ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horrific Accident: ಕಾರಿನ ಮೇಲೆ ಬಿತ್ತು ಬೆಟ್ಟದಿಂದ ಉರುಳಿಬಂದ ಬಂಡೆ; ಸ್ಥಳದಲ್ಲೇ ಮಹಿಳೆ ಸಾವು

Woman Killed As Rock Falls: ಚಲಿಸುತ್ತಿದ್ದ ಕಾರಿನ ಮೇಲೆ ದೊಡ್ಡ ಬಂಡೆಯೊಂದು ಬಿದ್ದು, ಸನ್‌ರೂಫ್‌ ಛಿದ್ರಗೊಳಿಸಿ ಮಹಿಳೆಯೊಬ್ಬರ ತಲೆಗೆ ಬಡಿದ ಪರಿಣಾಮ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದ ಪರ್ವತ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮೃತ ಮಹಿಳೆಯನ್ನು 43 ವರ್ಷದ ಸ್ನೇಹಲ್ ಗುಜರಾತಿ ಎಂದು ಗುರುತಿಸಲಾಗಿದೆ. ಪುಣೆಯಿಂದ ಮಂಗಾವ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆಟ್ಟದಿಂದ ದೊಡ್ಡ ಬಂಡೆಯು ಕಾರಿನ ಮೇಲೆ ಬಿದ್ದಿದೆ. ಸನ್‌ರೂಫ್‌ ಅನ್ನು ಛಿದ್ರಗೊಳಿಸಿ ಮಹಿಳೆಯ ತಲೆಗೆ ಬಡಿದ ಪರಿಣಾಮ ಸ್ಥಳದಲ್ಲೇ ದುರ್ಮರಣಕ್ಕೀಡಾದರು.

ಕಾರಿನ ಮೇಲೆ ಬಿತ್ತು ಬೆಟ್ಟದಿಂದ ಉರುಳಿಬಂದ ಬಂಡೆ

-

Priyanka P Priyanka P Oct 30, 2025 11:27 PM

ಪುಣೆ: ಭೀಕರ ಅಪಘಾತವೊಂದರಲ್ಲಿ (Horrific accident), ಚಲಿಸುತ್ತಿದ್ದ ಕಾರಿನ ಮೇಲೆ ದೊಡ್ಡ ಬಂಡೆಯೊಂದು ಬಿದ್ದು, ಸನ್‌ರೂಫ್‌ ಅನ್ನು ಛಿದ್ರಗೊಳಿಸಿ ಮಹಿಳೆಯೊಬ್ಬರ ತಲೆಗೆ ಬಡಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಪರ್ವತ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ನಡೆದಿದೆ. ಮೃತ ಮಹಿಳೆಯನ್ನು 43 ವರ್ಷದ ಸ್ನೇಹಲ್ ಗುಜರಾತಿ ಎಂದು ಗುರುತಿಸಲಾಗಿದೆ.

ಪುಣೆಯಿಂದ ಮಂಗಾವ್‌ಗೆ ಪ್ರಯಾಣಿಸುತ್ತಿದ್ದ ಮಹಿಳೆಯು ವೋಕ್ಸ್‌ ವ್ಯಾಗನ್ ವರ್ಟಸ್‌ನಲ್ಲಿ ಸವಾರಿ ಮಾಡುತ್ತಿದ್ದರು. ಈ ವೇಳೆ ಕಾರಿನ ಮೇಲೆ ದೊಡ್ಡ ಬಂಡೆ ಬಿದ್ದಿದೆ. ಆ ಬಂಡೆಯು ಸನ್‌ರೂಫ್ ಅನ್ನು ಛಿದ್ರಗೊಳಿಸಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ತಲೆಗೆ ಬಡಿದಿದೆ. ಪರಿಣಾಮ ದೊಡ್ಡ ದುರಂತ ಸಂಭವಿಸಿದೆ. ಮಹಿಳೆಯು ಸ್ಥಳದಲ್ಲೇ ದುರ್ಮರಣಕ್ಕೀಡಾದರು.

ಪ್ರತ್ಯೇಕ ಘಟನೆಯಲ್ಲಿ, ಬುಧವಾರ ಬೆಳಿಗ್ಗೆ ಮುಂಬೈಯಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್ ಬೆಂಕಿಗೆ ಆಹುತಿಯಾಯಿತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೆದ್ದಾರಿಯ ನಾಗ್ಪುರ ಲೇನ್‌ನಲ್ಲಿ ಈ ಘಟನೆ ಸಂಭವಿಸಿದೆ. ಬಸ್‍ನಲ್ಲಿ ಚಾಲಕ ಮತ್ತು ಸಹಾಯಕರ ಜತೆ 12 ಮಂದಿ ಪ್ರಯಾಣಿಕರಿದ್ದರು. ಎಚ್ಚೆತ್ತ ಚಾಲಕ ತಕ್ಷಣ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಹೀಗಾಗಿ ಚಾಲಕನ ಸಮಯಪ್ರಜ್ಞೆಯಿಂದ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ಇದನ್ನೂ ಓದಿ: Crime News: ಪತ್ನಿ ವಿಡಿಯೊ ಕಾಲ್‌ ಮಾಡಿ ನಂತರ ಸೌದಿಯಲ್ಲಿ ಪತಿ ಆತ್ಮಹತ್ಯೆ

ಈ ತಿಂಗಳ ಆರಂಭದಲ್ಲಿ ಅಕ್ಟೋಬರ್ 18ರಂದು ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಮಿನಿ ಟ್ರಕ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು 15 ಜನರು ಗಾಯಗೊಂಡ ಘಟನೆ ನಡೆದಿದೆ. ಸುಮಾರು 40 ಜನರನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್ ಯಾತ್ರಾ ಸ್ಥಳದಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮರಕ್ಕೆ ಗೂಡ್ಸ್‌ ಡಿಕ್ಕಿಯಾಗಿ ಮೂವರ ದುರ್ಮರಣ

ಇನ್ನು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಸಾವಿಗೀಡಾಗಿದ್ದಾರೆ. ಗೊಂದಿ ಚಟ್ನಿಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರ್ಪೆಂಟರ್ ಕೆಲಸ ಮುಗಿಸಿ ಗೂಡ್ಸ್ ವಾಹನದಲ್ಲಿ ವಾಪಸ್ ಆಗುವ ವೇಳೆ ಈ ಭೀಕರವಾದ ಅಪಘಾತ ಸಂಭವಿಸಿದೆ. ನಿದ್ದೆ ಮಂಪರಿನಲ್ಲಿ ಚಾಲಕ ಗೂಡ್ಸ್ ವಾಹನ ಚಲಾಯಿಸುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೊಂದೆಡೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಟಿಪ್ಪರ್ ಲಾರಿ ಡಿಕ್ಕಿಯಾಗಿ ಇನ್ನೋವಾ ಕಾರು ಹೊತ್ತಿ ಉರಿದಿದೆ. ಕಾರಿನೊಳಗಿದ್ದ ಚಾಲಕ ಹೊರಗೆ ಬರಲಾಗದೆ ಸಜೀವ ದಹನವಾಗಿದ್ದಾರೆ. ಕಾರಿನಲ್ಲಿದ್ದ ಹುಣಸೂರು ಮೂಲದ ಚಂದ್ರಶೇಖರ್ ಸಜೀವ ದಹವಾಗಿದ್ದಾರೆ. ಕಾರಿನ ಬಾಗಿಲು ತೆಗೆಯಲಾಗದೆ ಚಾಲಕ ಚಂದ್ರಶೇಖರ್ ಸಿಲುಕಿಕೊಂಡಿದ್ದಾರೆ. ಕಾರು ಬೆಂಕಿಗಾಹುತಿಯಾಗಿದ್ದು, ಅವರು ಸಜೀವ ದಹನವಾಗಿದ್ದಾರೆ. ಶ್ರೀರಂಗಪಟ್ಟಣ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.