‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದಲ್ಲಿ ಖಾಕಿ ತೊಟ್ಟ ನಟ ಧರ್ಮ ಕೀರ್ತಿರಾಜ್; ಕುತೂಹಲ ಹುಟ್ಟಿಸಿದ ಟ್ರೇಲರ್!
ಧರ್ಮ ಕೀರ್ತಿರಾಜ್ ನಟನೆಯ 'ಅಮರಾವತಿ ಪೊಲೀಸ್ ಸ್ಟೇಷನ್' ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಕುತೂಹಲ ಮೂಡಿಸಿದೆ. ಪೊಲೀಸ್ ಅಧಿಕಾರಿಯಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದು, ಗುರುರಾಜ್ ಜಗ್ಗೇಶ್ ಖಳನಾಯಕನಾಗಿ ನಟಿಸಿದ್ದಾರೆ. ರೈತರ ಸಂಕಷ್ಟ ಹಾಗೂ ಕಲಬೆರಕೆ ಆಹಾರದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.
-
ನಟ ಧರ್ಮ ಕೀರ್ತಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಸ್ಪೆನ್ಸ್ ಹಾಗೂ ಕ್ರೈಮ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಅಧಿಕೃತ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಹಾಗೂ ಹಿರಿಯ ಪ್ರಚಾರಕರ್ತ ನಾಗೇಂದ್ರ ಅವರು ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ನಟ ಗುರುರಾಜ್ ಜಗ್ಗೇಶ್ ವಿಶೇಷ ಹಾಗೂ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕಡಲ ತೀರದ ಕಾಲ್ಪನಿಕ ಊರಾದ ಅಮರಾವತಿಯಲ್ಲಿ ನಡೆಯುವ ನಿಗೂಢ ಕಣ್ಮರೆ, ಕೊಲೆಗಳು ಹಾಗೂ ಅಚ್ಚರಿಯ ಘಟನೆಗಳ ಸುತ್ತ ಇಡೀ ಕಥೆ ಸಾಗಲಿದೆ. ಊರಿನ ಗೌಡ ಹಾಗೂ ಆತನ ಕಣ್ಮರೆ ಪ್ರಕರಣದ ತನಿಖೆಗೆ ಬರುವ ಪೊಲೀಸ್ ಅಧಿಕಾರಿ ಇಬ್ಬರೂ ಹಠಾತ್ತನೆ ನಾಪತ್ತೆಯಾಗುತ್ತಾರೆ. ಈ ಎಲ್ಲ ಘಟನೆಗಳ ಹಿಂದಿನ ರಹಸ್ಯವನ್ನು ಪತ್ತೆಹಚ್ಚಲು ಅಮರಾವತಿಗೆ ಬರುವ ಅಮಾನತುಗೊಂಡ ಮಫ್ತಿ ಪೊಲೀಸ್ ಅಧಿಕಾರಿಯ ಸುತ್ತ ಚಿತ್ರದ ಕಥಾಹಂದರ ಹೆಣೆಯಲಾಗಿದೆ.
Bengaluru in Movie: ಧರ್ಮ ಕೀರ್ತಿರಾಜ್ಗೆ ಜೋಡಿಯಾದ ʻಬಿಗ್ ಬಾಸ್ʼ ಖ್ಯಾತಿಯ ಅನುಷಾ ರೈ - ರಿಷಾ ಗೌಡ
ನಂದು ಡಾಲಿ ಥರದ ಪಾತ್ರ ಎಂದ ಗುರು
ಈ ಚಿತ್ರದಲ್ಲಿ ಮಫ್ತಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಧರ್ಮ ಕೀರ್ತಿರಾಜ್ ಮಾತನಾಡಿ, "ನಿರ್ದೇಶಕ ಪುನೀತ್ ಸಿನಿಮಾ ಉತ್ತಮವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಕೆಲವೊಂದು ದೃಶ್ಯಗಳನ್ನು ಮರುಚಿತ್ರೀಕರಣ ಮಾಡಿದ್ದಾರೆ. ಚಿತ್ರದಲ್ಲಿ ಹೆಸರಾಂತ ಖಳನಟರ ದೊಡ್ಡ ದಂಡೇ ಇದ್ದು, ರೋಣದ ಬಕ್ಕೇಶ್ ಅತ್ಯುತ್ತಮ ಸಂಗೀತ ನೀಡಿದ್ದಾರೆ" ಎಂದರು. ನಟ ಗುರುರಾಜ್ ಜಗ್ಗೇಶ್ ಮಾತನಾಡಿ, "ನಿರ್ದೇಶಕರು ಅಂದುಕೊಂಡಂತೆ ಸಿನಿಮಾ ತರಲು ಸಾಕಷ್ಟು ಶ್ರಮವಹಿಸಿದ್ದಾರೆ. ಚಿತ್ರದಲ್ಲಿ ನನ್ನದು ‘ಟಗರು’ ಚಿತ್ರದ ಡಾಲಿ ಮಾದರಿಯ, ಕ್ರೂರಿ ಸ್ವಭಾವದ ಸವಾಲಿನ ನೆಗೆಟಿವ್ ಪಾತ್ರ" ಎಂದು ವಿವರಿಸಿದರು.
