ಸೃಜನಶೀಲತೆ ಹೊರಹೊಮ್ಮಲು ತೊಡಗಿಸಿಕೊಳ್ಳುವಿಕೆ ಮುಖ್ಯ: ಪ.ಸ. ಕುಮಾರ್
Prasanna Heggodu: ಪ್ರಸನ್ನ ಒಬ್ಬ ರಂಗಕರ್ಮಿ. ದಶಕಗಳಿಂದ ರಂಗಭೂಮಿಯ ಆತ್ಮವೇ ಆಗಿದ್ದಾರೆ. ಇಲ್ಲಿ ಮೂಡಿರುವ ಕಪ್ಪು ಬಿಳುಪು ಚಿತ್ರಗಳು ಅಲ್ಲಿನ ಪಾತ್ರಗಳೇ ಆಗಿವೆ. ಅವು ನಮಗೆ ಬಾಹ್ಯವಾಗಿ ಕಾಣುವ ನೋಟವಲ್ಲ. ಅವರ ಅಂತರಂಗದಲ್ಲಿ ಒಂದು ಭಿನ್ನ ನೋಟವಿದೆ. ಅದು ಇಲ್ಲಿ ಚಿತ್ರಗಳಾಗಿ ಢಾಳಾಗಿ ಮೂಡಿವೆ ಎಂದು ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು, ಅ. 30: ನಾವು ಯಾವುದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತೇವೋ ಅದರ ಆತ್ಮವೇ ಆಗಿರುತ್ತೇವೆ. ಹಾಗಿದ್ದಾಗ ಮಾತ್ರ ಅದ್ಭುತವಾದ ಸೃಜನಶೀಲತೆ ಹೊರಹೊಮ್ಮುತ್ತದೆ ಎಂದು ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಹೇಳಿದರು. ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿರುವ ರಂಗಕರ್ಮಿ ಪ್ರಸನ್ನ ಹೆಗ್ಗೋಡು (Prasanna Heggodu) ಅವರ ಪೆನ್ಸಿಲ್ ಚಿತ್ರಗಳ ಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸನ್ನಒಬ್ಬ ರಂಗಕರ್ಮಿ. ದಶಕಗಳಿಂದ ರಂಗಭೂಮಿಯ ಆತ್ಮವೇ ಆಗಿದ್ದಾರೆ. ಇಲ್ಲಿ ಮೂಡಿರುವ ಕಪ್ಪು ಬಿಳುಪು ಚಿತ್ರಗಳು ಅಲ್ಲಿನ ಪಾತ್ರಗಳೇ ಆಗಿವೆ. ಅವು ನಮಗೆ ಬಾಹ್ಯವಾಗಿ ಕಾಣುವ ನೋಟವಲ್ಲ. ಅವರ ಅಂತರಂಗದಲ್ಲಿ ಒಂದು ಭಿನ್ನ ನೋಟವಿದೆ. ಅದು ಇಲ್ಲಿ ಚಿತ್ರಗಳಾಗಿ ಢಾಳಾಗಿ ಮೂಡಿವೆ ಎಂದು ಅವರು ವಿಶ್ಲೇಷಿಸಿದರು.
ಗುಹೆಗಳಲ್ಲಿ ಹಿಂದೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಇವರು ಜಗತ್ತಿನ ಅತಿ ಶ್ರೇಷ್ಠ ಚಿತ್ರ ಕಲಾವಿದರಾಗಿದ್ದರು. ಬದುಕಿನ ನಿಜವಾದ ಚಿತ್ರಗಳೆಂದರೆ ಈ ಗುಹಾಂತರ ಚಿತ್ರಗಳು. ಪ್ರಸನ್ನ ಅವರ ಚಿತ್ರಗಳಲ್ಲಿರುವ ಕಪ್ಪಗಿನ ನೆರಳು (ಶೇಡ್), ಅವುಗಳ ಮೇಲೆ ಬೆಳಕಿನ ಬಿಂಬಗಳನ್ನು ಕಂಡಾಗ ಅಂದಿನ ಗುಹಾ ಚಿತ್ರಗಳು ನೆನಪಿಗೆ ಬರುತ್ತವೆ ಎಂದು ಪ.ಸ. ಕುಮಾರ್ ಹೇಳಿದರು.
