ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼʼನಮ್ಮ ಹುಡುಗನ ಮುಟ್ಟಿದರೆ ನಿನ್ನ ರಾಜಕೀಯ ಅಂತ್ಯ ಮಾಡ್ತೇನೆ ಎಂದಿದ್ದರು ರವಿ ಬೆಳಗರೆʼʼ: ಅಜಿತ್‌ ಹನುಮಕ್ಕನವರ್

ಹಾಯ್‌ ಬೆಂಗಳೂರು ಪತ್ರಿಕೆಯ 31ನೇ ವಾರ್ಷಿಕೋತ್ಸವ ಹಾಗೂ ಭಾವನಾ ಬೆಳಗೆರೆ ಅವರ ʼಆಂಟಿ ನಿಮ್ಮ ಒಲುಮೆಯಿಂದಲೇʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾನುವಾರ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್ ಅವರು ರವಿ ಬೆಳೆಗೆರೆ ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದು ಹೀಗೆ...

ಕೆಲಸ ಹೇಳಿಕೊಡುವುದು ದೈವದತ್ತ ಕಲೆ: ಅಜಿತ್‌ ಹನುಮಕ್ಕನವರ್

-

ಬೆಂಗಳೂರು: ಕೆಲಸವನ್ನು ಒಬ್ಬರಿಗೆ ಹೇಳಿಕೊಡುವುದು ಒಂದು ದೈವದತ್ತ ಕಲೆ. ಇದು ಎಲ್ಲರಿಗೂ ಬರುವುದಿಲ್ಲ. ಇವತ್ತಿನ ಪತ್ರಿಕೋದ್ಯಮದಲ್ಲಿ (Journalism) ಹೊಸದಾಗಿ ಬರುವವರಿಗೆ ಕಲಿಯುವ ಉತ್ಸಾಹವಿರುವುದಿಲ್ಲ. ಅಂತೆಯೇ ನಮ್ಮಂತ ಹಿರಿಯರಿಗೆ ಕಲಿಸುವ ಉತ್ಸಾಹವೂ ಇರುವುದಿಲ್ಲ ಎಂದು ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್ (Suvarna News Editor Ajit Hanumakkanavar) ಹೇಳಿದರು. ಅವರು 'ಹಾಯ್‌ ಬೆಂಗಳೂರು' ಪತ್ರಿಕೆಯ (Hai Bangalore) 31ನೇ ವಾರ್ಷಿಕೋತ್ಸವ ಹಾಗೂ ಭಾವನಾ ಬೆಳಗೆರೆ (Bhavana Belagere) ಅವರ 'ಆಂಟಿ ನಿಮ್ಮ ಒಲುಮೆಯಿಂದಲೇ' ಪುಸ್ತಕ ಬಿಡುಗಡೆ (Book release) ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಏನನ್ನಾದರೂ ತೀವ್ರವಾಗಿ ಬಯಸಿದರೆ ಅದು ನಮಗೆ ಸಿಕ್ಕೇ ಸಿಗುತ್ತದೆ. ಅಂತೆಯೇ ನಾನು ಪತ್ರಕರ್ತನಾಗಬೇಕು ಎನ್ನುವ ಹಂಬಲ ಇಟ್ಟುಕೊಂಡಿದ್ದೆ. ಅದಕ್ಕೆ ಪೂರಕ ವಾತಾವರಣವೂ ನಿರ್ಮಾಣವಾಗಿತ್ತು ಎಂದು ಹನುಮಕ್ಕನವರ್‌ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.



ಪಿಯುಸಿಯಲ್ಲಿ ಅಪ್ಪ ನನ್ನ ಕರೆದುಕೊಂಡು ಹೋಗಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ಹೀಗಾಗಿ ನಾನು ನೇರವಾಗಿ ರವಿ ಬೆಳೆಗೆರೆ ಅವರಿಗೆ ಪತ್ರ ಬರೆದಿದ್ದೆ. 9ನೇ ತರಗತಿಯಲ್ಲಿರುವಾಗ ಅವರ ಪುಸ್ತಕ ಓದುತ್ತಿದ್ದೆ. ಅವರೊಬ್ಬ ಖ್ಯಾತ ಪತ್ರಕರ್ತರು ಎಂದು ಗೊತ್ತಿತ್ತು. ಕಾಲೇಜಿನಲ್ಲಿ ಬಿಳಿ ಬಟ್ಟೆ ತೊಟ್ಟು ʼಹಾಯ್ ಬೆಂಗಳೂರುʼ ಪತ್ರಿಕೆ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತದೆ. ಇದು ಕಾಲೇಜ್ ಕ್ಯಾಂಪಸ್‌ನಲ್ಲಿ ನನ್ನ ಗುರುತಾಗಿತ್ತು ಎಂದರು.

ಇವತ್ತಿನ ಪತ್ರಿಕೋದ್ಯಮದಲ್ಲಿ ಕಲಿಯುವ ಉತ್ಸಾಹ ಮತ್ತು ಹೇಳಿಕೊಡುವ ಉತ್ಸಾಹ ಎರಡೂ ಇಲ್ಲ. ಆದರೆ ನಮ್ಮ ಕಾಲದಲ್ಲಿ ಹಾಗೆ ಇರಲಿಲ್ಲ. ನಾವು ಕಲಿಯುವ ಆಸಕ್ತಿ ತೋರುತ್ತಿದ್ದರೆ ಹಿರಿಯರು ಕಲಿಸುವ ಆಸಕ್ತಿ ಹೆಚ್ಚಿಸುತ್ತಿದ್ದರು ಎಂದು ಹೇಳಿದ ಅವರು ʼಹಾಯ್ ಬೆಂಗಳೂರುʼ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಬಿಚ್ಚಿಟ್ಟರು.

ಮಧ್ಯರಾತ್ರಿ ನಿದ್ದೆ ಬರುವವರೆಗೂ ಕೆಲಸ ಮಾಡುತ್ತಿದ್ದೆವು. ಕಚೇರಿಯಲ್ಲೇ ಮಲಗುತ್ತಿದ್ದೆವು. ರವಿ ಬೆಳೆಗೆರೆ ಕೂಡ ಮನೆಗೆ ಹೋಗುತ್ತಿದ್ದದ್ದು ಅಪರೂಪ. ಅವರಿಗೆ ಮನೆ ಮತ್ತು ಕಚೇರಿ ಒಂದೇ ಆಗಿತ್ತು ಎಂದರು.

ಒಮ್ಮೆ ನನ್ನ ಕರೆದ ಅವರು ಕೇಸ್ ಆಗುವಂತ ವರದಿ ಬರೀಬೇಡ ಎಂದಿದ್ದರು. ಅದನ್ನು ನಾನು ಬಹಳ ಎಚ್ಚರಿಕೆಯಿಂದ ಪಾಲಿಸುತ್ತಿದ್ದೆ. ವರದಿಗಳನ್ನು ಚೆನ್ನಾಗಿ ಬರೆದರೆ ಮಧ್ಯರಾತ್ರಿ ಬಂದು ಬೆನ್ನು ತಟ್ಟುತ್ತಿದ್ದರು. ಎರಡು ವರ್ಷ ಅವರ ಜತೆ ಕೆಲಸ ಮಾಡಿದೆ. ತುಂಬಾ ಬೆದರಿಕೆಗಳು ಬಂದಿದ್ದವು. ಒಂದು ಬಾರಿ ರಾಜಕಾರಣಿಯೊಬ್ಬರು ಬೆದರಿಕೆ ಹಾಕಿದ್ದರು. ಇದನ್ನು ರವಿ ಬೆಳೆಗೆರೆ ಅವರಿಗೆ ಹೇಳಿದ್ದಕ್ಕೆ ಅವರು ರಾಜಕಾರಣಿಗೆ ಕರೆ ಮಾಡಿ ನಮ್ಮ ಹುಡುಗನ ಮುಟ್ಟಿದರೆ ನಿನ್ನ ರಾಜಕೀಯ ಅಂತ್ಯವನ್ನು ನಾನು ಮಾಡುತ್ತೇನೆ ಎಂದು ಎಚ್ಚರಿಸಿದ್ದರು. ಇದೇ ರೀತಿ ಹೊಸಪೇಟೆಯ ವರದಿಗಾರನಿಗೆ ಯಾರೋ ಒಬ್ಬರು ಹೊಡೆದಿದ್ದಕ್ಕೆ ಅವರು ಅಲ್ಲಿಗೆ ಹೋಗಿ ಇವನಿಗೆ ಹೊಡೆಯುವ ಅಧಿಕಾರ ನನಗಲ್ಲದೆ ಬೇರೆ ಯಾರಿಗೂ ಇಲ್ಲ ಎಂದಿದ್ದರು. ಇದೆಲ್ಲ ಒಂದು ಸುಂದರ ಅನುಭವಗಳು ಎಂದು ಅಜಿತ್‌ ಹನುಮಕ್ಕನವರ್ ನೆನಪಿಸಿಕೊಂಡರು.

ಕೆಲವೊಮ್ಮೆ ಕಚೇರಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್, ರವಿ ಬೆಳೆಗೆರೆ ಹರಟೆ ಹೊಡೆಯುತ್ತಿದ್ದರು. ಅವರ ಮಾತುಗಳಿಂದ ನಮಗೆ ಜೀವನಾನುಭವಗಳು ಸಿಗುತ್ತಿತ್ತು. ರವಿ ಬೆಳೆಗರೆಯವರೊಂದಿಗೆ ಹರಟೆ ಹೊಡೆಯುತ್ತಾ ಕಲಿತಷ್ಟು ಕಾಲೇಜಿನಲ್ಲಿ ನಾನು ಕಲಿತಿಲ್ಲ ಎಂದು ಹೇಳಿದರು.

