Cabinet meeting: ಹೊಸ ಒಳ ಮೀಸಲಾತಿ ಅನ್ವಯ 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ: ಸಿಎಂ ಘೋಷಣೆ
Govt Job Recruitment: ಎಡಗೈ 5.25, ಬಲಗೈ 5.25 ಹಾಗೂ ಇತರೆ ವರ್ಗದವರಿಗೆ 4.5 ಒಳ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ 56,432 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ. -
ಬೆಂಗಳೂರು: ವಿಶೇಷ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25 ಹಾಗೂ ಇತರೆ ಸಮುದಾಯಕ್ಕೆ 4.5 ಒಳ ಮೀಸಲಾತಿ (internal reservation) ಕಲ್ಪಿಸಲು ನಿರ್ಧರಿಸಲಾಗಿದೆ. ಅದರಂತೆ 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಬಜೆಟ್ ನಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೇ ಒಳ ಮೀಸಲಾತಿ ಅಂತಿಮವಾಗದ ಹಿನ್ನೆಲೆ ನೇಮಕಾತಿಗೆ ಅಡ್ಡಿಯಾಗಿತ್ತು. ಈಗ ಎಡಗೈ 5.25, ಬಲಗೈ 5.25 ಹಾಗೂ ಇತರೆ ವರ್ಗದವರಿಗೆ 4.5 ಒಳ ಮೀಸಲಾತಿ ಕಲ್ಪಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ 56,432 ಹುದ್ದೆಗಳ ನೇಮಕಾತಿಗೆ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲಾಗುವುದು. ಕೋರ್ಟ್ ಮುಂದಿನ ಆದೇಶದವರೆಗೂ ನೂತನ ಒಳ ಮೀಸಲಾತಿಯ ಅನುಸಾರವೇ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದು ತಿಳಿಸಿದರು.
ಒಳ ಮೀಸಲಾತಿ ಸಂಬಂಧ ಬಹಳಷ್ಟು ಹೋರಾಟಗಳು ನಡೆದಿವೆ. ಪಕ್ಷದ ವತಿಯಿಂದಲೂ ಚಿತ್ರದುರ್ಗದಲ್ಲಿ ಒಂದು ಸಮಾವೇಶ ಏರ್ಪಾಡು ಮಾಡಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲೂ ಒಳಮೀಸಲಾತಿ ಬಗ್ಗೆ ಭರವಸೆ ನೀಡಲಾಗಿತ್ತು. 1-08-2024ರಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಮಾಡಬಹುದು ಎಂದು ತೀರ್ಪು ನೀಡಿತ್ತು. ಆ ತೀರ್ಪಿನ ನಂತರ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಅವರು ವರದಿಯನ್ನು ನೀಡಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಇರಿಸಿ, ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ನಾಗಮೋಹನ್ ದಾಸ್ ನೀಡಿದಂತ ವರದಿಯಲ್ಲಿ ಎ, ಬಿ, ಸಿ, ಡಿ ಎಂಬುದಾಗಿ ವರ್ಗ ಮಾಡಿ ಮೀಸಲಾತಿ ನೀಡಲಾಗಿತ್ತು. ಎಡಗೈ 6, ಬಲಗೈ 6, ಇತರರಿಗೆ 5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿತ್ತು. ಆದರೇ ರೋಷ್ಟರ್ ಪಾಯಿಂಟ್‌ನಲ್ಲಿ ಸಮಸ್ಯೆ ಆಗಿತ್ತು. ಅಲೆಮಾರಿಯವರು ಕೋರ್ಟ್‌ಗೆ ಹೋದರು. ಮೀಸಲಾತಿ 50% ಗಿಂತ ಜಾಸ್ತಿಯಾಗಬಾರದು ಎಂಬುದಾಗಿ ಕೋರ್ಟ್ ತಿಳಿಸಿದೆ.
Internal Reservation: ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ; ಯಾವ ಸಮುದಾಯಗಳಿಗೆ ಎಷ್ಟು?
ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಗೊಂದಲ ಪರಿಹರಿಸಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಿದ್ದೆವು. ಅವರು ಇಂದು ತಮ್ಮ ವರದಿಯನ್ನು ನೀಡಿದ್ದಾರೆ. ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3, ಇತರಿಗೆ 4.4 ರೋಸ್ಟರ್‌ನಂತೆ ಮೀಸಲಾತಿ ನಿಗದಿ ಪಡಿಸಲು ವರದಿ ನೀಡಲಾಗಿದೆ. ನಾವು ಅಂತಿಮವಾಗಿ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರೋದು ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25, ಇತರೆ ಸಮುದಾಯಕ್ಕೆ 4.5 ಮೀಸಲಾತಿ ಕಲ್ಪಿಸಲು ನಿರ್ಧರಿಸಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.