ಆರ್‌ಎಸ್‌ಎಸ್‌ನ ಹಣಕಾಸಿನ ಬಗ್ಗೆ ಪ್ರಶ್ನಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕಾಂಗ್ರೆಸ್ ಹಿರಿಯ ನಾಯಕ ಬೆಂಬಲ
Husain Dalwai: ಆರ್‌ಎಸ್‌ಎಸ್‌ನ ಕಾರ್ಯವೈಖರಿ ಮತ್ತು ಹಣಕಾಸಿನ ಬಗ್ಗೆ ಕಾಂಗ್ರೆಸ್ ಪದೇ ಪದೇ ಕಳವಳ ವ್ಯಕ್ತಪಡಿಸಿದೆ. ಈ ಪ್ರಶ್ನೆಗಳನ್ನು ಬಹಳ ಮೊದಲೇ ಎತ್ತಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಅವರು ಅವುಗಳನ್ನು ಸಾರ್ವಜನಿಕ ಚರ್ಚೆಗೆ ತರುವಲ್ಲಿ ಧೈರ್ಯವನ್ನು ತೋರಿಸಿದ್ದಾರೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹುಸೇನ್ ದಲ್‌ವಾಯಿ ಹೇಳಿದರು.
ಹುಸೇನ್ ದಲ್‌ವಾಯಿ, ಮೋಹನ್ ಭಾಗವತ್ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ.18: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಹುಸೇನ್ ದಲ್‌ವಾಯಿ ಅವರು, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಆರ್‍ಎಸ್ಎಸ್ (RSS) ಬಗ್ಗೆ ಇತ್ತೀಚೆಗೆ ಮಾಡಿದ್ದ ಬೇಡಿಕೆಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwath) ಅವರಿಗೆ ಖರ್ಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ದಲ್‌ವಾಯಿ, ಸಂಸ್ಥೆಯ ನೋಂದಣಿ, ಹಣಕಾಸು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದಂತೆ ಪ್ರಮುಖ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಹೇಳಿದರು.
ಆರ್‌ಎಸ್‌ಎಸ್‌ನ ಕಾರ್ಯವೈಖರಿ ಮತ್ತು ಹಣಕಾಸಿನ ಬಗ್ಗೆ ಕಾಂಗ್ರೆಸ್ ಪದೇ ಪದೇ ಕಳವಳ ವ್ಯಕ್ತಪಡಿಸಿದೆ. ಈ ಪ್ರಶ್ನೆಗಳನ್ನು ಬಹಳ ಮೊದಲೇ ಎತ್ತಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಅವರು ಅವುಗಳನ್ನು ಸಾರ್ವಜನಿಕ ಚರ್ಚೆಗೆ ತರುವಲ್ಲಿ ಧೈರ್ಯವನ್ನು ತೋರಿಸಿದ್ದಾರೆ ಎಂದು ದಲ್‌ವಾಯಿ ಹೇಳಿದರು. ಆರ್‌ಎಸ್‌ಎಸ್ ಸ್ವೀಕರಿಸುವ ನಿಧಿಯ ಮೂಲಗಳು ಮತ್ತು ಆ ಹಣವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಕುರಿತು ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.
“ಹಣ ಎಲ್ಲಿಂದ ಬರುತ್ತಿದೆ ಮತ್ತು ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಗಂಭೀರ ತನಿಖೆ ನಡೆಯಬೇಕು. ಧರ್ಮ, ದೇವಾಲಯಗಳು ಮತ್ತು ಇತರ ಸಂಸ್ಥೆಗಳ ಹೆಸರಿನಲ್ಲಿ ಸಂಗ್ರಹಿಸಲಾದ ನಿಧಿಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಅಂತಹ ಹಣವು ಅಂತಿಮವಾಗಿ ಆರ್‌ಎಸ್‌ಎಸ್ ಅಥವಾ ಬಿಜೆಪಿಗೆ ತಲುಪುತ್ತದೆಯೇ ಎಂಬ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ” ಎಂದು ದಲ್‌ವಾಯಿ ಆರೋಪಿಸಿದರು.
ಧಾರ್ಮಿಕ ಮಾರ್ಗಗಳ ಮೂಲಕ ಹಣದ ಹರಿವು ಮತ್ತು ದೇವಾಲಯದ ದೇಣಿಗೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಕಳವಳವಿದೆ ಎಂದು ಅವರು ಹೇಳಿದರು.
ಪ್ರಸ್ತುತ ಸರ್ಕಾರ ಅಂತಹ ಯಾವುದೇ ತನಿಖೆಗೆ ಆದೇಶಿಸುತ್ತದೆಯೇ ಎಂಬ ಬಗ್ಗೆ ದಲ್‌ವಾಯಿ ಸಂದೇಹ ವ್ಯಕ್ತಪಡಿಸಿದರು. ದುರದೃಷ್ಟವಶಾತ್, ಸರ್ಕಾರ ಈ ವಿಷಯಗಳ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಕಡಿಮೆ. ಆದರೆ, ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಅತ್ಯಗತ್ಯ. ಅಂತಹ ವ್ಯಾಪಕ ಪ್ರಭಾವ ಹೊಂದಿರುವ ಸಂಸ್ಥೆಗಳು ತಮ್ಮ ಹಣಕಾಸಿನ ಬಗ್ಗೆ ಮುಕ್ತವಾಗಿರಬೇಕು ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ವಿದೇಶಿ ಮೂಲಗಳಿಂದ ಹಣವನ್ನು ಪಡೆಯುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಯಾವುದೇ ವಿದೇಶಿ ಹಣಕಾಸು ಸಂಪರ್ಕಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದ್ದಾರೆ. ರಾಮ ಮಂದಿರ ಯೋಜನೆಗಾಗಿ ಸಂಗ್ರಹಿಸಿದ ಹಣದ ಬಗ್ಗೆ ತನಿಖೆ ನಡೆಸಬೇಕೆಂದು ಭಾಗವತ್ ಸಾರ್ವಜನಿಕವಾಗಿ ಏಕೆ ಒತ್ತಾಯಿಸಲಿಲ್ಲ ಎಂದೂ ಅವರು ಪ್ರಶ್ನಿಸಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಭಾಗವತ್ ಅವರಿಗೆ ಪತ್ರ ಬರೆದು ಆರ್‌ಎಸ್‌ಎಸ್‌ನ ಕಾನೂನು ಸ್ಥಿತಿ, ಸಾಂಸ್ಥಿಕ ರಚನೆ, ಹಣಕಾಸಿನ ಮೂಲಗಳು, ಖರ್ಚು, ಸ್ವತ್ತುಗಳು ಮತ್ತು ತೆರಿಗೆ ಕುರಿತು ವಿವರಗಳನ್ನು ಕೋರಿ ಪತ್ರ ಬರೆದಿದ್ದರಿಂದ ಉಂಟಾದ ರಾಜಕೀಯ ಚರ್ಚೆಯ ಮಧ್ಯೆ ದಲ್‌ವಾಯಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋಹನ್ ಭಾಗವತ್ ಅವರು ಬೇಡಿಕೆಯನ್ನು ತಿರಸ್ಕರಿಸಿದರು. ಇದು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದರು. ಆರ್‌ಎಸ್‌ಎಸ್ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತದೆ, ಸರ್ಕಾರಿ ನಿಧಿಯನ್ನು ಅವಲಂಬಿಸಿಲ್ಲ. ಹೀಗಾಗಿ ಖರ್ಗೆ ಸೂಚಿಸಿದ ರೀತಿಯಲ್ಲಿ ನೋಂದಣಿ ಅಗತ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.