Karnataka SIR: ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 99.32 ಲಕ್ಷ ಮತದಾರರು ಡಿಲೀಟ್!
Karnataka Final Electoral Roll: ರಾಷ್ಟ್ರವ್ಯಾಪಿ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿರುವ ಎಸ್ಐಆರ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ರಾಜ್ಯದಲ್ಲಿ ಜೂನ್ 30ರಿಂದ ಅಧಿಕೃತವಾಗಿ ಆರಂಭಿಸಿತ್ತು. ಇದೀಗ ನಾಲ್ಕು ತಿಂಗಳ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಮುಕ್ತಾಯವಾಗಿದ್ದು, ಇಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ.
-
ಬೆಂಗಳೂರು: ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ. ಎಸ್ಐಆರ್ ಬಳಿಕ ರಾಜ್ಯದ ಅಂತಿಮ ಮತದಾರರ ಪಟ್ಟಿಯಲ್ಲಿ (Karnataka SIR) ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದು, 99.32 ಲಕ್ಷ ಮತದಾರರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ.
ರಾಜ್ಯದಲ್ಲಿ ಎಸ್ಐಆರ್ ಮುನ್ನಾ 5.54 ಕೋಟಿ ಮತದಾರರು ಇದ್ದರು. ಎಸ್ಐಆರ್ನ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.46 ಕೋಟಿಗೆ ಇಳಿಕೆಯಾಗಿತ್ತು. ಇದೀಗ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದಲ್ಲಿ 4.55 ಕೋಟಿ ಮತದಾರರು ಇದ್ದಾರೆ. ಆ ಮೂಲಕ ಎಸ್ಐಆರ್ ಮುಂಚೆ ಇದ್ದ ಮತದಾರರ ಸಂಖ್ಯೆಯಿಂದ ಸುಮಾರು 99.32 ಲಕ್ಷ ಮತದಾರರ ಕಡಿತವಾಗಿದೆ.
ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ತನ್ನ ವೆಬ್ಸೈಟ್ https://ceo.karnataka.gov.in/enನಲ್ಲಿ ಪ್ರಕಟಿಸಿದೆ.
ಮಹಿಳಾ ಮತದಾರರೇ ಹೆಚ್ಚು:
ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ರಾಜ್ಯದಲ್ಲಿ ಮಹಿಳಾ ಮತದಾರರು 2,29,12,355 ಮತದಾರರು ಇದ್ದರೆ, 2,25,40,493 ಪುರುಷ ಮತದಾರರು ಇದ್ದಾರೆ. 2,841 ಇತರೆ ಮತದಾರರು ಇದ್ದಾರೆ. ಸಾಗರೋತ್ತರ ಮತದಾರರ ಸಂಖ್ಯೆ 3,252 ಇದ್ದರೆ, 18-19 ವಯೋಮಾನದ 6,83,364 ಮತದಾರರು ಇದ್ದಾರೆ. ಇನ್ನು 85+ ವಯೋಮಾನದ 3,92,134 ಮತದಾರರು ಇದ್ದಾರೆ.
2002ರಲ್ಲಿ ರಾಜ್ಯದಲ್ಲಿ ಕೊನೆಯ ಬಾರಿ ಎಸ್ಐಆರ್ ಆಗಿದ್ದು, ಇದೀಗ 23 ವರ್ಷದ ಬಳಿಕ ರಾಜ್ಯದಲ್ಲಿ SIR ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ನಕಲಿ ಮತದಾರರನ್ನು ಗುರುತಿಸಲು, ಮರಣ ಹೊಂದಿದವರ ಅಥವಾ ಸ್ಥಳಾಂತರಗೊಂಡವರ, ಎರಡೆರಡು ಕಡೆ ಮತದಾನದ ಹಕ್ಕು ಹೊಂದಿರುವವರ ಹೆಸರುಗಳನ್ನು ತೆಗೆದುಹಾಕಲು ಮತ್ತು ಅರ್ಹ ಮತದಾರರ ವಿವರಗಳನ್ನು ದೃಢೀಕರಿಸುವ ಉದ್ದೇಶದೊಂದಿಗೆ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇಂದು ರಾಜ್ಯದಲ್ಲಿನ ಅರ್ಹ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ.
