ಶಿಕ್ಷಕರಿಂದ ಕಿರುಕುಳ; ಬಿಲ್ಡಿಂಗ್‌ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ 7 ನೇ ತರಗತಿ ವಿದ್ಯಾರ್ಥಿ!
ಶಿಕ್ಷಕರು ನೀಡಿದ ಅತಿಯಾದ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ತಾಳಲಾರದೆ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮರಿಯಪ್ಪನಪಾಳ್ಯದಲ್ಲಿರುವ 13 ವರ್ಷದ ವಿದ್ಯಾರ್ಥಿ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಸಂಗ್ರಹ ಚಿತ್ರ -
ಬೆಂಗಳೂರು: ಶಿಕ್ಷಕರು ನೀಡಿದ ಅತಿಯಾದ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು (Harassment) ತಾಳಲಾರದೆ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಗರದ (Bengaluru) ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮರಿಯಪ್ಪನಪಾಳ್ಯದಲ್ಲಿರುವ 13 ವರ್ಷದ ವಿದ್ಯಾರ್ಥಿ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಶಿಕ್ಷಕರ ಈ ಕ್ರೂರ ವರ್ತನೆ ಮತ್ತು ಶಾಲಾ ಮಂಡಳಿಯ ನಿರಂತರ ಟಾರ್ಚರ್‌ನಿಂದಾಗಿ ವಿದ್ಯಾರ್ಥಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಮನನೊಂದ ವಿದ್ಯಾರ್ಥಿ ಮರಿಯಪ್ಪನಪಾಳ್ಯದಲ್ಲಿರುವ ತನ್ನ ಮನೆಯ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಬಿಲ್ಡಿಂಗ್‌ನಿಂದ ಬಿದ್ದ ರಭಸಕ್ಕೆ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದು, ತಕ್ಷಣವೇ ಆತನನ್ನು ನಾಯಂಡಹಳ್ಳಿಯ ನೇಟಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ.
ವಿದ್ಯಾರ್ಥಿಯ ತಂದೆ ಮಹೇಶ್ ಕುಮಾರ್ ಕಿರಾಣಿ ಅಂಗಡಿ ನಡೆಸುತ್ತಿದ್ದು, ತಾಯಿ ಕುಸುಮ ಕೂಡ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಮಗನಿಗೆ ಆಗಿರುವ ಸ್ಥಿತಿಯನ್ನು ಕಂಡು ಪೋಷಕರು ಹಾಗೂ ಸಂಬಂಧಿಕರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಯ ಆತ್ಮಹತ್ಯೆ ಯತ್ನಕ್ಕೆ ಶಾಲೆಯ ಕಿರುಕುಳವೇ ನಿಖರ ಕಾರಣವೇ? ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಯ ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕನ್ನಡ ಶಿಕ್ಷಕನಿಗೆ ಪೋಷಕರು ಶಾಲೆಗೆ ನುಗ್ಗಿ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನನ್ನು ತಕ್ಷಣವೇ ಅಮಾನತು ಮಾಡುವಂತೆ ಡಿಡಿಪಿಐ ಆದೇಶಿಸಿದ್ದಾರೆ.
ಚಿಕ್ಕೋಡಿಯ ಪ್ರೌಢಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಕನ್ನಡ ಶಿಕ್ಷಕ ಗಂಡು ಮಕ್ಕಳಿಗೆ ಕಿರುಕುಳ ನೀಡಿದ ಆರೋಪಿ. 10ನೇ ತರಗತಿಯ ಕನ್ನಡ ವಿಷಯದಲ್ಲಿ ಪಾಸ್ ಮಾಡುವುದಾಗಿ ಆಮಿಷವೊಡ್ಡಿ, ಶಾಲೆಯ ಕೊಠಡಿ ಹಾಗೂ ಶೌಚಾಲಯಕ್ಕೆ ಕರೆದೊಯ್ದು 5ಕ್ಕೂ ಹೆಚ್ಚು ಗಂಡು ವಿದ್ಯಾರ್ಥಿಗಳಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಲಾಗಿತ್ತು.