Bengaluru News: ಬೆಂಗಳೂರಿನಲ್ಲಿ ಯುವತಿ ತೊಡೆ ಸವರಿ ಬೈಕ್ ಟ್ಯಾಕ್ಸಿ ಚಾಲಕನ ದುರ್ವರ್ತನೆ; ಕೇಸ್ ದಾಖಲು
Rapido Bike Taxi Rider: ನವೆಂಬರ್ 6 ರಂದು ನಡೆದ ಘಟನೆಯ ಕುರಿತು ಸಂತ್ರಸ್ಥ ಯುವತಿ, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಅಲ್ಲದೇ ಬೈಕ್ ಟ್ಯಾಕ್ಸಿ ಸವಾರನ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ. ಈ ಹಿನ್ನೆಲೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಯುವತಿ ಜತೆ ಅನುಚಿತ ವರ್ತನೆ ತೋರಿದ ಬೈಕ್ ಟ್ಯಾಕ್ಸಿ ಚಾಲಕನಿಗೆ ವ್ಯಕ್ತಿಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. -
ಬೆಂಗಳೂರು, ನ.8: ಯುವತಿಯೊಂದಿಗೆ ಬೈಕ್ ಟ್ಯಾಕ್ಸಿ ಚಾಲಕನೊಬ್ಬ (Bike taxi driver) ಅಸಭ್ಯವಾಗಿ ವರ್ತಿಸಿರುವ ಘಟನೆ (Bengaluru News) ನಗರದಲ್ಲಿ ನಡೆದಿದೆ. ರೈಡ್ ಉದ್ದಕ್ಕೂ ಯುವತಿಯ ಕಾಲು, ತೊಡೆ ಸವರಿ ಚಾಲಕ ದುರ್ವರ್ತನೆ ತೋರಿದ್ದು, ಈ ಬಗ್ಗೆ ಯುವತಿ ವಿಡಿಯೊ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಹೆಣ್ಮಕ್ಕಳಿಗೆ ಬೈಕ್ ಟ್ಯಾಕ್ಸಿ ಸೇಫ್ ಅಲ್ವಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ.
ನವೆಂಬರ್ 6ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವತಿ ಕಾಲಿನ ಮೇಲೆ ಚಾಲಕ ಕೈ ಇಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೊವನ್ನು ಯುವತಿ ಹಂಚಿಕೊಂಡು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. KA55 EA4344 ಬೈಕ್ ರೈಡ್ ಮಾಡುತ್ತಿದ್ದ ಚಾಲಕ ಲೋಕೇಶ್ ದುರ್ವರ್ತನೆ ತೋರಿದ್ದಲ್ಲದೇ, ಪ್ರಶ್ನಿಸಿದ ಯುವತಿಯ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ.
ಯುವತಿ ಸ್ಥಳಕ್ಕೆ ತಲುಪಿದ ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬರು, ಚಾಲಕನನ್ನು ತರಾಟೆ ತೆಗೆದುಕೊಂಡಿದ್ದು, ಚಾಲಕ ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾನೆ. ಬೈಕ್ ಟ್ಯಾಕ್ಸಿ ಚಾಲಕನ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನವೆಂಬರ್ 6 ರಂದು ನಡೆದ ಘಟನೆಯ ಕುರಿತು ಸಂತ್ರಸ್ಥ ಯುವತಿ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ನಾನು ಚರ್ಚ್ ಸ್ಟ್ರೀಟ್‌ನಿಂದ ಪಿಜಿಗೆ ಬೈಕ್ ಬುಕ್ ಮಾಡಿದ್ದೆ. ಅದರಂತೆ ಲೋಕೇಶ್ ಎಂಬ ನನ್ನನ್ನು ಹತ್ತಿಸಿಕೊಂಡಿದ್ದ. ಮಾರ್ಗ ಮಧ್ಯೆ ಆತ ನನ್ನ ತೊಡೆಯನ್ನು ಮುಟ್ಟುತ್ತಿದ್ದ. ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದಾಗ ಆತ ಪದೇ ಪದೇ ಅದೇ ಕೃತ್ಯವನ್ನು ಮುಂದುವರಿಸಿದ ಹಿನ್ನಲೆಯಲ್ಲಿ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಅಲ್ಲದೆ ಆ ಪ್ರದೇಶ ನನಗೆ ಪರಿಚಯವಿಲ್ಲದ ಕಾರಣ ನಾನು ಬೈಕ್ ನಿಲ್ಲಿಸಲಿಲ್ಲ. ಆದರೆ ನಾನು ಬಹಳ ಆತಂಕದಲ್ಲಿದ್ದೆ. ನಡುಗುತ್ತಿದ್ದೆ ಮತ್ತು ಕಣ್ಣೀರು ಸುರಿಸುತ್ತಿದ್ದೆ ಎಂದು ಹೇಳಿದ್ದಾರೆ.
ಪಿಜಿ ಹತ್ತಿರವಾಗುತ್ತಲೆ ಸ್ಥಳೀಯರೊಬ್ಬರು ಅಳುತ್ತಿದ್ದ ನನ್ನನ್ನು ನೋಡಿ ಪ್ರಶ್ನಿಸಿದರು. ಆಗ ನಾನು ನಡೆದ ಘಟನೆ ವಿವರಿಸಿದೆ. ಆಗ ಅವರು ಚಾಲಕನನ್ನು ಪ್ರಶ್ನಿಸಿದಾಗ ಆತ ಉದ್ದೇಶಪೂರ್ವಕವಾಗಿ ಮಾಡಲಿಲ್ಲ ಎಂದು ಸಬೂಬು ಹೇಳಿದ. ಬಳಿಕ ಕ್ಷಮೆಯಾಚಿಸಿ ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋದ. ಆದರೆ ಹೋಗುವಾಗ ಆತ ನನ್ನ ಕಡೆ ಬೆರಳು ತೋರಿಸಿದ. ಇದು ನನ್ನ ಆತಂಕ ಮತ್ತಷ್ಟು ಹೆಚ್ಚಿಸಿದೆ ಎಂದು ಮಹಿಳೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | POCSO case: ಮಾತು ಬಾರದ ವಿದ್ಯಾರ್ಥಿನಿಗೆ ಶಿಕ್ಷಕನ ಲೈಂಗಿಕ ಕಿರುಕುಳ, 13 ವರ್ಷದ ಬಳಿಕ ಬಯಲು
ಘಟನೆ ಸಂಬಂಧ ಬೈಕ್ ಟ್ಯಾಕ್ಸಿ ಸವಾರನ ವಿರುದ್ಧ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಈ ಹಿನ್ನೆಲೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.