ಶಾಲೆಗೆ 2 ನಿಮಿಷ ಲೇಟ್ ಆಗಿದ್ದಕ್ಕೆ 1ನೇ ತರಗತಿ ವಿದ್ಯಾರ್ಥಿಯನ್ನು 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಈ ವಿಚಾರ ತಿಳಿದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೋದಾಗ, ಆಡಳಿತ ಮಂಡಳಿಯವರು ದರ್ಪದಿಂದ ಮಾತನಾಡಿರುವುದು ಕಂಡುಬಂದಿದೆ.
ಬೆಂಗಳೂರಿನ ಶ್ರೀ ಚೈತನ್ಯ ಶಾಲೆ ಶಿಕ್ಷಕಿ. -
ಬೆಂಗಳೂರು: ಶಾಲೆಗೆ ಕೇವಲ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಪುಟ್ಟ ಬಾಲಕನನ್ನು ಸುಮಾರು ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದ ಆರೋಪವೊಂದು ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ (Bengaluru School) ವಿರುದ್ಧ ಕೇಳಿ ಬಂದಿದೆ. 1ನೇ ತರಗತಿ ಓದುತ್ತಿರುವ ಆರು ವರ್ಷದ ಬಾಲಕ ಶಾಲೆಗೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಶಿಕ್ಷೆಯಾಗಿ ಬಿಸಿಲಿನಲ್ಲಿ ನಿಲ್ಲಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ನಗರದ ಹೊರವಲಯದ ಯಲಹಂಕದ ಶ್ರೀ ಚೈತನ್ಯಾ ಶಾಲೆಯಲ್ಲಿ (Sri chaitanya School) ಈ ಘಟನೆ ನಡೆದಿದೆ. ಮಗುವಿಗೆ ಇಂತಹ ಕಠಿಣ ಶಿಕ್ಷೆ ನೀಡಿರುವುದು ದೈಹಿಕ ಮತ್ತು ಮಾನಸಿಕವಾಗಿ ಹಾನಿಕಾರಕವಾಗಬಹುದು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲು ಹೋದಾಗ, ಆಡಳಿತ ಮಂಡಳಿಯವರು ದರ್ಪದಿಂದ ಮಾತನಾಡಿರುವುದು ಕಂಡುಬಂದಿದೆ.
ಘಟನೆ ಬಗ್ಗೆ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಮಕ್ಕಳಿಗೆ ದೈಹಿಕ ಅಥವಾ ಮಾನಸಿಕ ನೋವುಂಟು ಮಾಡುವ ಯಾವುದೇ ಕ್ರಮವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಘಟನೆ ಕುರಿತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಮಗುವಿನ ಗುರುತನ್ನು ಬಹಿರಂಗಪಡಿಸುವ ವಿಡಿಯೊಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾವು ಸಾರ್ವಜನಿಕರನ್ನು ವಿನಂತಿಸುತ್ತೇವೆ. ಅಂತಹ ಘಟನೆಗಳನ್ನು ನೇರವಾಗಿ ಪೊಲೀಸರಿಗೆ ಅಥವಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದ್ದಾರೆ.
ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ ಶಿಕ್ಷಕಿ
ಇನ್ನು ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಪೋಷಕರು ಪ್ರಶ್ನಿಸುವ ವೇಳೆ ಶಿಕ್ಷಕಿಯೊಬ್ಬರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಮಾತನಾಡಿ ಎಂದು ಬಾಲಕನ ಪೋಷಕರು ಕೇಳಿದಾಗ, ಕನ್ನಡದ ಅಗತ್ಯವಿಲ್ಲ ಎಂದು ದರ್ಪ ತೋರಿರುವುದು ಕಂಡುಬಂದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಒಂದನೇ ತರಗತಿ ಮಗು ಎರಡು ನಿಮಿಷ ತಡವಾಗಿ ಬಂದಿದ್ದಕ್ಕೆ ಎರಡು ಗಂಟೆ ಬಿಸಿಲಿನಲ್ಲಿ ನಿಲ್ಲಿಸಿ ತೊಂದರೆ ಕೊಟ್ಟಿದ್ದಾರೆ. ಅಪ್ಪ ಅಮ್ಮ ಪ್ರಶ್ನೆ ಮಾಡಿದರೆ ಅವರ ಮೇಲೂ ದರ್ಪ ತೋರಿದ್ದಾರೆ. ಮಕ್ಕಳಿಗೆ ಮಾತ್ರ ಇಂಗ್ಲಿಷ್‌ನಲ್ಲಿ ಟೀಚಿಂಗ್ ಇರಬೇಕು ಎಂದು ಫೀಸ್ ಕಟ್ಟಲಾಗುತ್ತದೆ, ಅದುಬಿಟ್ಟು ಪೇರೆಂಟ್ಸ್ ಜತೆ ಇಂಗ್ಲಿಷ್ ಮಾತಾಡಿ ಅಂತ ಅಲ್ಲ. ಕರ್ನಾಟಕದಲ್ಲಿ ಇದ್ದು, ಇಲ್ಲಿನ ಲೈಸೆನ್ಸ್ ಪಡೆದು ಕನ್ನಡ ಮಾತಾಡೋ ಅಗತ್ಯವಿಲ್ಲವಂತೆ, ಏನು ಮಾತಾಡ್ತಾರೊ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.