Tejasvi Surya: ಸತತ 2ನೇ ಬಾರಿ ಐರನ್‌ಮ್ಯಾನ್ 70.3 ಓಟ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ; ಅಣ್ಣಾಮಲೈ ಸಾಥ್
IRONMAN 70.3: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗೋವಾದಲ್ಲಿ ನಡೆದ 5ನೇ ಆವೃತ್ತಿಯ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಓಟವನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸುತ್ತಿರುವುದು ಇದು ಸತತ 2ನೇ ಬಾರಿ. ಈ ಸಲ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ತಮ್ಮ ಓಟವನ್ನು ಪೂರ್ಣಗೊಳಿಸಿ ಗಮನ ಸೆಳೆದರು.
ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನು ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ -
ಪಣಜಿ, ನ. 9: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಗೋವಾದಲ್ಲಿ ನಡೆದ 5ನೇ ಆವೃತ್ತಿಯ ಐರನ್‌ಮ್ಯಾನ್ 70.3 (IRONMAN 70.3) ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅತೀ ಕಠಿಣ 3 ಹಂತಗಳನ್ನು ಹೊಂದಿರುವ ಐರನ್‌ಮ್ಯಾನ್ 70.3 ಓಟವನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸುತ್ತಿರುವುದು ಇದು ಸತತ 2ನೇ ಬಾರಿ ಎನ್ನುವುದು ವಿಶೇಷ. ಈ ಸಲ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಸಹ ಭಾಗವಹಿಸಿದ್ದು, ಅವರು ಕೂಡ ತಮ್ಮ ಓಟವನ್ನು ಪೂರ್ಣಗೊಳಿಸಿ ಗಮನ ಸೆಳೆದರು.
ಈ ಸ್ಪರ್ಧೆಯ 3 ಕಠಿಣ ಹಂತಗಳಾದ 1.9 ಕಿ.ಮೀ. ಈಜು, 90 ಕಿ.ಮೀ. ಸೈಕ್ಲಿಂಗ್ ಮತ್ತು 21.1 ಕಿ.ಮೀ. ಓಟವನ್ನು ಒಳಗೊಂಡಿದೆ. ಸಂಸದ ತೇಜಸ್ವಿ ಸೂರ್ಯ ಈ ಹಂತಗಳನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಈ ಪೈಕಿ ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಇತ್ತ ಅಣ್ಣಾಮಲೈ ಈ ಓಟವನ್ನು 8 ಗಂಟೆ 13 ನಿಮಿಷಗಳಲ್ಲಿ ಮುಗಿಸಿದರು.
ಸಂಸದ ತೇಜಸ್ವಿ ಸೂರ್ಯ ಅವರ ಎಕ್ಸ್ ಪೋಸ್ಟ್:
A strong finish to my second Ironman 70.3, made all the more special because I did it alongside my dear brother @annamalai_k Anna.
— Tejasvi Surya (@Tejasvi_Surya) November 9, 2025
Thousands participated with incredible enthusiasm. PM Sri @narendramodi Ji’s call for a #FitIndia is inspiring a new wave of health, discipline and… pic.twitter.com/qPZ9FeeOwx
ಈ ಸುದ್ದಿಯನ್ನೂ ಓದಿ: Tejaswi Surya: ಮುದ್ದಾದ ಅತಿಥಿಯನ್ನು ಮನೆಗೆ ಕರೆತಂದ ತೇಜಸ್ವಿ ಸೂರ್ಯ-ಶಿವಶ್ರೀ ದಂಪತಿ
ಸತತ 2ನೇ ಬಾರಿ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ
2024ರಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನೂ ತೇಜಸ್ವಿ ಸೂರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆ ಮೂಲಕ ಈ ಸ್ಪರ್ಧೆಯನ್ನು ಪೂರ್ಣಗೊಳಿಸಿದ ದೇಶದ ಮೊದಲ ಜನಪ್ರತಿನಿಧಿ ಎನಿಸಿಕೊಂಡಿದ್ದರು. ಕಳೆದ ವರ್ಷ ಅವರು ಈ ಗುರಿ ತಲುಪಲು 8 ಗಂಟೆ 27 ನಿಮಿಷ ತೆಗೆದುಕೊಂಡಿದ್ದರು. ಪ್ರಧಾನಿ ಮೋದಿ ಕೂಡ ಅವರನ್ನು ಅಭಿನಂದಿಸಿದ್ದರು.
ಸಂತಸ ಹಂಚಿಕೊಂಡ ಸಂಸದ
ತಾವು ಸತತ 2ನೇ ಬಾರಿ ಈ ಸ್ಪರ್ಧೆಯನ್ನು ಪೂರ್ಣಗೊಳಿಸಿರುವ ವಿಚಾರವನ್ನು ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʼʼನನ್ನ ಆತ್ಮೀಯ ಸಹೋದರ ಅಣ್ಣಾಮಲೈ ಅವರೊಂದಿಗೆ ಭಾಗವಹಿಸಿದ್ದರಿಂದ ನನ್ನ 2ನೇ ಐರನ್‌ಮ್ಯಾನ್ 70.3 ಓಟ ವಿಶೇಷ ಎನಿಸಿಕೊಂಡಿತು. ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದು, ಯುವ ಜನತೆಯಲ್ಲಿ ಆರೋಗ್ಯ, ಶಿಸ್ತು ಮತ್ತು ದೃಢ ಸಂಕಲ್ಪವನ್ನು ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಫಿಟ್ ಇಂಡಿಯಾ ಅಭಿಯಾನಕ್ಕೆ ಇದು ಸ್ಫೂರ್ತಿʼʼ ಎಂದು ಬರೆದುಕೊಂಡಿದ್ದಾರೆ.
ಅಣ್ಣಾಮಲೈ ಅವರ ಎಕ್ಸ್ ಪೋಸ್ಟ್:
Earlier this year, I made a promise to myself to continue pushing my fitness goals, nurture resilience, and adopt an athlete's mindset as I prepared for the Ironman 70.3 in Goa. I believed that with discipline and consistency, even the seemingly impossible could be conquered.… pic.twitter.com/7g1OSEwGC7
— K.Annamalai (@annamalai_k) November 9, 2025
ಅಣ್ಣಾಮಲೈ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ತಮಗೆ ಮಾರ್ಗದರ್ಶನ ನೀಡಿದ ತೇಜಸ್ಚಿ ಸೂರ್ಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಚಾಂಪಿಯನ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಫಲಿತಾಂಶ
ಸುಮಾರು 31 ದೇಶಗಳ 1,300 ಕ್ರೀಡಾಪಟುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಉಜ್ಬೇಕಿಸ್ತಾನದ ಕಾನ್‌ಸ್ಟಾಂಟಿನ್ ಬೆಲೌಸೊವ್ ಚಾಂಪಿಯನ್ ಎನಿಸಿಕೊಂಡರು. ಅವರು 4:25:47 ಗಂಟೆಯಲ್ಲಿ ಓಟವನ್ನು ಪೂರ್ಣಗೊಳಿಸಿದರು. ಇನ್ನು ಮಹಿಳೆಯ ವಿಭಾಗದಲ್ಲಿ ಇಂಗ್ಲೆಂಡ್‌ನ ಎಲ್ಲಿ ಗ್ಯಾರೆಟ್ 5:18:43 ಗಂಟೆಯಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ಮೊದಲಿಗರಾದರು.