KPSC ಹಗರಣ; IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಸರ್ಕಾರ
ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲು ಮತ್ತು ಚಾರ್ಜ್ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC Scam) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ (IAS Gyanendra Kumar) ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲು ಮತ್ತು ಚಾರ್ಜ್ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಡತ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 218ರ ಅನ್ವಯ ಈ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ. ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಯಾವುದೇ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಆಡಳಿತಕ್ಕೆ ಕಪ್ಪುಚುಕ್ಕೆ ತರುವ ಕೃತ್ಯಗಳಿಗೆ ಮನ್ನಣೆಯಿಲ್ಲ ಎಂದು ಬರೆದುಕೊಂಡಿದ್ದಾರೆ.
ಏನಿದು ಘಟನೆ?
2016ರ ಬ್ಯಾಚ್ನ ಐಎಎಸ್ ಅಧಿಕಾರಿಯಾದ ಜ್ಞಾನೇಂದ್ರ ಕುಮಾರ್ ಅವರು ಕೆಪಿಎಸ್ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಲಂಚದ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪವಿದೆ. ಪರೀಕ್ಷೆ ನಡೆಯುವ ಒಂದು ದಿನ ಮುಂಚಿತವಾಗಿಯೇ, ಕೆಪಿಎಸ್ಸಿಯ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮ್ಮ ಬಳಿಯಿದ್ದ ಅತ್ಯಂತ ರಹಸ್ಯ ಪ್ರಶ್ನೆ ಪತ್ರಿಕೆಗಳನ್ನು ಟ್ಯಾಬ್ಲೆಟ್ ಅಥವಾ ಪೆನ್ಡ್ರೈವ್ ಮೂಲಕ ಫೋಟೋ ತೆಗೆದು ಸೋರಿಕೆ ಮಾಡಿದ್ದರು ಎನ್ನಲಾಗಿದೆ.
KPSC recruitment scam: ಕೆಪಿಎಸ್ಸಿ ನೇಮಕಾತಿ ಹಗರಣ; ಶಿವಶಂಕರಪ್ಪ ಸಾಹುಕಾರ್, ಬಿ.ವಿ. ಗೀತಾ 13 ದಿನ ಇಡಿ ಕಸ್ಟಡಿಗೆ
ಮಧ್ಯವರ್ತಿಗಳಾದ ಬಸವರಾಜ ಕನ್ನಾಳೆ ಮುಂತಾದವರ ಮೂಲಕ ಆಯ್ದ ಕೆಲವು ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್ಗಳು ಮತ್ತು ವಿಲ್ಲಾಗಳಿಗೆ ಕರೆದೊಯ್ದು, ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿದ್ದ 60 ರಿಂದ 80 ಪ್ರಶ್ನೆಗಳ ಸರಿಯಾದ ಉತ್ತರಗಳನ್ನು ಬಾಯಿಪಾಠ ಮಾಡಿಸಲಾಗಿತ್ತು ಎಂದು ತಿಳಿದು ಬಂದಿತ್ತು.