ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ; ವಿಡಿಯೊ ವೈರಲ್‌

Bengaluru News: ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಕೊಲೆ ಮಾಡಲು ಪತಿ ಯತ್ನಿಸಿದ ವೇಳೆ, ಆತನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪತ್ನಿಯ ಕತ್ತು ಕೊಯ್ಯಲು ಹೋದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

-

Prabhakara R
Prabhakara R May 8, 2026 2:54 PM

ಬೆಂಗಳೂರು: ಹಾಡಹಗಲೇ ರಸ್ತೆಯಲ್ಲಿ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಲು ಯತ್ನಿಸುತ್ತಿದ್ದ ಪತಿಯನ್ನು ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನ (Bengaluru News) ದಾಸನಪುರದಲ್ಲಿ ನಡೆದಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಮಹಿಳೆಯೊ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪತ್ನಿಯ ನಡತೆಯ ಮೇಲೆ ಸಂಶಯಗೊಂಡು ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ವೇಳೆ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮೂಲತಃ ಬಿಹಾರದ ದಂಪತಿಗಳಾದ ಸೋನಾಲಿ ಮತ್ತು ಸಂಜಯ್ ಅವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಎನ್ನಲಾಗಿದೆ. ಸಂಜಯ್ ಸದಾ ಮದ್ಯಪಾನ ಮಾಡಿ ಸೋನಾಲಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಪತಿಯ ಕಿರುಕುಳ ತಾಳಲಾರದೆ ಸೋನಾಲಿ ಬೇರೆಯಾಗಿ ವಾಸಿಸುವ ನಿರ್ಧಾರ ಮಾಡಿದ್ದರು.



ಪತ್ನಿಯ ನಿರ್ಧಾರದಿಂದ ಆಕ್ರೋಶಗೊಂಡ ಸಂಜಯ್, ತನ್ನ ಬೈಕ್‌ನಲ್ಲಿ ಬಂದು ರಸ್ತೆಯಲ್ಲೇ ಜಗಳವಾಡಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ತನ್ನ ಬಳಿಯಿದ್ದ ಚಾಕು ತೆಗೆದು ಸೋನಾಲಿ ಕುತ್ತಿಗೆಯ ಬಳಿ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಧಾವಿಸಿ ಬಂದು ಸಂಜಯ್‌ನನ್ನು ತಡೆದಿದ್ದಾರೆ. ಚಾಕು ಕಸಿದುಕೊಂಡು ಮಹಿಳೆಯ ಪ್ರಾಣ ಕಾಪಾಡಿದ ಸ್ಥಳೀಯರು, ಬಳಿಕ ಆತನನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಈ ಪ್ರಕರಣದ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು, ಪೊಲೀಸರು ದಂಪತಿಗಳಿಗೆ ಕೌನ್ಸೆಲಿಂಗ್ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.