Prajwal Revanna Case: ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಶಿಫ್ಟ್?
ಪರಪ್ಪನ ಅಗ್ರಹಾರ ಜೈಲಿನ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ನಡೆಸಿದ ಪರಿಶೀಲನೆ ವೇಳೆ ಸ್ಮಾರ್ಟ್‌ಫೋನ್, ಚಾರ್ಜರ್, ಸಿಮ್ ಕಾರ್ಡ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದನನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
-
ಬೆಂಗಳೂರು: ಜೀವಾವಧಿ ಶಿಕ್ಷೆಗೊಳ ಕೈದಿ ಪ್ರಜ್ವಲ್ ರೇವಣ್ಣ (Prajwal Revanna Case) ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಜ್ವಲ್ ರೇವಣ್ಣ ಇದ್ದ ಸೆಲ್ನಲ್ಲಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ನಡೆಸಿದ ಪರಿಶೀಲನೆ ವೇಳೆ ಸ್ಮಾರ್ಟ್‌ಫೋನ್, ಚಾರ್ಜರ್, ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಜೈಲಿನಲ್ಲಿದ್ದೇ ಅವರು ಹೊರಗಿನ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನುವ ದೃಶ್ಯಗಳು ಬಹಿರಂಗವಾಗಿದ್ದವು.
ಘಟನೆ ಬಳಿಕ ಮೊದಲ ಹಂತವಾಗಿ ಪ್ರಜ್ವಲ್ ರೇವಣ್ಣ ಅವರಿಗಿದ್ದ ಪ್ರತ್ಯೇಕ ಸೆಲ್ ಸೌಲಭ್ಯವನ್ನು ರದ್ದುಗೊಳಿಸಿ, ಸಿಸಿಟಿವಿ ಕಣ್ಗಾವಲಿರುವ ಸಾಮಾನ್ಯ ಕೈದಿಗಳ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಪ್ರಭಾವ ಬಳಸಿ ಮತ್ತೆ ಅಕ್ರಮ ಚಟುವಟಿಕೆಗಳು ಮುಂದುವರಿಯುವ ಆತಂಕ ಹಾಗೂ ಭದ್ರತಾ ಕಾರಣಗಳಿಂದಾಗಿ, ಅವರನ್ನು ಕಠಿಣ ನಿಯಮಾವಳಿಗಳುಳ್ಳ ದೂರದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲು ಕಾರಾಗೃಹ ಇಲಾಖೆ ಹಾಗೂ ಗೃಹ ಇಲಾಖೆ ಮುಂದಾಗಿದೆ.