ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tesla Cars: ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

Tesla first Experience Center: ಬೆಂಗಳೂರಿನ ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ ತನ್ನ ಚೊಚ್ಚಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' ಅನ್ನು ಗುರುವಾರ ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದ ವಾಹನ ಪ್ರಿಯರಿಗೆ ಟೆಸ್ಲಾ ಕಾರುಗಳ ಭವ್ಯ ಅನುಭವವನ್ನು ನೇರವಾಗಿ ಒದಗಿಸಲಿದೆ.

ಬೆಂಗಳೂರಿನಲ್ಲಿ ಟೆಸ್ಲಾ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಟೆಸ್ಲಾ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್. -

Profile
Siddalinga Swamy May 14, 2026 4:40 PM

ಬೆಂಗಳೂರು, ಮೇ 14: ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನ ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ (Tesla) ತನ್ನ ಚೊಚ್ಚಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' (Experience Center) ಅನ್ನು ಗುರುವಾರ ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದ ವಾಹನ ಪ್ರಿಯರಿಗೆ ಟೆಸ್ಲಾ ಕಾರುಗಳ ಭವ್ಯ ಅನುಭವವನ್ನು ನೇರವಾಗಿ ಒದಗಿಸಲಿದೆ. ಇದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಮೂರು ಸಾಲುಗಳ, ಆರು ಸೀಟು ಸಾಮರ್ಥ್ಯದ ಹೊಸ ಟೆಸ್ಲಾ 'ಮಾಡೆಲ್ ವೈಎಲ್’ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಆರಂಭಿಕ ಬೆಲೆ 61.99 ಲಕ್ಷ ರುಪಾಯಿಗಳಾಗಿದೆ.

ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ವಾಹನಗಳ ಸಾಲಿನಲ್ಲಿರುವ ಮಾಡೆಲ್ ವೈನೊಂದಿಗೆ, ಈ ಹೊಸ ಮಾಡೆಲ್ ವೈಎಲ್ ಅನ್ನು ಗ್ರಾಹಕರು ಇಂದಿನಿಂದ ಇಲ್ಲಿ ವೀಕ್ಷಿಸಬಹುದಾಗಿದೆ. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಒಲವನ್ನು ಗಮನದಲ್ಲಿಟ್ಟುಕೊಂಡು, ಟೆಸ್ಲಾ ಕಂಪನಿಯು ವೈಟ್‌ಫೀಲ್ಡ್‌ನಲ್ಲಿ ಮಾರಾಟದ ನಂತರದ ಸೇವಾ ಕೇಂದ್ರವನ್ನೂ ಆರಂಭಿಸುವುದಾಗಿ ಪ್ರಕಟಿಸಿದೆ. ಇದು ಬೆಂಗಳೂರಿನ ಗ್ರಾಹಕರಿಗೆ ವಾಹನ ನಿರ್ವಹಣೆಯ ಅತ್ಯುತ್ತಮ ಅನುಭವವನ್ನು ನೀಡಲಿದೆ.‌

Tesla Car

ಕಣ್ಮನ ಸೆಳೆದ ಹೊಸ ಮಾಡೆಲ್ ವೈಎಲ್

ಕೌಟುಂಬಿಕ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿರುವ ಈ ಎಸ್‌ಯುವಿ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 681 ಕಿ.ಮೀವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಕೇವಲ 5.0 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದ್ದು, 2,539 ಲೀಟರ್‌ಗಳಷ್ಟು ವಿಶಾಲವಾದ ಕಾರ್ಗೋ ಸ್ಪೇಸ್ ಹೊಂದಿದೆ. ಇದರ 3 ಸಾಲಿನ ವಿನ್ಯಾಸವು ಪ್ರಯಾಣಿಕರಿಗೆ ಆರಾಮದಾಯಕ ಹೆಡ್‌ರೂಮ್ ಮತ್ತು ಲೆಗ್‌ರೂಮ್ ಒದಗಿಸಿ, ವಿಶಿಷ್ಟ ಪ್ರಯಾಣದ ಅನುಭವವನ್ನು ನೀಡುತ್ತದೆ.

ಅತ್ಯಾಧುನಿಕ ಸುರಕ್ಷತೆ ಮತ್ತು ಸೂಪರ್ ಚಾರ್ಜಿಂಗ್

ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಮಾಡೆಲ್ ವೈಎಲ್, ಜಾಗತಿಕ ಮಟ್ಟದಲ್ಲಿ ಎನ್‌ಎಚ್‌ಟಿಎಸ್‌ಎ (NHTSA), ಯೂರೋ ಎನ್‌ಸಿಎಪಿ, ಮತ್ತು ಎಎನ್‌ಸಿಎಪಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಅತಿಹೆಚ್ಚಿನ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ.

Tesla

ಟೆಸ್ಲಾ ಸೂಪರ್‌ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಕೇವಲ 15 ನಿಮಿಷಗಳ ಚಾರ್ಜಿಂಗ್‌ನಿಂದ 288 ಕಿ.ಮೀ ಕ್ರಮಿಸಬಹುದಾಗಿದೆ. "ಪ್ಲಗ್ ಇನ್, ಚಾರ್ಜ್ ಅಂಡ್ ಗೋ" ಪರಿಕಲ್ಪನೆಯೊಂದಿಗೆ ದೂರದ ಪ್ರಯಾಣವನ್ನು ಇದು ಸುಲಭಗೊಳಿಸಲಿದ್ದು, ಭಾರತದಲ್ಲಿ ಮನೆಗಳಲ್ಲಿಯೇ ಚಾರ್ಜ್ ಮಾಡಿಕೊಳ್ಳುವ ಸೌಲಭ್ಯವನ್ನೂ ಸಹ ಒದಗಿಸಲಾಗುತ್ತಿದೆ.

Tesla Model Y L: ಒಂದೇ ಚಾರ್ಜ್‌ಗೆ 681 ಕಿ.ಮೀ. ರೇಂಜ್‌; ಭಾರತಕ್ಕೆ ಲಗ್ಗೆ ಇಟ್ಟ ಟೆಸ್ಲಾ ಹೊಸ ಕಾರು!

ಗ್ರಾಹಕರು ಮಹದೇವಪುರ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ 'ವಿಆರ್ ಬೆಂಗಳೂರು' ಮಾಲ್‌ನಲ್ಲಿರುವ ಟೆಸ್ಲಾ ಕೇಂದ್ರಕ್ಕೆ ಭೇಟಿ ನೀಡಿ ಕಾರಿನ ಪ್ರತ್ಯಕ್ಷ ಅನುಭವ ಪಡೆದುಕೊಳ್ಳಬಹುದು. ಬೆಂಗಳೂರಿನ ಜತೆಗೆ ಮುಂಬೈ, ದೆಹಲಿ ಮತ್ತು ಗುರುಗ್ರಾಮದಲ್ಲೂ ಟೆಸ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.