ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ತರಕಾರಿಯಲ್ಲಿ ವಿಷಕಾರಿ ಅಂಶಕ್ಕೆ ಅತಿಯಾದ ರಾಸಾಯನಿಕಗಳ ಬಳಕೆ ಕಾರಣ: ಸುತಾರಿಯಾ

ಬೆಂಗಳೂರಿನ ಕುಮಾರ ಪಾರ್ಕ್‌ನ ಗಾಂಧಿಭವನದಲ್ಲಿ ದಿ ಫಾರ್ವರ್ಡ್ ಫೌಂಡೇಶನ್ ವತಿಯಿಂದ ಸಾವಯವ ಕೃಷಿಯಲ್ಲಿ ʼಗೋಕೃಪಾಮೃತ; ಮಹತ್ವ ಸಾರಲು ರೈತರೊಂದಿಗಿನ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಗುಜರಾತ್‌ನ ಪ್ರಸಿದ್ಧ ಬನ್ಸಿ ಗಿರ್ ಗೋಶಾಲಾ ಖ್ಯಾತಿಯ ಗೋಪಾಲ್ ಭಾಯ್ ಸುತಾರಿಯಾ ಅವರು ಮಾತನಾಡಿದ್ದಾರೆ.

ತರಕಾರಿಯಲ್ಲಿ ವಿಷಕಾರಿ ಅಂಶಕ್ಕೆ ಅತಿಯಾದ ರಾಸಾಯನಿಕಗಳ ಬಳಕೆ ಕಾರಣ

-

Prabhakara R
Prabhakara R Mar 1, 2026 8:51 PM

ಬೆಂಗಳೂರು, ಮಾರ್ಚ್‌ 1: ಇಡೀ ದೇಶದಲ್ಲಿಯೇ ಕರ್ನಾಟಕ ಭೌಗೋಳಿಕ ಮತ್ತು ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದು, ಗೋಕೃಪಾಮೃತ ಆಧಾರಿತ ಸಾವಯವ ಕೃಷಿಯಲ್ಲಿ ತೊಡಗುವ ಮೂಲಕ ಕರ್ನಾಟಕವನ್ನು ಕೃಷಿ ಮಾದರಿ ರಾಜ್ಯವನ್ನಾಗಿಸುವಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಜ್ಯದ ಕೃಷಿಕರಿಗೆ ಗುಜರಾತ್‌ನ ಪ್ರಸಿದ್ಧ ಬನ್ಸಿ ಗಿರ್ ಗೋಶಾಲಾ ಖ್ಯಾತಿಯ ಗೋಪಾಲ್ ಭಾಯ್ ಸುತಾರಿಯಾ ಅವರು ಕರೆ ನೀಡಿದರು.

ಭಾನುವಾರ ಇಲ್ಲಿನ ಕುಮಾರ ಪಾರ್ಕ್‌ನ ಗಾಂಧಿಭವನದಲ್ಲಿ ದಿ ಫಾರ್ವರ್ಡ್ ಫೌಂಡೇಶನ್ ವತಿಯಿಂದ ಸಾವಯವ ಕೃಷಿಯಲ್ಲಿ 'ಗೋಕೃಪಾಮೃತ' ಮಹತ್ವ ಸಾರಲು ಆಯೋಜಿಸಿದ್ದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ರಾಸಾಯನಿಕ, ಸಿಂಪರಣೆಗಳನ್ನು ಬಳಸುವುದರಿಂದ ಭೂಮಿ ಹದ ತಪ್ಪುತ್ತಿದೆ. ಪದೇ ಪದೇ ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ ತರಕಾರಿ, ಆಹಾರ ಧಾನ್ಯಗಳು ವಿಷವಾಗುತ್ತಿವೆ. ಇದನ್ನು ಸೇವಿಸುವ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದಲ್ಲಿನ ತರಕಾರಿಗಳಲ್ಲಿ ವಿಷಕಾರಕ ರಾಸಾಯನ ಇರುವುದು ಪತ್ತೆಯಾಗಿದೆ. ಇದಕ್ಕೆ ರಾಸಾಯನಿಕಗಳ ಬಳಕೆಯಿಂದ ಭೂಮಿಯಲ್ಲಿನ ಸತ್ವ ನಾಶವಾಗುವ ಜತೆಗೆ ವಿಷಕಾರಕ ಅಂಶಗಳಾಗಿ ಮಾರ್ಪಡುತ್ತಿವೆ ಎಂದರು. ಇದರಿಂದ ಜನರು ವರ್ಷದಿಂದ ವರ್ಷಕ್ಕೆ ತಮ್ಮ ಉದರ ಬೇನೆ, ಹೃದಯ ಸಂಬಂಧಿ ಸೇರಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಆಗ ಮಾತ್ರ ನಾವು ಸೇವಿಸುವ ಆಹಾರ ಮತ್ತು ಖಾದ್ಯಗಳು ಆರೋಗ್ಯಪೂರ್ಣವಾಗಿರುತ್ತವೆ ಎಂದರು.

ಸಾವಯುವ ಕೃಷಿ ಪದ್ಧತಿ ಅಳವಡಿಕೆಯಿಂದ ರೈತನಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ತಾವು ಅನುಸರಿಸುತ್ತಿರುವ ಪದ್ಧತಿ ಮತ್ತು ಗೋಕೃಪಾಮೃತ ಬಳಕೆಯಿಂದ ದೇಶದ ವಿವಿಧೆಡೆ ರೈತರು ಉತ್ತಮ ಫಸಲು ಪಡೆದಿರುವುದನ್ನು ಚಿತ್ರ ಸಹಿತ ವಿವರಿಸಿದ ಅವರು, ರಾಜ್ಯದಲ್ಲೂ ಈ ಪದ್ಧತಿ ಬಳಕೆಯಿಂದ ಉತ್ತಮ ಆದಾಯದ ಜತೆಗೆ ಜನರಿಗೆ ಸತ್ವಭರಿತ ಹಣ್ಣು- ತರಕಾರಿ ಒದಗಿಸುತ್ತಿರುವ ರೈತರ ಯಶೋಗಾಥೆಗಳನ್ನು ಸುತಾರಿಯಾ ವಿವರಿಸಿದರು.

ಗೋಮಾತೆಯನ್ನು ಖುಷಿಯಿಂದ ಸಲಹುವ ಮತ್ತು ಆ ಮೂಲಕ ಸಾವಯುವ ಕೃಷಿ ಪದ್ಧತಿಯಲ್ಲಿ ತೊಡಗಿಕೊಳ್ಳುವ ಬಗೆಯನ್ನು ಅಚ್ಚುಕಟ್ಟಾಗಿ ವಿವರಿಸಿದ ಅವರು, ಸಾವಯುವ ಕೃಷಿ ದುಬಾರಿ ಅಲ್ಲ, ಇದು ಸಲೀಸಾದ ಉತ್ತಮ ಪದ್ಧತಿ, ಇದರಿಂದ ಭೂಮಿಯ ಸತ್ವ ಹೆಚ್ಚಲಿದೆ. ಉತ್ತಮ ಇಳುವರಿ ಬರಲಿದೆ. ರೈತನೂ ಆದಾಯಗಳಿಸಬಹುದು ಮತ್ತು ಆರೋಗ್ಯವಂತ ಸಮಾಜಕ್ಕೂ ಕೊಡುಗೆ ನೀಡಬಹುದು ಎಂದು ಸಾರಿ ಹೇಳಿದ ಸುತಾತಿಯಾ, ದೇಶದಲ್ಲಿ ರೈತನನ್ನು ಮತ್ತು ಅವನ ಕುಟುಂಬ ಸದಸ್ಯರನ್ನು ಗೌರವದಿಂದ ಕಾಣುವ ಮನಸ್ಥಿತಿ ಬೆಳೆಯಬೇಕು. ಇದರಿಂದ ಕೃಷಿಯತ್ತ ಹೆಚ್ಚು ಮಂದಿ ಆಸಕ್ತಿ ವಹಿಸುತ್ತಾರೆ. ರೈತನ ಮಕ್ಕಳು "ಎಸ್‌ ಬಾಸ್" ಎಂದು ಯಾರಿಗೋ ಸಲಾಮ್‌ ಹೊಡೆದು ಬದುಕುವ ಬದಲು ಕೃಷಿಯಲ್ಲಿ ತೊಡಗಿಕೊಂಡು ದೇಶದ ಆಹಾರ ವ್ಯವಸ್ಥೆಯನ್ನು ಸುಭದ್ರಗೊಳಿಸುತ್ತಾರೆ ಎಂದು ಪ್ರತಿಪಾದಿಸಿದರು.

