲಿ ಕೆಲಸವಿಲ್ಲ” ಎಂದು ಬದಲಾಯಿಸುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಸಂಪನ್ಮೂಲ ಸೃಷ್ಟಿಯ ಆಶಯವನ್ನು ಬದಲಾಯಿಸಿ, ಗುತ್ತಿಗೆದಾರರ ಕೇಂದ್ರಿತ ಮಾದರಿಯಾಗಿಸಲು ದಾರಿ ಮಾಡಿಕೊಡುವ ಅಪಾಯವಿದೆ.
ಹೊಸ ಕಾಯ್ದೆಯಲ್ಲಿ ಹೆಚ್ಚಿನ ತಾಂತ್ರಿಕ ಹಸ್ತಕ್ಷೇಪಕ್ಕೆ ಅವಕಾಶವಿದ್ದು, ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಮತ್ತು ಡಿಜಿಟಲ್ ಸೌಲಭ್ಯವಿಲ್ಲದ ಗ್ರಾಮೀಣ ನಾಗರಿಕರನ್ನು, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಯೋಜನೆಯಿಂದ ದೂರ ಮಾಡಬಹುದು.
ವಿಬಿ-ಜಿ ರಾಮ್ ಜಿ ಕಾಯ್ದೆಯ ಜಾರಿಯು ಸಂವಿಧಾನದ 258 ಮತ್ತು 280ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ ಈ ವಿಧಿಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಹಣಕಾಸು ಚೌಕಟ್ಟು ವಿಧಿಸುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ, ಹಣಕಾಸು ಒಕ್ಕೂಟ, ಮತ್ತು ಸ್ಥಳೀಯ ಆಡಳಿತ ಬಲಗೊಳಿಸುವಿಕೆಗೆ ಮಹತ್ವ ನೀಡುತ್ತದೆ. ಆದರೆ ಕೇಂದ್ರ ಸರ್ಕಾರದ ಧೋರಣೆ ಸಹಕಾರಿ ಒಕ್ಕೂಟದ ಅಡಿಪಾಯಕ್ಕೆ ಅಪಾಯಕಾರಿಯಾಗಿದೆ.
ಉದ್ಯೋಗ ಖಾತ್ರಿ ಕಾನೂನು ಕೇವಲ ಒಂದು ಕಲ್ಯಾಣ ಕಾರ್ಯಕ್ರಮವಲ್ಲ; ಇದೊಂದು ಐತಿಹಾಸಿಕ, ವಿಶ್ವಮಾನ್ಯತೆ ಪಡೆದ, ಹಕ್ಕು-ಆಧಾರಿತ ಶಾಸನವಾಗಿದೆ. ಇದು ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯ ಕಲ್ಪನೆಗಳ ಪ್ರತೀಕವಾದ ಮಹಾತ್ಮ ಗಾಂಧೀಜಿಯ ಹೆಸರನ್ನು ಹೊಂದಿರುವುದು ಅರ್ಥಪೂರ್ಣವಾಗಿದೆ. ಆದರೆ ಪ್ರಸ್ತುತ ಕಾನೂನಿನಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ದುರದೃಷ್ಟಕರವಾಗಿದ್ದು, ಹೊಸ ಕಾಯ್ದೆಯ ನೈತಿಕ ಬಲವನ್ನೇ ದುರ್ಬಲಗೊಳಿಸಿದೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನವನ್ನು ತಡೆಹಿಡಿಯಲು, ಜೀವನೋಪಾಯದ ಹಕ್ಕನ್ನು ಬಲಪಡಿಸಲು ಮತ್ತು ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೊಂದಿಗಿನ ಸಮಾಲೋಚನೆಗಳನ್ನು ನಡೆಸುವ ನಿಟ್ಟಿನಲ್ಲಿ ತಾವು ವೈಯಕ್ತಿಕವಾಗಿ ಮುಂದಾಗಬೇಕು ಎಂದು ಕೋರುತ್ತೇನೆ ಎಂದು ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.