ದೂರದರ್ಶನ ಚಂದನ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್. ಆರತಿ ಮಾತನಾಡಿ, ಪ್ರಸನ್ನ ನಿಂತಲ್ಲಿ ನಿಲ್ಲದ ಸದಾ ಚಲನಶೀಲ ವ್ಯಕ್ತಿ. ಅವರದು ಬಹು ಆಯಾಮದ ಕಲಾ ಬದುಕು. ಸದಾ ವಿಸ್ತರಿಸುತ್ತ ಸಾಗುವ ಇವರು ಬರೆದಿರುವ ಚಿತ್ರಗಳಲ್ಲಿ ಪ್ರಭುತ್ವ ಮತ್ತು ಮನುಷ್ಯ, ಮನುಷ್ಯ ಮತ್ತು ನಿಸರ್ಗ, ನಿಸರ್ಗ ಮತ್ತು ಸಂಘರ್ಷಗಳನ್ನು ಗುರುತಿಸಬಹುದು. ಇವರ ಚಿತ್ರಗಳು ಗೊತ್ತಾಗದೇ ಇರುವುದನ್ನು ಗೋಚರಿಸುವಂತೆ ಮಾಡುತ್ತದೆ. ಪ್ರಸನ್ನ ಏನೇ ಮಾಡಿದರೂ ತನ್ನನ್ನು ತೀವ್ರವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಖ್ಯಾತ ಸಾಹಿತಿ ಹಂಪನಾ ಮಾತನಾಡಿ, ಕಲಾವಿದರು ಕುಂಚ ಹಿಡಿದು ಹೊರಟರೆ ಜಗತ್ತು ಸುತ್ತಿಸುತ್ತಾರೆ. ಪ್ರಸನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಂತೆ ಚಿತ್ರ ಬರೆಯುವುದರಲ್ಲೂ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಪ್ರಸನ್ನ ಏನೇ ಮಾಡಿದರೂ ಸಂಪೂರ್ಣವಾಗಿ ಅದಕ್ಕೆ ಸಮರ್ಪಿಸಿಕೊಳ್ಳುತ್ತಾರೆ. ಅವರ ಚಿತ್ರಗಳ ಬೆಳಕು ಸದಾ ಬೆಳಗುತ್ತಿರಲಿ ಎಂದು ತಿಳಿಸಿದರು.
ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಖ್ಯಾತ ಕಲಾವಿಮರ್ಶಕ ರವೀಂದ್ರ ತ್ರಿಪಾಠಿ, ಪ್ರಸನ್ನ ಸದಾ ಪ್ರಯೋಗಶೀಲರು. ರಂಗಭೂಮಿಯೊಂದಿಗೆ ಚಿತ್ರ ಕಲೆಯಲ್ಲೂ ಅವರು ತೊಡಗಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ರಂಗಭೂಮಿಯಲ್ಲಿ ಇವರು ಮಾಡಿದ ಸಾಧನೆ ಚಿತ್ರ ರಚನೆಯಲ್ಲೂ ಆಗಲಿ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | RRB Recruitment 2025: ರೈಲ್ವೆ ನೇಮಕಾತಿ ಮಂಡಳಿಯಿಂದ 5,810 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಪದವಿ ಪೂರೈಸಿದವರು ಅಪ್ಲೈ ಮಾಡಿ
ಚಿತ್ರಕಲಾ ಪರಿಷತ್‌ನ ಗ್ಯಾಲರಿ 4ನಲ್ಲಿ ನಡೆಯುತ್ತಿರುವ ಪ್ರದರ್ಶನ ನವೆಂಬರ್ 2 ಭಾನುವಾರದವರೆಗೆ ಮುಂದುವರಿಯಲಿದೆ.