Actor Darshan: ದರ್ಶನ್‌ಗೆ ಜೈಲಲ್ಲಿ ಕನಿಷ್ಠ ಸೌಲಭ್ಯ ಸಿಗುತ್ತಿಲ್ವಾ?; ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?
Bengaluru News: ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್‌ನ ನ್ಯಾ.ಐ.ಪಿ.ನಾಯ್ಕ್ ಅವರು ದರ್ಶನ್ ಅರ್ಜಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾನೂನು ಸೇವಾ ಪ್ರಾಧಿಕಾರದ ವರದಿಯನ್ನು ತಮಗೂ ನೀಡುವಂತೆ ಆರೋಪಿಗಳ ಪರ ವಕೀಲರು ಕೇಳಿದ್ದಾರೆ. ಅಲ್ಲದೇ ವರದಿ ಅಧ್ಯಯನಕ್ಕೆ ಸಮಯಾವಕಾಶ ಕೇಳಿದ್ದರಿಂದ ವಿಚಾರಣೆ ಅಕ್ಟೋಬರ್ 24ಕ್ಕೆ ಮುಂದೂಡಿಕೆಯಾಗಿದೆ.

-

ಬೆಂಗಳೂರು: ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಲು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ಶನಿವಾರ ನಡೆದಿದೆ. ಈ ವೇಳೆ ನಟ ದರ್ಶನ್‌ಗೆ (Actor Darshan) ಜೈಲಿನಲ್ಲಿ ನೀಡಿರುವ ಸೌಲಭ್ಯಗಳ ಬಗ್ಗೆ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ್ ಅವರು ವರದಿ ಸಲ್ಲಿಕೆ ಮಾಡಿದ್ದಾರೆ.
64ನೇ ಸೆಷನ್ಸ್ ಕೋರ್ಟ್‌ನ ನ್ಯಾ.ಐ.ಪಿ.ನಾಯ್ಕ್ ಅವರು ಅರ್ಜಿ ವಿಚಾರಣೆ ನಡೆಸಿದ್ದು, ಈ ವೇಳೆ ಕಾನೂನು ಸೇವಾ ಪ್ರಾಧಿಕಾರದ ವರದಿಯನ್ನು ತಮಗೂ ನೀಡುವಂತೆ ಆರೋಪಿಗಳ ಪರ ವಕೀಲರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಎಂದು ಸೂಚಿಸಿದ್ದಾರೆ. ಇನ್ನು ವರದಿ ಅಧ್ಯಯನ ಮಾಡಿ ವಾದಿಸಲು ಸಮಯಾವಕಾಶ ಬೇಕೆಂದು ವಕೀಲರು ಕೋರಿದ್ದರಿಂದ ವಿಚಾರಣೆಯನ್ನು ಅಕ್ಟೋಬರ್ 24 ಕ್ಕೆ ಮುಂದೂಡಲಾಗಿದೆ.
ವರದಿಯಲ್ಲಿ ಏನಿದೆ?
ನಟ ದರ್ಶನ್ ಪರ ವಕೀಲರು ಎತ್ತಿದ್ದ ಎಲ್ಲಾ ತಕರಾರುಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ದರ್ಶನ್ ಬ್ಯಾರಕ್‌ನಲ್ಲಿ ಒಂದು ಇಂಡಿಯನ್, ಒಂದು ವೆಸ್ಟರ್ನ್ ಟಾಯ್ಲೆಟ್ ಇದೆ. ದರ್ಶನ್‌ಗೆ ಹಾಸಿಗೆ ದಿಂಬು ಕೊಟ್ಟಿಲ್ಲವೆಂಬ ಆರೋಪವಿದೆ. ಆದರೆ, ಕೊಲೆ ಆರೋಪಿ ಹಾಗೂ ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬಿಗೆ ಅವಕಾಶವಿಲ್ಲ ವರದಿಯಲ್ಲಿ ತಿಳಿಸಲಾಗಿದೆ.