ಪತ್ರಿಕೆ ಪ್ರಿಂಟ್‌ಗೆ ಹೋದ ಬಳಿಕ ಕ್ಯಾಬಿನ್‌ನಲ್ಲಿ ಮಧ್ಯರಾತ್ರಿ ಜೋರಾಗಿ ಹಾಡು ಹಾಕಿಕೊಂಡು ಕೇಳುತ್ತಿದ್ದ ರವಿ ಬೆಳೆಗೆರೆ ಒಮ್ಮೆ ರತ್ನಮಾಲಾ ಪ್ರಕಾಶ್ ಅವರ ಹಾಡು ಕೇಳಿ ಮಧ್ಯ ರಾತ್ರಿ ಮೂರು ಗಂಟೆಗೆ ಅವರಿಗೆ ಫೋನ್ ಮಾಡಿಸಿದ್ದರು ಎಂದು ನೆನಪಿಸಿಕೊಂಡ ಅಜಿತ್, ಅವರು ಏಕ ವಚನದಲ್ಲಿ ಮಾತನಾಡಿದರೆ ಖುಷಿಯಾಗಿದ್ದಾರೆ, ಬಹು ವಚನದಲ್ಲಿ ಮಾತನಾಡಿದರೆ ಸಿಟ್ಟಲ್ಲಿದ್ದಾರೆ ಎಂದರ್ಥ ಎಂದು ಹೇಳಿದರು.

ಒಂದು ಬಾರಿ ಅವರು ಪುಸ್ತಕವನ್ನೇ ಬರೆಯದೆ ಬಿಡುಗಡೆ ದಿನಾಂಕ ಘೋಷಣೆ ಮಾಡಿಸಿದ್ದರು. ಕೇಳಿದ್ದಕ್ಕೆ ದೇವರು ಯಾವುದಾದರೂ ದಾರಿ ತೋರಿಸ್ತಾನೆ ಎಂದಿದ್ದರು. ಅಂದುಕೊಂಡ ದಿನಾಂಕಕ್ಕೆ ಪುಸ್ತಕ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಪೇಪರ್ ಬಿಡುಗಡೆ ಹೊಣೆ ನನಗೆ ವಹಿಸಿದ್ದರು. ಎಲ್ಲವು ಅಂದುಕೊಂಡಂತೆ ಆಗಿದ್ದಕ್ಕೆ ನನ್ನನ್ನು ಕಮರ್ಷಿಯಲ್ ಸ್ಟ್ರೀಟ್ ಗೆ ಕರೆದುಕೊಂಡು ಹೋಗಿ 12 ಜುಬ್ಬಾ, ಶೂ, ಬುಕ್ ಕೊಡಿಸಿದ್ದರು. ಹೊಟೇಲ್ ಗೆ ಕರೆದುಕೊಂಡು ಹೋಗಿ ಊಟ ಕೊಡಿಸಿದರು. ಬಳಿಕ ಕಾರಿನಲ್ಲಿ ಹಾಸ್ಟೆಲ್‌ವರೆಗೆ ಕರೆದುಕೊಂಡು ಹೋಗಿ ನೀನು ಅತ್ಯುತ್ತಮ ಕೆಲಸ ಮಾಡಿದ್ದಿಯ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡ ಅಜಿತ್, ರವಿ ಬೆಳೆಗರೆಯವರಿಂದಾಗಿ ಅನೇಕ ಪಾಠಗಳನ್ನು ಕಲಿತಿದ್ದೇನೆ ಎಂದರು.

ಇದನ್ನೂ ಓದಿ: Smriti Mandhana: ಮಹಿಳಾ ಏಕದಿನ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ಗಡಿ ದಾಟಿದ ಮಂಧಾನ

ಒಬ್ಬ ಗುರುವಿಗೆ ಒಬ್ಬ ಮಾತ್ರ ಒಳ್ಳೆಯ ಶಿಷ್ಯ ಸಿಗುತ್ತಾನೆ. ನೀನು ನನಗೆ ಸಿಕ್ಕಿದ್ದಿಯಾ ಎಂದು ರವಿ ಬೆಳಗೆರೆ ಹೇಳಿದ್ದನ್ನು ನೆನಪಿಸಿಕೊಂಡ ಅಜಿತ್, ಅವರು ನನ್ನ ಬದುಕು ಬದಲಿಸಿದ ವ್ಯಕ್ತಿ. ʼಹಾಯ್ ಬೆಂಗಳೂರುʼ ಕಚೇರಿ ಬದುಕು ಬದಲಿಸಿದ ಸಂಸ್ಥೆ ಎಂದರು.