ಯುದ್ಧಕ್ಕೆ ಸಿದ್ಧ; ಶಾಂತಿ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ಅಫ್ಘಾನಿಸ್ತಾನ
Afghanistan-Pakistan: ಇಸ್ತಾಂಬುಲ್‌ನಲ್ಲಿ ಟರ್ಕಿ ಮತ್ತು ಕತಾರ್‌ನ ಮಧ್ಯಸ್ಥಿಕೆಯಲ್ಲಿ ನಡೆದ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಮುರಿದು ಬಿದ್ದಿದೆ. ಪಾಕಿಸ್ತಾನದ ಅಪ್ರಮಾಣಿಕ ಮತ್ತು ಅಪ್ರಬುದ್ಧ ನಡವಳಿಕೆಯನ್ನು ಅಫ್ಘಾನಿಸ್ತಾನ ಖಂಡಿಸಿದೆ. ಜತೆಗೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ಮತ್ತೊಮ್ಮೆ ಘೋಷಿಸಿದೆ.
ಪಾಕಿಸ್ತಾನದ ಬೇಜವಾಬ್ದಾರಿಯಿಂದ ಶಾಂತಿ ಮಾತುಕತೆ ಮುರಿದುಬಿದ್ದ ವಿಚಾರ ತಿಳಿಸಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ (ಸಂಗ್ರಹ ಚಿತ್ರ). -
ಕಾಬೂಲ್, ನ. 8: ಹದಗೆಟ್ಟಿರುವ ಪಾಕಿಸ್ತಾನ-ಅಫ್ಘಾನಿಸ್ತಾನ (Afghanistan-Pakistan) ಸಂಬಂಧ ಸದ್ಯಕ್ಕೆ ಸರಿಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಇಸ್ತಾಂಬುಲ್‌ನಲ್ಲಿ ನಡೆದ ಎರಡು ದೇಶಗಳ ನಡುವಿನ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಮುಕ್ತಾಯವಾಗಿದ್ದು, ಪಾಕಿಸ್ತಾನದ ಅಪ್ರಮಾಣಿಕ ಮತ್ತು ಅಪ್ರಬುದ್ಧ ನಡವಳಿಕೆಯನ್ನು ಅಫ್ಘಾನಿಸ್ತಾನ ಖಂಡಿಸಿದೆ. ಟರ್ಕಿ ಮತ್ತು ಕತಾರ್‌ನ ಮಧ್ಯಸ್ಥಿಕೆ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನ ಮಾತುಕತೆಗೆ ಅಡ್ಡಿಯಾಗುತ್ತಿದೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (The Islamic Emirate of Afghanistan) ಕಿಡಿ ಕಾರಿದೆ. ಜತೆಗೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದು ತಾಲಿಬಾನ್ ಮತ್ತೊಮ್ಮೆ ಘೋಷಿಸಿದೆ. ಆ ಮೂಲಕ ಗಡಿಯಲ್ಲಿ ಉಂಟಾದ ಸಂಘರ್ಷದ ವಾತಾರಣ ಸದ್ಯಕ್ಕೆ ಸಹಜ ಸ್ಥಿತಿಗೆ ಬರುವ ಬಗ್ಗೆ ಅನುಮಾನ ಮೂಡಿದೆ.
ಅಫ್ಘಾನಿಸ್ತಾನದ ಹಿರಿಯ ನಾಯಕ ಜಬಿಹುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆ ನೀಡಿ, ʼʼಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಟರ್ಕಿ ಮತ್ತು ಕತಾರ್ - ಎರಡು ಸಹೋದರ ರಾಷ್ಟ್ರಗಳಿಗೆ ತಾಲಿಬಾನ್ ಸರ್ಕಾರವು ಕೃತಜ್ಞತೆ ಸಲ್ಲಿಸುತ್ತದೆ. ನವೆಂಬರ್ 6 ಮತ್ತು 7ರಂದು ನಡೆದ ಮಾತುಕತೆಯಲ್ಲಿ ಅಫ್ಘಾನ್ ಪ್ರತಿನಿಧಿಗಳು ಭಾಗವಹಿಸಿದ್ದರು. ಪಾಕಿಸ್ತಾನವು ಅಂತಿಮವಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಬೇಜವಾಬ್ದಾರಿಯಿಂದ ನಡೆದುಕೊಂಡಿದೆʼʼ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Afghanistan Vs Pak: ಮುರಿದು ಬಿತ್ತು ಪಾಕಿಸ್ತಾನ, ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆ
ʼʼಪಾಕಿಸ್ತಾನವು ಮತ್ತೊಮ್ಮೆ ತನ್ನ ಬೇಜವಾಬ್ದಾರಿ ಮತ್ತು ಅಸಹಕಾರ ಮನೋಭಾವವನ್ನು ಪ್ರದರ್ಶಿಸಿದೆ. ತನ್ನ ಭದ್ರತೆಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳನ್ನು ಅಫ್ಘಾನ್ ಸರ್ಕಾರಕ್ಕೆ ದಾಟಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಚ್ಛಿಸುವುದಿಲ್ಲ" ಎಂದು ವಿವರಿಸಿದ್ದಾರೆ. ಅಫ್ಘಾನ್ ನಿಯೋಗವು ಮೂಲಭೂತ ಪರಿಹಾರವನ್ನು ಕಂಡುಕೊಳ್ಳುವ ಭರವಸೆಯೊಂದಿಗೆ ಮಾತುಕತೆಗೆ ಮುಂದಾಗಿತ್ತು. ಆದರೆ ಪಾಕಿಸ್ತಾನದ ನಡವಳಿಕೆಯಿಂದ ಇದು ಸಾಧ್ಯವಾಗಿಲ್ಲ ಎಂದೂ ದೂರಿದ್ದಾರೆ.