ಇತರೆ ಕೈದಿಗಳಂತೆ ಬಿಸಿಲಲ್ಲಿ ದರ್ಶನ್ ನಡೆದಾಡಲು ಬಿಟ್ಟಿಲ್ಲವೆಂಬ ಆರೋಪದ ವಿಚಾರವಾಗಿ ನಿಯಮದಂತೆ 1 ಗಂಟೆ ವಾಕಿಂಗ್ ಆಟವಾಡಲು ಅವಕಾಶ ನೀಡಬಹುದು. ಆದರೆ, ದರ್ಶನ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರೆ ಕೈದಿಗಳು ಕಿರುಚುತ್ತಾರೆ, ಅಕ್ಕ ಪಕ್ಕದ ಅಪಾರ್ಟ್ಮೆಂಟ್‌ಗಳಿಂದ ಫೋಟೋ ತೆಗೆಯುತ್ತಾರೆ ಎಂಬ ಕಾರಣ ನೀಡಲಾಗಿದೆ.
ಇನ್ನು ಹೊರಗಡೆ ಓಡಾಡಲು ಅವಕಾಶ ನೀಡಬೇಕು, ಟಿವಿ ನೋಡಲು ಅನುಮತಿ ನೀಡಬೇಕು ಎಂಬ ದರ್ಶನ್ ತಕರಾರು ತೆಗೆದಿದ್ದಾರೆ. ಟಿವಿ ನೋಡಲು ಕೈದಿಗಳಿಗೆ ಅವಕಾಶ ನೀಡಬಹುದು. ಆದರೆ, ಪ್ರತಿ ಬ್ಯಾರಕ್‌ಗೆ ಟಿವಿ ನೀಡಬೇಕೆಂಬ ನಿಯಮವಿಲ್ಲ.
ಫೋನ್‌ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆ ಎಂದು ತಕರಾರು ಇದ್ದು, ಆರೋಪಿಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಅವಕಾಶವಿದೆ. ಆರೋಪಿಗಳಿಗೆ ತಿಳಿಸಿ ಫೋನ್ ಕಾಲ್ ರೆಕಾರ್ಡ್‌ಗೆ ಅವಕಾಶವಿದೆ. ಈ ಬಗ್ಗೆ ಜೈಲು ಅಧಿಕಾರಿಗಳು ನಿಯಮ ರೂಪಿಸಿದ್ದಾರೆ. ಬೆಳಕಿಲ್ಲದೆ ಕಾಲಿಗೆ ಫಂಗಸ್ ಬಂದಿದೆ ಎಂದು ದರ್ಶನ್ ಆರೋಪಿಸಿದ್ದರು. ಆದರೆ ಕಾಲಿನಲ್ಲಿ ಯಾವುದೇ ಫಂಗಸ್ ಬಂದಿಲ್ಲ ಹಿಮ್ಮಡಿಯಲ್ಲಿ ಬಿರುಕು ಬಿಟ್ಟಿದೆ ಅಷ್ಟೇ. ಈ ಬಗ್ಗೆ ಚರ್ಮರೋಗ ತಜ್ಞೆ ಜ್ಯೋತಿಬಾಯಿ ಪರಿಶೀಲನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Actor Darshan: ಒಂದೆಡೆ ದರ್ಶನ್‌ಗೆ ಸಿಗದ ಸೌಲಭ್ಯ, ಇನ್ನೊಂದೆಡೆ ರೌಡಿ ಬರ್ತ್‌ಡೇಗೆ ಸೇಬಿನ ಹಾರ: ಇದು ಪರಪ್ಪನ ಅಗ್ರಹಾರ!
ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್‌ಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್‌ಗೆ ಫಿಜಿಯೋಥೆರಪಿ ವ್ಯವಸ್ಥೆ ಕಲ್ಪಿಸಲಾಗಿದೆ. ಸೊಳ್ಳೆಬತ್ತಿ, ಕನ್ನಡಿ, ಬಾಚಣಿಗೆ ನೀಡಿಲ್ಲವೆಂದು ಆರೋಪಿಸಿದ್ದು, ಸಜಾ ಬಂಧಿಗಳಿಗೆ ಮಾತ್ರ ಇವುಗಳನ್ನು ಕೊಡಬಹುದು. ವಿಚಾರಣಾಧೀನ ಕೈದಿಗೆ ಕೊಡಲು ಜೈಲು ನಿಯಮದಲ್ಲಿ ಅವಕಾಶವಿಲ್ಲ. ಜೈಲು ಅಧಿಕಾರಿಗಳು ಕೈಪಿಡಿಯಲ್ಲಿನ ನಿಯಮ ಪಾಲಿಸಿದ್ದಾರೆ. ಆದರೆ ಸೂರ್ಯನ ಬೆಳಕಿನಲ್ಲಿ ನಡೆದಾಡುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ವರದಿಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ ತಿಳಿಸಿದ್ದಾರೆ.