ಖ್ಯಾತ ಕೃಷಿ ಸಂಶೋಧಕರಾದ ಕೃಷ್ಣಮೂರ್ತಿ ಅವರು ಮಾತನಾಡಿ, ಗೋವು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದು ನಮ್ಮ ತಾಯಿ. 5 ಸಾವಿರ ವರ್ಷಗಳ ಹಿಂದೆ ಲೋಹದ ಆವಿಷ್ಕಾರವಾದಾಗಿನಿಂದ ಕೃಷಿ ಪದ್ಧತಿ ಜಾರಿಗೆ ಬಂದಿದೆ. ಕೃಷಿ ಗೋ ಪ್ರಧಾನವಾದದ್ದು. ತಾಯಿಯ ಹಾಲಿಗೆ ಪರ್ಯಾಯವಾಗಿ ಗೋವಿನ ಹಾಲು ನೀಡಲಾಗುತ್ತಿದೆ. ಹಾಗಾಗಿ ಗೋವಿಗೆ ಮಾತೃವೆಂಬ ಪರಿಕಲ್ಪನೆ ನೀಡಲಾಗಿದೆ. ಆನೆ, ಕುದುರೆ, ನಾಯಿಗಳ ಬಗ್ಗೆ ಯೋಚನೆ ಮಾಡುವ ನಾವುಗಳು ಇಂದು ಗೋವಿನ ಬಗ್ಗೆ ಆಲೋಚನೆ ಮಾಡುವುದಿಲ್ಲ. ಮನುಷ್ಯ ಕೇಂದ್ರಿತ ಯೋಚನೆಗಳು ಇಂದು ಮಾನವ ಕುಲಕ್ಕೆ ಕಂಟಕವಾಗುತ್ತಿವೆ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ೧೦ ಹಸುಗಳು ಇದ್ದರೆ ಸಾಕು, ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ತೆಗೆದು ವಾರ್ಷಿಕ ೨-೩ ಲಕ್ಷ ಸಂಪಾದನೆ ಉಳಿತಾಯ ಮಾಡಬಹುದು. ಹಳ್ಳಿಗಳಲ್ಲಿ ಗೋವಿನ ಮಹತ್ವ ಮತ್ತು ಸಾವಯವ ಕೃಷಿಯ ಪ್ರಾಧಾನ್ಯತೆ ಕುರಿತು ಹೆಚ್ಚಿನ ಪ್ರಚಾರ ಕಾರ್ಯಗಳು ನಡೆಯಬೇಕೆಂದರು.