ಅಫ್ಘಾನಿಸ್ತಾನದ ಹಿರಿಯ ನಾಯಕ ಜಬಿಹುಲ್ಲಾ ಮುಜಾಹಿದ್ ಹೇಳಿಕೆ:
Mujahid: TTP Is 🇵🇰#Pakistan’s Problem, #Kabul Denies Any Ties, Blames Military Factions
— 𝑻𝒂𝒍𝒊𝒃𝒂𝒏 𝑨𝒇𝒈𝒉𝒂𝒏𝒊𝒔𝒕𝒂𝒏 (@Eagle_Eagle10) November 8, 2025
The Islamic Emirate’s spokesman Zabihullah Mujahid denied any connection between the Afghan government and the TTP, saying the group is Pakistan’s domestic issue and must be resolved… pic.twitter.com/ffu0YWm8GH
ಇಸ್ಲಾಮಾಬಾದ್‌ನ ನಿಲುವನ್ನು ಖಂಡಿಸಿದ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರ, ಅಫ್ಘಾನಿಸ್ತಾನವು ತನ್ನ ನೆಲದಲ್ಲಿ ನಿಂತು ಬೇರೆ ದೇಶದ ವಿರುದ್ಧ ಹೋರಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಮತ್ತು ಯಾವುದೇ ವಿದೇಶಿ ರಾಷ್ಟ್ರವು ತನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ವಿರುದ್ಧ ವರ್ತಿಸಲು ಬಿಡುವುದಿಲ್ಲ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ. ಅಫ್ಘಾನಿಸ್ತಾನದ ಜನರು ಮತ್ತು ದೇಶದ ರಕ್ಷಣೆ ಎಮಿರೇಟ್‌ನ ಕರ್ತವ್ಯ ಎಂದು ಹೇಳಿದೆ.
ಪಾಕಿಸ್ತಾನದ ಮುಸ್ಲಿಮರೊಂದಿಗೆ ಸಹೋದರ ಸಂಬಂಧವನ್ನು ಕಾಯ್ದುಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ತಾಲಿಬಾನ್, ತನ್ನ ಜವಾಬ್ದಾರಿ ಮತ್ತು ಸಾಮರ್ಥ್ಯಗಳ ಮಿತಿಯೊಳಗೆ ಮಾತ್ರ ಸಹಕರಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಕೂಡ 3ನೇ ಸುತ್ತಿನ ಮಾತುಕತೆ ಯಾವುದೇ ಫಲಿತಾಂಶಗಳಿಲ್ಲದೆ ಮುಕ್ತಾಯವಾಗಿದೆ ಎಂದು ದೃಢಪಡಿಸಿದರು. 4ನೇ ಸುತ್ತಿನ ಮಾತುಕತೆಗೆ ಯಾವುದೇ ಯೋಜನೆಗಳಿಲ್ಲ ಎಂದು ಅವರು ತಿಳಿಸಿದರು. ಈ ಮಧ್ಯೆ ಅಫ್ಘಾನಿಸ್ತಾನದ ಸಚಿವ ನೂರುಲ್ಲಾ ನೂರಿ ಪಾಕಿಸ್ತಾನಿ ಅಧಿಕಾರಿಗಳಿಗೆ "ಅಫ್ಘನ್ನರ ತಾಳ್ಮೆಯನ್ನು ಪರೀಕ್ಷಿಸಬೇಡಿ" ಎಂದು ಎಚ್ಚರಿಕೆ ನೀಡಿದರು. ಆಸಿಫ್ ಅವರನ್ನು ಉದ್ದೇಶಿಸಿ, ʼʼಯುದ್ಧ ಭುಗಿಲೆದ್ದರೆ ಅಫ್ಘಾನಿಸ್ತಾನದ ಹಿರಿಯರು ಮತ್ತು ಯುವಕರು ಇಬ್ಬರೂ ಹೋರಾಡಲು ಎದ್ದೇಳುತ್ತಾರೆ" ಎಂದು ಕಠಿಣ ಸಂದೇಶ ರವಾನಿಸಿದರು.