ಪೊಲೀಸ್ ಪಾತ್ರದಲ್ಲಿ ಧರ್ಮ
ಚಿತ್ರದ ನಾಯಕಿ, ತೆಲುಗು ಮೂಲದ ವೇದ್ವಿಕಾ ಅವರಿಗೆ ಇದು ಮೊದಲ ಕನ್ನಡ ಚಿತ್ರವಾಗಿದ್ದು, ಇಡೀ ಚಿತ್ರ ಹಳ್ಳಿ ಹಿನ್ನೆಲೆಯಲ್ಲಿ ಸಾಗಲಿದೆ ಹಾಗೂ ಮನಾಲಿಯಲ್ಲಿ ಚಿತ್ರೀಕರಿಸಲಾದ ಹಾಡು ಆಕರ್ಷಕವಾಗಿ ಮೂಡಿಬಂದಿದೆ ಎಂದು ಸಂತಸ ಹಂಚಿಕೊಂಡರು. ಹಿರಿಯ ನಟ ಧರ್ಮ ಮಾತನಾಡಿ, ತಾವು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಆ್ಯಕ್ಷನ್ ಸನ್ನಿವೇಶಗಳು ಬಹಳ ವಿಶೇಷವಾಗಿವೆ ಎಂದು ತಿಳಿಸಿದರು.
"ಚಿತ್ರದಲ್ಲಿ ರೈತರ ಸಮಸ್ಯೆಗಳು ಹಾಗೂ ಕಲಬೆರಕೆ ಆಹಾರದಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಮಾಳವಿಕಾ ಅವಿನಾಶ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ಟು 29 ಪ್ರಮುಖ ಕಲಾವಿದರಿದ್ದು, ಡಿಸೆಂಬರ್ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದೇವೆ" ಎಂದು ನಿರ್ದೇಶಕ ಪುನೀತ್ ಮಾಹಿತಿ ನೀಡಿದರು. ಖಳನಟರಾದ ಕಾಕ್ರೋಚ್ ಸುಧಿ ಹಾಗೂ ಡ್ರಾಗನ್ ಮಂಜು ಕೂಡ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಯಾರೆಲ್ಲಾ ನಟಿಸಿದ್ದಾರೆ?
ಯುವ ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಪವರ್ ಪಿಕ್ಚರ್ ಮತ್ತು ಎನ್. ಅನಿತಾ ಸುಕೇಂದ್ರ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕೆ.ಆರ್. ಪ್ರದೀಪ್ ಕಮಲಾಪುರ ಹಾಗೂ ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ. ತಾರಾಗಣದಲ್ಲಿ ಸಾಧು ಕೋಕಿಲ, ಮಾಳವಿಕಾ ಅವಿನಾಶ್, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ರೋಣದ ಬಕ್ಕೇಶ್ ಸಂಗೀತ ನೀಡಿದ್ದಾರೆ. ಗೌತಮ್ ಮಟ್ಟಿ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಹಾಗೂ ದೀಪು ಅವರ ಸಂಕಲನ ಈ ಚಿತ್ರಕ್ಕಿದೆ.