Ajit Pawar Death: ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?; ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಜಿತ್ ಪವಾರ್ ಅವರ ಸೋದರಳಿಯ ರೋಹಿತ್ ಪವಾರ್ ದೂರು ಸಲ್ಲಿಸಿದ್ದಾರೆ. ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ಹೀಗಾಗಿ ಅಜಿತ್ ಪವಾರ್ ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ರೋಹಿತ್ ಪವಾರ್ ಕೋರಿದ್ದಾರೆ.
ಮಹಾರಾಷ್ಟ್ರ ಮಾಜಿ ಡಿಸಿಎಂ ಅಜಿತ್ ಪವಾರ್. -
ಬೆಂಗಳೂರು: ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಜನವರಿ 28ರಂದು ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ (Ajit Pawar) ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಜಿತ್ ಪವಾರ್ ಅವರ ಸೋದರಳಿಯ ಹಾಗೂ ಶಾಸಕ ರೋಹಿತ್ ಪವಾರ್ ದೂರು ಸಲ್ಲಿಸಿದ್ದು, ಈ ಪ್ರಕರಣ ಆಕಸ್ಮಿಕ ಸಾವಲ್ಲ, ವ್ಯವಸ್ಥಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ವಿಮಾನದ ಸುರಕ್ಷಿತ ಮಿತಿ 5,000 ಗಂಟೆಗಳಿದ್ದರೂ, ಸುಮಾರು 8,000 ಗಂಟೆ ಹಾರಾಟ ನಡೆಸಿದ್ದ ದಾಖಲೆಗಳನ್ನು ತಿದ್ದಿ ವಾಣಿಜ್ಯ ಬಳಕೆಗೆ ಬಳಸಲಾಗಿತ್ತು.

ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದರು. ಇಂತಹ ಇತಿಹಾಸವಿದ್ದ ವ್ಯಕ್ತಿಯನ್ನು ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಯಾಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊದಲು ನಿಗದಿಯಾಗಿದ್ದ ಪೈಲಟ್‌ಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಿ, ಕಪೂರ್ ಮತ್ತು ತಂಡವನ್ನು ನೇಮಿಸಲಾಗಿತ್ತು. ಇದು ಉದ್ದೇಶಪೂರ್ವಕ ಸಂಚಿನ ಭಾಗವೇ ಎಂಬ ಅನುಮಾನ ಮೂಡಿಸಿದೆ.
ಅಜಿತ್ ಪವಾರ್ ಅವರು ರಸ್ತೆ ಮೂಲಕ ಹೋಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅದು ವಿಮಾನ ಪ್ರಯಾಣವಾಗಿ ಬದಲಾಗಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ತನಿಖೆ ನಡೆಯಬೇಕಿದೆ. ವಿಮಾನ ಪತನವಾಗುವ ಮುನ್ನ ಕೋ-ಪೈಲಟ್ "ಓ ಶಿಟ್” ಎಂದು ಕಿರುಚಿದ್ದಾರೆ. ಆದರೆ ಮುಖ್ಯ ಪೈಲಟ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೈಲಟ್ ಅಮಲಿನಲ್ಲಿದ್ದರೇ ಅಥವಾ ಉದ್ದೇಶಪೂರ್ವಕವಾಗಿ ಸುಮ್ಮನಿದ್ದರೇ ಎಂಬ ಸಂಶಯ ವ್ಯಕ್ತವಾಗಿದೆ.
ಬಾರಾಮತಿಯಲ್ಲಿ ದಟ್ಟ ಮಂಜು ಕವಿದಿದ್ದು, ಕನಿಷ್ಠ 5 ಕಿ.ಮೀ ವಿಸಿಬಿಲಿಟಿ ಇಲ್ಲದಿದ್ದರೂ ಲ್ಯಾಂಡಿಂಗ್‌ಗೆ ಅವಕಾಶ ನೀಡಿದ್ದು ಯಾರು? ಟೇಬಲ್‌ಟಾಪ್ ರನ್‌ವೇ ಆಗಿದ್ದರೂ ಅಪಾಯಕಾರಿ ನಿರ್ಧಾರ ಕೈಗೊಳ್ಳಲು ಕಾರಣವೇನು? ಡಿಜಿಸಿಎ ತನಿಖೆಯಲ್ಲಿ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಎಂದು ತಿಳಿದಿದ್ದರೂ ವಿಎಸ್ಆರ್ ವೆಂಚರ್ಸ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸಿದೆ ಎಂದು ಆರೋಪಗಳು ಕೇಳಿ ಬಂದಿದೆ. ಈ ಸಂಬಂಧ ರೋಹಿತ್ ಪವಾರ್ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿದೆ.
ಏನಿದು ಜೀರೋ ಎಫ್‌ಐಆರ್?
ಜೀರೋ ಎಫ್‌ಐಆರ್ (Zero FIR) ಎಂದರೆ ಅಪರಾಧ ನಡೆದ ಸ್ಥಳದ ವ್ಯಾಪ್ತಿಯನ್ನು (jurisdiction) ಲೆಕ್ಕಿಸದೆ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಸೌಲಭ್ಯವಾಗಿದೆ. ಈ ಎಫ್‌ಐಆರ್‌ನಲ್ಲಿ ಆರಂಭಿಕ ಸಂಖ್ಯೆ ಇರುವುದಿಲ್ಲ. ನಂತರ ತನಿಖೆಗೆ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲಾಗುತ್ತದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು; ಭಾರತದ ಮೇಲೆ ಬೀರುತ್ತಿರುವ ಪರಿಣಾಮದ ಕುರಿತು ಮೋದಿ ಹೇಳಿದ್ದೇನು?
ಶೂನ್ಯ ಎಫ್‌ಐಆರ್ ದಾಖಲಿಸುವ ವಿಧಾನವು ಸಾಮಾನ್ಯ ಎಫ್‌ಐಆರ್‌ನಂತೆಯೇ ಇರುತ್ತದೆ. ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಎಫ್‌ಐಆರ್ ಸಂಖ್ಯೆಯನ್ನು ನೀಡುವ ಬದಲು, ಪೊಲೀಸರು ಎಫ್‌ಐಆರ್ ಅನ್ನು '0' ಎಂದು ನಮೂದು ಮಾಡುತ್ತಾರೆ. ಅದನ್ನು ಅಧಿಕಾರ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರ್ಗಾಯಿಸಿದ ನಂತರ, ಅದಕ್ಕೆ ಒಂದು ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ.