New year celebrations: ಅದ್ಧೂರಿಯಾಗಿ ಹೊಸ ವರ್ಷ ಸ್ವಾಗತಿಸಿದ ಬೆಂಗಳೂರಿಗರು; ರಂಗೇರಿದ ಪಾರ್ಟಿ, ಪಟಾಕಿ ಸಿಡಿಸಿ ಸಂಭ್ರಮ
New Year 2026: ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಜನರು ಸಂಭ್ರಮದಿಂದ 2026ರ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಬುಧವಾರ ರಾತ್ರಿ ಪಬ್, ಬಾರ್‌ಗಳು ಜನರಿಂದ ತುಂಬಿ ತುಳುಕಿದವು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬೆಂಗಳೂರಿನ ಕೋರಮಂಗಲದ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಸೇರಿದ ಜನಸಾಗರ. (ಚಿತ್ರಗಳು: ಸುಧಾಕರ್ ದೇವರಾಜ್, ವಿಶ್ವವಾಣಿ) -
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಾದ್ಯಂತ ಜನರು ಬುಧವಾರ ರಾತ್ರಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಸಿಲಿಕಾನ್ ಸಿಟಿಯ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿ ಪ್ರಮುಖ ಪ್ರದೇಶಗಳ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಜನರಿಂದ ತುಂಬಿ ತುಳುಕಿದವು. ಯುವ ಜನತೆ ಪಟಾಕಿ ಸಿಡಿಸಿ, ಡಿಜೆ ಹಾಡುಗಳಿಗೆ ಕುಣಿಯುವ ಮೂಲಕ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನಸಾಗರವೇ ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಮಧ್ಯೆ ರಾತ್ರಿ 12 ಗಂಟೆ ಆಗುತ್ತಿದ್ದಂತೆ ಎಲ್ಲೆಡೆ ಪಟಾಕಿ ಸಿಡಿಸಿ, ಕೇಕ್ ಕಟ್ ಮಾಡಿ, ಸಿಹಿ ಹಂಚುವ ಮೂಲಕ ಜನರು ಸಂಭ್ರಮಾಚರಣೆ ನಡೆಸಿದರು.
ಎಂಜಿ ರಸ್ತೆಯಲ್ಲಿ ಸಂಭ್ರಮಾಚರಣೆಗೆ 1 ಗಂಟೆ ಕಾಲ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಜನರನ್ನು ಪೊಲೀಸ್ ಸಿಬ್ಬಂದಿ ಸ್ಥಳದಿಂದ ವಾಪಸ್ ಕಳುಹಿಸಿದರು. ಕುಡಿದು ತೂರಾಡುತ್ತಾ ಇದ್ದವರನ್ನು ಸ್ಥಳದಿಂದ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರೇ ಸ್ವತಃ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಹೊಸ ವರ್ಷಾಚರಣೆ ಅಂಗವಾಗಿ ನಗರದ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿತ್ತು. ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ ನಗರದ ಹಲವು ಫ್ಲೈಓವರ್‌ಗಳ ಮೇಲೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬ೦ಧ ವಿಧಿಸಲಾಗಿತ್ತು.
#WATCH | Bengaluru, Karnataka | Fireworks illuminate the night sky as people ring in #NewYear2026 pic.twitter.com/UIqXOkGOVE
— ANI (@ANI) December 31, 2025
ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ನಗರದ ಹಲವು ಮೇಲ್ಸೇತುವೆಗಳಲ್ಲಿ (ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ) ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆಯಲ್ಲೂ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.
#WATCH | Karnataka | People gather in large numbers at Bengaluru's MG Road to ring in #NewYear2026 pic.twitter.com/GJhzHNYEfJ
— ANI (@ANI) December 31, 2025
ಇನ್ನು ನೈಸ್ ರಸ್ತೆಯಲ್ಲಿ ರಾತ್ರಿ 8ರಿಂದಲೇ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ರಾತ್ರಿ 10 ಗಂಟೆಯ ನಂತರ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣ ಬಂದ್ ಆಗಿತ್ತು. ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳಿಂದ ಜನರು ಎಂಜಿ ರಸ್ತೆ ಕಡೆ ಸಾಗಿದರು.