ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget 2026: ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ರೇಷನ್‌ ಬದಲಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ

Women And Child Development Department: ಮಧ್ಯಾಹ್ನದ ಬಿಸಿಯೂಟದಿಂದ ಗರ್ಭಿಣಿ, ಬಾಣಂತಿಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟಲು ಸಹಕಾರಿಯಾಗಿತ್ತು. ನಂತರ ಬಿಸಿಯೂಟ ಬದಲಾಗಿ ಮನೆಗೆ ರೇಷನ್‌ ನೀಡಲು ಒತ್ತು ನೀಡಲಾಗಿತ್ತು. ಆದರೆ, ಇದೀಗ ಈ ಹಿಂದಿನಂತೆ ಅಂಗನವಾಡಿಗಳಲ್ಲೇ ಪ್ರತಿದಿನ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯನ್ನು ಮರುಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ವ್ಯವಸ್ಥೆ

ಸಿಎಂ ಸಿದ್ದರಾಮಯ್ಯ. -

Prabhakara R
Prabhakara R Mar 6, 2026 1:47 PM

ಬೆಂಗಳೂರು: ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪ್ರಸ್ತುತ ಮಧ್ಯಾಹ್ನದ ಬಿಸಿಯೂಟದ ಬದಲಾಗಿ Take Home Rationಗೆ ಒತ್ತು ನೀಡಲಾಗಿದೆ. ಆದರೆ, ಇನ್ನುಮುಂದೆ ಯೋಜನೆಯಡಿ ಫಲಾನುಭವಿಗಳಿಗೆ ಆಹಾರ ಸಾಮಗ್ರಿ ನೀಡುವ ಬದಲು ಪ್ರತಿದಿನ ಮಧ್ಯಾಹ್ನದ ಬಿಸಿಯೂಟ (midday meal) ನೀಡುವ ವ್ಯವಸ್ಥೆಯನ್ನೇ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಬಜೆಟ್‌ (Karnataka Budget 2026) ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಈ ಮೊದಲು ಮಧ್ಯಾಹ್ನದ ಬಿಸಿಯೂಟ ಯೋಜನೆಯು ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟಲು ಸಹಕಾರಿಯಾಗಿತ್ತು. ನಂತರದಲ್ಲಿ, ಮಧ್ಯಾಹ್ನದ ಬಿಸಿಯೂಟದ ಬದಲಾಗಿ Take Home Ration ಗೆ ಒತ್ತು ನೀಡಲಾಗಿ, ಯೋಜನೆಯ ಮೂಲ ಉದ್ದೇಶ ಹಳಿತಪ್ಪಿದಂತಾಗಿರುತ್ತದೆ. ಇದನ್ನು ಮನಗಂಡು ಎಲ್ಲಾ ಫಲಾನುಭವಿಗಳಿಗೂ ಹಿಂದಿನಂತೆ ಅಂಗನವಾಡಿ ಕೇಂದ್ರಗಳಲ್ಲಿಯೇ ಪ್ರತಿದಿನ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯನ್ನು ಮರುಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಸಿಕ್ಕ ಕೊಡುಗೆಗಳು

  • ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೂ ಎಲ್ಲಾ ಅರ್ಹ ಫಲಾನುಭವಿಗಳಿಗೆ ಒಟ್ಟು 62,345 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ. ಈ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ಯಶಸ್ವಿಯಾಗಿ ಧನಸಹಾಯ ಪಾವತಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯಡಿ 28,608 ಕೋಟಿ ರೂ.ಗಳನ್ನು ಮೀಸಲಿರಿಸಿದೆ.
  • ಮಹಿಳೆಯರು ಹಾಗೂ ಮಕ್ಕಳಿಗೆ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ʻಅಕ್ಕಪಡೆ ಯೋಜನೆʼಯನ್ನು ಗೃಹ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
  • ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 1,39,844 ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕಿಯರಿಗೆ ಹೆಚ್ಚುವರಿಯಾಗಿ ಒಂದು ಜೊತೆ ಸಮವಸ್ತ್ರವನ್ನು ವಿತರಿಸಲಾಗುವುದು.
  • ಮಾಜಿ ದೇವದಾಸಿಯರ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅರಿಯಲು, ಪುನರ್ವಸತಿ ಕಲ್ಪಿಸಲು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಅವರ ನಿಖರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
  • ಮಾಜಿ ದೇವದಾಸಿಯರ ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗ ಹಾಗೂ ವೈಯಕ್ತಿಕ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯ ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮವನ್ನು ರೂಪಿಸಿ ಜಾರಿಗೆ ತರಲು ಐದು ಕೋಟಿ ರೂ.ಗಳನ್ನು ಮೀಸಲಿಡಲಾಗುವುದು.
  • ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು, ಚೇತನ ಹಾಗೂ ಧನಶ್ರೀ ಯೋಜನೆಯ ಫಲಾನುಭವಿಗಳಿಗೆ ಆದಾಯೋತ್ಪನ್ನ ಚಟುವಟಿಕೆಗಳಿಗಾಗಿ ಪ್ರಸಕ್ತ ನೀಡಲಾಗುತ್ತಿರುವ 30,000 ರೂ.ಗಳ ಪ್ರೋತ್ಸಾಹಧನವನ್ನು 45,000 ರೂ.ಗಳಿಗೆ ಹೆಚ್ಚಿಸಲಾಗುವುದು.
  • ಮಾದಕ ವ್ಯಸನಕ್ಕೆ ಒಳಗಾದ 18 ವರ್ಷದೊಳಗಿನ ಮಕ್ಕಳಿಗಾಗಿ ಪ್ರಾಯೋಗಿಕವಾಗಿ ಬೆಂಗಳೂರಿನ ನಿಮ್ಹಾನ್ಸ್‌ ಹಾಗೂ ಧಾರವಾಡದ ಡಿಮ್ಹಾನ್ಸ್‌ ಸಂಸ್ಥೆಗಳ ಸಹಯೋಗದೊಂದಿಗೆ ʻಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರʼಗಳನ್ನು ಪ್ರಾರಂಭಿಸಲಾಗುವುದು.
  • ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣವನ್ನು (ECCE) ಬಲಪಡಿಸಲು ಈ ಭಾಗದ ಜಿಲ್ಲೆಗಳಲ್ಲಿ ಲಭ್ಯವಿರುವ 1,668 ನಿವೇಶನಗಳಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣವನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ KKRDB ಅನುದಾನದಿಂದ ಕೈಗೊಳ್ಳಲಾಗುವುದು.
  • 2026–27ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿಯಾಗಿ 20 ಹೊಸ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು.
  • ಅಂಗನವಾಡಿ ಕೇಂದ್ರಗಳ ಸಮಗ್ರ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.
  • 2026-27ನೇ ಸಾಲಿನಲ್ಲಿ ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 63,135 ಕೋಟಿ ರೂ. ಮತ್ತು ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 94,663 ಕೋಟಿ ರೂ. ಒದಗಿಸಲಾಗಿದೆ.

Karnataka Budget 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಸಿಎಂ ಘೋಷಣೆ; ಹವ್ಯಕ ಮಹಾಸಭಾ, ವಿಶ್ವೇಶ್ವರ ಭಟ್‌ ಸ್ವಾಗತ