ದಯಾನಂದ್ ಸಾಗರ್ ಸಂಜೆ ಕಾಲೇಜಿನ ಪ್ರಾಚಾರ್ಯ ಡಾ.ನರೇಂದ್ರ ಅವರು ಮಾತನಾಡಿ, ಒತ್ತಡದ ಬದುಕಿನಲ್ಲಿ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಿ ಅನಾರೋಗ್ಯಕ್ಕೆ ಈಡಾಗುತ್ತಿರುವ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಲಭ್ಯವಾಗಬೇಕು. ದೇಶೀ ಕೃಷಿ ಪದ್ಧತಿಯಡಿ ಸಾವಯವ ಬೇಸಾಯವನ್ನು ರೂಢಿಸಿಕೊಳ್ಳಬೇಕು. ಗೋಕೃಪಾಮೃತ ಯೋಜನೆಯನ್ನು ಎಲ್ಲ ಹಳ್ಳಿಗಳಿಗೂ ತಲುಪಿಸುವ ವ್ಯವಸ್ಥೆ ಮಾಡಬೇಕು. ದೇಶದಲ್ಲಿ 6 ಲಕ್ಷ ಹಳ್ಳಿಗಳಿವೆ. ಈ ಪೈಕಿ ಶೇ. 69 ರಷ್ಟು ಮಾತ್ರ ಕೃಷಿ ಭೂಮಿ ಇದೆ. ಮುಂದಿನ ಪೀಳಿಗೆ ಸದೃಢವಾಗಬೇಕೆಂದರೆ ಸಾವಯವ ಕೃಷಿ ಪದ್ಧತಿ ಎಲ್ಲೆಡೆ ಅನುಸರಿಸಬೇಕು. ಅಯೋಧ್ಯೆ ಮಂದಿರ ನಿರ್ಮಾಣವಾಗಬೇಕೆಂಬ ಕೂಗು ಎಷ್ಟು ಮಹತ್ವ ಪಡೆದಿತ್ತು, ಅದೇ ಮಾದರಿಯಲ್ಲಿ ಗೋ ರಕ್ಷಣೆಯ ಕೂಗು ಇದಕ್ಕಿಂತಲೂ ಪೂರ್ವದಲ್ಲಿಯೇ ಇತ್ತು. ಹೆಚ್.ಎಫ್., ಜರ್ಸಿಯಂತಹ ಅವೈಜ್ಞಾನಿಕ ತಳಿಗಳು ಬರಬಾರದು. ಹೀಗಾದಾಗ ದೇಶೀ ತಳಿಗಳು ನಶಿಸಿ ಹೋಗುತ್ತವೆ. ಈಗ ಉಳಿದಿರುವುದು ಕೇಲ 33 ತಳಿಗಳು ಮಾತ್ರ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಆಂಜನೇಯ ರೆಡ್ಡಿ ಅವರು ಮಾತನಾಡಿ, ರೈತರ ಇತ್ತೀಚಿನ ಕೃಷಿ ಸಮಸ್ಯೆ ಬಿಗಡಾಯಿಸುತ್ತಿದೆ. ಕೃಷಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆಹಾರ ಉತ್ಪಾದನೆಗೆ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಬೆಂಗಳೂರಿಗೆ ಸರಬರಾಜಾಗುವ ಆಹಾರ ಧಾನ್ಯಗಳು, ತರಕಾರಿ ಸೊಪ್ಪುಗಳಲ್ಲಿ ವಿಷಕಾರಕ ಅಂಶಗಳು ಪತ್ತೆಯಾಗಿವೆ. ಇಲ್ಲಿ ಅನೇಕ ಜನರು ಬುದ್ಧಿವಂತರು, ಅಧಿಕಾರಿಗಳು, ರಾಜಕಾರಣಿಗಳು ಇದ್ದರೂ ಈ ಕುರಿತು ವಿರೋಧ ವ್ಯಕ್ತಪಡಿಸುತ್ತಿಲ್ಲ. ಹಾಪ್ ಕಾಮ್ಸ್ ಇನ್ನಿತರೆ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ಮಾಡುವ ತರಕಾರಿ, ಹಣ್ಣುಗಳಲ್ಲೂ ಇದೇ ಅಂಶ ಪತ್ತೆಯಾಗಿದೆ. ಹೀಗಾದರೆ ಹೇಗೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ? ನೀರು, ಮಣ್ಣು ಪರಿಶೀಲಿಸಿ ಇದರ ಗುಣ ಮಟ್ಟ ಕಾಯ್ದುಕೊಳ್ಳಬೇಕಿದೆ. ರೈತರು ವಿಷಪೂರಿತ ಆಹಾರ ಧಾನ್ಯ, ತರಕಾರಿ ಸೊಪ್ಪುಗಳನ್ನು ತಾವು ಬೆಳೆದು ಸೇವಿಸಿ, ಇತರರಿಗೂ ಹಂಚುವ ದೌರ್ಭಾಗ್ಯ ದಿನಗಳು ಬಂದಿರುವುದು ವೈಪರೀತ್ಯವಾಗಿದೆ ಎಂದು ತಮ್ಮ ನೋವನ್ನು ಹಂಚಿಕೊಂಡರು.

Bengaluru news: ಸಿಲಿಕಾನ್‌ ಸಿಟಿಗೆ ಬರುವ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ

ದಿ ಫಾರ್ವರ್ಡ್ ಫೌಂಡೇಶನ್ ಸ್ಥಾಪಕ ಸದಸ್ಯರು ಮತ್ತು ಅಧ್ಯಕ್ಷರಾದ ಜಿ.ವಿ.ಕೃಷ್ಣ ಸೇರಿದಂತೆ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಮಲೆನಾಡ ಗಿಡ್ಡ ತಳಿಯ ಸಂರಕ್ಷಕ ಶೈಲೇಶ್ ನಿರೂಪಿಸಿದರೆ, ಕಾರ್ತೀಕ್ ಅವರು ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿನಿಯರಾದ ಲಹರಿ, ವಿಷ್ಣುಪ್ರಿಯ, ಶ್ರೇಯ ಮತ್ತು ತಂಡದವರು ಪ್ರಾರ್ಥಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಸಕ್ತ ಸಾವಯವ ಕೃಷಿಕರು ಆಗಮಿಸಿ ಗೋಪಾಲ್ ಭಾಯ್ ಸುತಾರಿಯಾ ಅವರೊಂದಿಗೆ ಸಂವಾದ ನಡೆಸಿದರು.