Rohini Sindhuri: ಕೈಚೀಲ ಖರೀದಿ ಅಕ್ರಮ; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ತಡೆ
Rohini Sindhuri: ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13ಗೆ ರೂಪಾಯಿಗೆ ಸಿಗುವ ಬ್ಯಾಗ್ಗಳನ್ನು ಜಿಲ್ಲಾಧಿಕಾರಿ 52 ರೂ. ನೀಡಿ ಖರೀದಿಸಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 7.65 ಕೋಟಿ ನಷ್ಟ ಉಂಟಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ. -
ನವದೆಹಲಿ: ಪರಿಸರ ಸ್ನೇಹಿ ಬಟ್ಟೆ ಕೈಚೀಲಗಳ ಖರೀದಿ ಅಕ್ರಮ ಆರೋಪಕ್ಕೆ (cloth bag scam) ಸಂಬಂಧಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರಿಗೆ ತುಸು ರಿಲೀಫ್ ಸಿಕ್ಕಿದೆ. ಮಹಿಳಾ ಅಧಿಕಾರಿ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ನೀಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ರೋಹಿಣಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಹಾಗೂ ಸತೀಶ್ ಚಂದ್ರ ಶರ್ಮಾ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಎನ್.ಆರ್. ರವಿಚಂದ್ರೇಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಏನಿದು ಆರೋಪ?
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಲು ಬಟ್ಟೆಯ ಕೈಚೀಲಗಳನ್ನು ಬಳಸಲು ಎಂದು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿದ್ದರು.
ಈ ನಿಟ್ಟಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಚೀಲಕ್ಕೆ 13 ಇದ್ದರೆ ಅವುಗಳನ್ನು ಪ್ರತಿ ಚೀಲಕ್ಕೆ 52ರಷ್ಟು ದರ ನೀಡಿ ಖರೀದಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ 7.65 ಕೋಟಿ ನಷ್ಟ ಉಂಟು ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಈ ಕೈಚೀಲಗಳ ಖರೀದಿಗೆ ಬಳಸಲಾಗಿದೆ. ಗ್ರಾಮ ಸ್ವರಾಜ್ಯದ ಎಲ್ಲ ಕನಸುಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಅಕ್ರಮದ ಕುರಿತಂತೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿ ಎನ್.ಆರ್.ರವಿಚಂದ್ರೇಗೌಡ ಅವರು ಮೈಸೂರು ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ) 2021ರ ಅಕ್ಟೋಬರ್ 13ರಂದು ದೂರು ನೀಡಿದ್ದರು.
ಪ್ರಕರಣದಲ್ಲಿ ತನಿಖೆ ಕೋರಿ ಮೈಸೂರಿನ ವಕೀಲ ಎನ್.ಆರ್.ರವಿಚಂದ್ರೇಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಪುರಸ್ಕರಿಸಿ, ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಆದರೆ, ಇದೀಗ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.