KEA Exam: ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರು; ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಮತ್ತಷ್ಟು ಕಠಿಣ ಕ್ರಮ ಕೈಗೊಂಡ ಕೆಇಎ
ಪರೀಕ್ಷಾ ಕೇಂದ್ರಗಳಿಗೆ ಬ್ಯಾಗ್, ಪುಸ್ತಕ, ಮೊಬೈಲ್ನಂತಹ ವಸ್ತುಗಳನ್ನು ತರುವುದನ್ನು ನಿಷೇಧಿಸಿದ್ದರೂ ಅಭ್ಯರ್ಥಿಗಳು ತರುತ್ತಿರುವುದು ಕಂಡುಬಂದಿದೆ. ಇನ್ನು ಮುಂದೆ ತಪಾಸಣಾ ಕೇಂದ್ರದ ನಂತರ ಯಾವುದೇ ಲಗೇಜ್ ಕೊಠಡಿಗಳು ಇರದಂತೆ ಕ್ರಮ ವಹಿಸಬೇಕು ಎಂಬುವುದು ಸೇರಿ ಹಲವು ಸೂಚನೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಇಎ ನೀಡಿದೆ.
-
ಬೆಂಗಳೂರು: ವಿವಿಧ ನೇಮಕಾತಿ ಹಾಗೂ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಪ್ರಾಧಿಕಾರವು ಮಹತ್ವದ ಸುತ್ತೋಲೆ ಹೊರಡಿಸಿದೆ. ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆಯ ವೇಳೆ ಶಿಗ್ಗಾಂವ್ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬ ಮೊಬೈಲ್ ಬಳಸಿ ನಕಲು ಮಾಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಭವಿಷ್ಯದ ಪರೀಕ್ಷೆಗಳಲ್ಲಿ ಇಂತಹ ಲೋಪದೋಷಗಳು ಮರುಕಳಿಸದಂತೆ ತಡೆಯಲು ಈ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಮೆಟಲ್ ಡಿಟೆಕ್ಟರ್ಗಳ ಮೂಲಕ ತಪಾಸಣೆ
ಪರೀಕ್ಷಾ ಕೇಂದ್ರಗಳಿಗೆ ಬ್ಯಾಗ್, ಪುಸ್ತಕ, ಮೊಬೈಲ್ನಂತಹ ವಸ್ತುಗಳನ್ನು ತರುವುದನ್ನು ನಿಷೇಧಿಸಿದ್ದರೂ ಅಭ್ಯರ್ಥಿಗಳು ತರುತ್ತಿರುವುದು ಕಂಡುಬಂದಿದೆ. ಇನ್ನು ಮುಂದೆ ತಪಾಸಣಾ ಕೇಂದ್ರದ ನಂತರ ಯಾವುದೇ ಲಗೇಜ್ ಕೊಠಡಿಗಳು ಇರದಂತೆ ಕ್ರಮ ವಹಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ತಪಾಸಣಾ ಕೇಂದ್ರಕ್ಕಿಂತ ಮುಂಚೆಯೇ ಶಾಮಿಯಾನ ಅಳವಡಿಸಿ ಅಭ್ಯರ್ಥಿಗಳ ಬ್ಯಾಗ್ ಹಾಗೂ ಇತರೆ ವಸ್ತುಗಳನ್ನು ಇರಿಸಲು ವ್ಯವಸ್ಥೆ ಮಾಡಬೇಕು. ಆ ಬಳಿಕವೇ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಿ ಕೇಂದ್ರದೊಳಗೆ ಬಿಡಬೇಕೆಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಸಿಪಿಐ ಅಥವಾ ಎಸ್ಐ ನೇತೃತ್ವದಲ್ಲಿ ಪ್ರತಿ 80 ಅಭ್ಯರ್ಥಿಗಳಿಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ಅಥವಾ ಹೋಂ ಗಾರ್ಡ್ಗಳನ್ನು ನಿಯೋಜಿಸಿ ಮೆಟಲ್ ಡಿಟೆಕ್ಟರ್ಗಳ ಮೂಲಕ ತಪಾಸಣೆ ನಡೆಸಬೇಕು.
ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರು
- ಪ್ರಸ್ತುತ ಒಂದು ಕೊಠಡಿಗೆ ಒಬ್ಬ ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತಿದ್ದು, ಇನ್ನು ಮುಂದೆ ಕನಿಷ್ಠ ಶೇ. 25ರಷ್ಟು ಮಹಿಳೆಯರು ಇರುವಂತೆ ಇಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಲಾಗುತ್ತದೆ. ಈ ಪೈಕಿ ಎರಡನೇ ಮೇಲ್ವಿಚಾರಕರಿಗೆ ಮಹತ್ವದ ಹೊಣೆಗಾರಿಕೆಗಳನ್ನು ನೀಡಲಾಗಿದೆ:
- ಮೊದಲ ಬೆಲ್ ಆಗುವವರೆಗೆ ಪ್ರವೇಶದ್ವಾರದಲ್ಲೇ ಇದ್ದು ಮೊಬೈಲ್ ಆಯಪ್ ಮೂಲಕ ಮುಖ ಚಹರೆ ಗುರುತಿಸುವಿಕೆ (Face Recognition) ವ್ಯವಸ್ಥೆ ಜಾರಿಗೊಳಿಸುವುದು.
- ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪ್ರಾಂಶುಪಾಲರ ಕೊಠಡಿಯಲ್ಲಿಟ್ಟು, ತಮಗೆ ನಿಗದಿಪಡಿಸಿದ ಕೊಠಡಿಗೆ ತೆರಳಿ ಅಭ್ಯರ್ಥಿಗಳನ್ನು ಮತ್ತೊಮ್ಮೆ ತಪಾಸಣೆಗೊಳಪಡಿಸುವುದು. ಪರೀಕ್ಷಾ ಕೊಠಡಿಯ ಕೊನೆಯ ಬೆಂಚಿನ ಹಿಂಭಾಗದಲ್ಲೇ ನಿಂತು ಯಾವುದೇ ಅಕ್ರಮಗಳು ನಡೆಯದಂತೆ ಕಣ್ಣಿಡುವುದು.
- ಕೇಂದ್ರದಲ್ಲಿ ಜಾಮರ್ (Jammer) ಅನ್ನು ನಿಗದಿತ ವೇಳೆಯಲ್ಲಿ ಆನ್ ಮತ್ತು ಆಫ್ ಮಾಡುವ ಕಾರ್ಯವನ್ನು ಸಿಬ್ಬಂದಿಗೆ ವಹಿಸಿ ಖಚಿತಪಡಿಸಿಕೊಳ್ಳುವುದು.
- ಸಿಸಿ ಕ್ಯಾಮೆರಾದಲ್ಲಿ ಕೊಠಡಿಯ ಎಲ್ಲಾ ವಿದ್ಯಾರ್ಥಿಗಳು ಸೆರೆಯಾಗುತ್ತಿರುವ ಬಗ್ಗೆ ಪರೀಕ್ಷೆಯ ಹಿಂದಿನ ದಿನವೇ ಪರಿಶೀಲಿಸುವುದು ಹಾಗೂ ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳ ಎದುರಲ್ಲೇ ಒಎಂಆರ್ ಉತ್ತರ ಪತ್ರಿಕೆಗಳ ಎರಡನೇ ಕಾರ್ಬನ್ ಪ್ರತಿಗಳನ್ನು ಕವರ್ನಲ್ಲಿ ಸೀಲ್ ಮಾಡಿ ಪ್ರಾಂಶುಪಾಲರಿಗೆ ಒಪ್ಪಿಸುವುದು.
ಲಾಟರಿ ಮೂಲಕ ಕೊಠಡಿ ಹಂಚಿಕೆ, ಸಿಸಿಟಿವಿ ಲೈವ್ ಮಾನಿಟರಿಂಗ್
ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಪರೀಕ್ಷಾ ವೀಕ್ಷಕರು (Observer) ಹಾಗೂ ಕೊಠಡಿ ಮೇಲ್ವಿಚಾರಕರ ಸಮ್ಮುಖದಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನ ಲಾಟರಿ (Draw of lots) ಎತ್ತುವ ಮುಖಾಂತರವೇ ಕೊಠಡಿಗಳನ್ನು ಹಂಚಿಕೆ ಮಾಡಬೇಕು. ಮೇಲ್ವಿಚಾರಕರಿಗೆ ತಾವು ಯಾವ ಕೊಠಡಿಗೆ ನಿಯೋಜನೆಗೊಂಡಿದ್ದೇವೆ ಎಂಬುದು ಪರೀಕ್ಷಾ ಅವಧಿ ಆರಂಭದ ಕೆಲವೇ ಕ್ಷಣಗಳ ಮೊದಲು ತಿಳಿಯುವಂತಿರಬೇಕು. ಖಾಸಗಿ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದಲ್ಲಿ ಎರಡನೇ ಮೇಲ್ವಿಚಾರಕರನ್ನು ಸಮೀಪದ ಸರ್ಕಾರಿ ಅಥವಾ ಅನುದಾನಿತ ಶಾಲೆ-ಕಾಲೇಜುಗಳಿಂದಲೇ ಕಡ್ಡಾಯವಾಗಿ ನಿಯೋಜಿಸಬೇಕು.
ಜಿಲ್ಲಾ ಕೇಂದ್ರಗಳಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಸಿಸಿಟಿವಿ ಲೈವ್ ಮಾನಿಟರಿಂಗ್ ವ್ಯವಸ್ಥೆ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲದಿರುವುದು ಕಂಡುಬಂದಿದೆ. ಹೀಗಾಗಿ, ಇನ್ನು ಮುಂದೆ ಪರೀಕ್ಷಾ ಕೇಂದ್ರದಲ್ಲೇ ಜಿಲ್ಲಾಧಿಕಾರಿಗಳಿಂದ ನಿಯೋಜನೆಗೊಂಡಿರುವ ವೀಕ್ಷಕರು, ಕಸ್ಟೋಡಿಯನ್ ಹಾಗೂ ಸಿಬ್ಬಂದಿ ನೆರವಿನಿಂದ ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್ ನಡೆಸಿ ಪರೀಕ್ಷೆ ನ್ಯಾಯಯುತವಾಗಿ ಸಾಗುವಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪರೀಕ್ಷಾ ಅಧಿಕಾರಿಗಳಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ನಿರ್ದೇಶನ ನೀಡಿದ್ದಾರೆ.