Bengaluru-Tumkur Metro Project: ಸ್ಟುಪಿಡ್ ಐಡಿಯಾ; ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆಗೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ
Namma Metro: ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಸಂಬಂಧ ಬಿಎಂಆರ್‌ಸಿಎಲ್ ಈಗಾಗಲೇ ವರದಿ ಕೊಟ್ಟಿದೆ. ನಮ್ಮ ಅವಧಿಯಲ್ಲೇ ಇದನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ.


ಬೆಂಗಳೂರು: ಬೆಂಗಳೂರು - ತುಮಕೂರು ಮೆಟ್ರೋ ಯೋಜನೆಗೆ (Bengaluru-Tumkur Metro Project) ಆರಂಭದಲ್ಲೇ ಅಪಸ್ವರ ಕೇಳಿ ಬಂದಿದೆ. ಒಂದೆಡೆ ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ದೊರೆಯಲಿದೆʼ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಮತ್ತೊಂದೆಡೆ ಇದಕ್ಕೆ ಬಿಜೆಪಿ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಈ ಯೋಜನೆ ಕುರಿತು ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು, ಇದೊಂದು ʼಸ್ಟುಪಿಡ್ ಐಡಿಯಾʼ ಎಂದು ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಮೆಟ್ರೋ ಮಾರ್ಗಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಇನ್ನಷ್ಟು ವಿಸತರಿಸುವತ್ತ ಗಮನಹರಿಸಬೇಕು. ತುಮಕೂರಿಗೆ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಅಥವಾ ಉಪನಗರ ರೈಲು ಯೋಜನೆ ಒದಗಿಸಬೇಕು ಸಂಸದ ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Karnataka Govt’s idea to extend metro to Tumkur is a stupid idea.
— Tejasvi Surya (@Tejasvi_Surya) May 17, 2025
They should instead focus on early completion of pending lines and further densification of network inside Bengaluru. Metro is to solve intra city connectivity.
Tumkur should be connected with RRTS or even…
ಬೆಂಗಳೂರು- ತುಮಕೂರು ಮೆಟ್ರೋ ಕಾರ್ಯ ಸಾಧ್ಯತಾ ವರದಿ ಸಲ್ಲಿಕೆ
ನಮ್ಮ ಮೆಟ್ರೋ ಸೇವೆಯನ್ನು ತುಮಕೂರಿಗೆ ವಿಸ್ತರಿಸುವ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ನಮ್ಮ ಮೆಟ್ರೋ ಹಸಿರು ಮಾರ್ಗದ ಮಾದಾವರದವರೆಗೆ ಈಗಾಗಲೇ ನಮ್ಮ ಮೆಟ್ರೋ ರೈಲು ಸಂಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ನಿಲ್ದಾಣದಿಂದ ತುಮಕೂರಿನ ಶಿರಾ ಗೇಟ್‌ವರೆಗೂ 56.6 ಕಿಮೀ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಮಾರ್ಗದಲ್ಲಿ ಒಟ್ಟು 25 ಎಲಿವೇಟೆಡ್ (ಎತ್ತರಿಸಿದ) ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂಬ ಮಾಹಿತಿ ಇದೆ. ಈ ಯೋಜನೆಗೆ ಅನುಮೋದನೆ ಸಿಕ್ಕರೆ ಬೆಂಗಳೂರು ಹಾಗೂ ತುಮಕೂರು ನಡುವೆ ಸಂಚಾರ ಮತ್ತಷ್ಟು ಸುಗಮವಾಗಲಿದೆ.
ಸಂಸದ ಪಿ.ಸಿ.ಮೋಹನ್, ಭಾಸ್ಕರ ರಾವ್ ಆಕ್ಷೇಪ
ತುಮಕೂರಿಗೆ ಉಪನಗರ ರೈಲು ಸಂಪರ್ಕ ನೀಡಲು ಕಿ.ಮೀ.ಗೆ 100–150 ಕೋಟಿ ರೂ. ವೆಚ್ಚ, ಮೆಟ್ರೋ ಆದರೆ 350 ಕೋಟಿ ರೂ. ವೆಚ್ಚವಾಗುತ್ತದೆ. ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ 1,000 ಕೋಟಿ ರೂ. ಲಾಭವಾಗಲಿದೆ. ತುಮಕೂರು, ಹೊಸೂರು, ಹೊಸಕೋಟೆ ಅಥವಾ ಬಿಡದಿಗೆ ಮೆಟ್ರೋ ಕೇವಲ ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸುವುದು ಉದ್ದೇಶವಾಗಿದೆ. ರಾಜ್ಯ ಸರ್ಕಾರವು ಉಪನಗರ ರೈಲುಗಳ ಹಳಿ ತಪ್ಪಿಸುವುದನ್ನು ಮಾಡುತ್ತಿದೆ ಎಂದು ಸಂಸದ ಪಿ.ಸಿ.ಮೋಹನ್ ಎಕ್ಸ್‌ನಲ್ಲಿ ಟೀಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Insult to Kannada: ಹೋಟೆಲ್ ಡಿಸ್‌ಪ್ಲೇ ಬೋರ್ಡ್ನಲ್ಲಿ ಕನ್ನಡಿಗರಿಗೆ ನಿಂದನೆ, ಆಕ್ರೋಶ
ಭಾಸ್ಕರ ರಾವ್ ಟೀಕೆ
ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಬಗ್ಗೆ ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಮೆಟ್ರೋ ಎಂದರೇನು, ಸಬ್ ಅರ್ಬನ್, ಇಂಟರ್ ಸಿಟಿ ಹಾಗೂ ದೀರ್ಘ ದೂರ ಕ್ರಮಿಸುವ ರೈಲುಗಳ ನಡುವಣ ವ್ಯತ್ಯಾಸ ಏನು ಎಂಬುದನ್ನು ಯಾರಾದರೂ ಈ ಸರ್ಕಾರಕ್ಕೆ ಅರ್ಥ ಮಾಡಿಸುವಿರಾ? ಈ ಬೇಡಿಕೆ ಇನ್ನು ಮುಂದೆ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದುʼ ಎಂದು ಪೋಸ್ಟ್ ಮಾಡಿದ್ದಾರೆ.