43.82 ಲಕ್ಷ ನೋಟಿಸ್
ಮತದಾರರ ಎಣಿಕೆ ನಮೂನೆಗಳಲ್ಲಿನ ವ್ಯತ್ಯಾಸಗಳ ಕುರಿತು 43.82 ಲಕ್ಷ ನೋಟಿಸ್ನೀಡಲಾಗಿದೆ. ಇನ್ನು ಮತದಾರರ ಪಟ್ಟಿಯಲ್ಲಿ ಹೊಸ ಮತದಾರರನ್ನು ಸೇರಿಸಲು ಚುನಾವಣಾ ಆಯೋಗವು 10.42 ಲಕ್ಷ ಫಾರ್ಮ್ 6 ಅರ್ಜಿಗಳನ್ನು ಸ್ವೀಕರಿಸಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿದ ನಂತರ, ಒಂದು ಕೋಟಿಗೂ ಹೆಚ್ಚು ಮತದಾರರನ್ನು ಗೈರುಹಾಜರಿ, ಸ್ಥಳಾಂತರಗೊಂಡ, ಸತ್ತ, ನಕಲಿ (ASDD) ಪಟ್ಟಿಗೆ ಸೇರಿಸಲಾಯಿತು. ಜೊತೆಗೆ, ಒಟ್ಟು 43.82 ಲಕ್ಷ ಮತದಾರರಿಗೆ ಅವರ SIR ಎಣಿಕೆ ನಮೂನೆಗಳಲ್ಲಿ 'ತಾರ್ಕಿಕ ವ್ಯತ್ಯಾಸಗಳು' ಇವೆ ಎಂದು ಉಲ್ಲೇಖಿಸಿ ನೋಟಿಸ್ಗಳನ್ನು ನೀಡಲಾಗಿದೆ.
10.42 ಲಕ್ಷ ಫಾರ್ಮ್-6 ಸ್ವೀಕಾರ
ಇಲ್ಲಿಯವರೆಗೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲು 10.42 ಲಕ್ಷ ಫಾರ್ಮ್ -6 ಅರ್ಜಿಗಳನ್ನು ಸ್ವೀಕರಿಸಿದೆ. ಮತದಾರರನ್ನು ಸಾಮೂಹಿಕವಾಗಿ ಅಳಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪದ ಬಗ್ಗೆ ಭಾರಿ ವಿವಾದವಿತ್ತು. ಕರ್ನಾಟಕದಲ್ಲಿ ಮತದಾರರನ್ನು ಅಳಿಸಲು ಕೋರಿ 50 ಲಕ್ಷ ಫಾರ್ಮ್ -7 ಅರ್ಜಿಗಳನ್ನು ಮುದ್ರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣಾ ಆಯೋಗವು ಒಟ್ಟು 2.28 ಲಕ್ಷ ಫಾರ್ಮ್ -7 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಫಾರ್ಮ್ -7 ಅರ್ಜಿಗಳ ಆಧಾರದ ಮೇಲೆ ಒಂದೇ ಒಂದು ಹೆಸರನ್ನು ಅಳಿಸಲಾಗಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
ಅಂತಿಮ ಮತದಾರರ ಪಟ್ಟಿಯನ್ನು https//ceo.karnataka.gov.in ಅಥವಾ https//voters.eci.gov.in ಇಸಿಐಎನ್ಇಟಿ ಮೊಬೈಲ್ ಆ್ಯಪ್ನಲ್ಲಿ ವೀಕ್ಷಿಸಬಹುದು. ತಮ್ಮ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು.