SSLC Exam 2026: ನಾಳೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾರ್ಚ್ 31ಕ್ಕೆ ಮುಂದೂಡಿಕೆ
ಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್ 30ರಂದು ಸಾರ್ವತ್ರಿಕ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ಮಾರ್ಚ್ 31ರಂದು ಮಂಗಳವಾರ ಈಗಾಗಲೇ ನಿಗದಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಮಾರ್ಚ್ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ (SSLC Exam 2026) ತೃತೀಯ ಭಾಷೆ ಹಿಂದಿ ವಿಷಯ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಶಾಲಾ ಪರೀಕ್ಷಾ ಮಂಡಲಿ, 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ನ್ನು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಸಲು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ ಈಗಾಗಲೇ ಪರೀಕ್ಷೆಯು ಪ್ರಾರಂಭವಾಗಿರುತ್ತದೆ. ಸದರಿ ವೇಳಾಪಟ್ಟಿಯನ್ವಯ ತೃತೀಯ ಭಾಷೆ ಪರೀಕ್ಷೆಯನ್ನು ಮಾರ್ಚ್ 30ರಂದು ನಿಗದಿಪಡಿಸಲಾಗಿತ್ತು, ಆದರೆ ಮಹಾವೀರ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ಮಾರ್ಚ್ 31ರಂದು ಮಂಗಳವಾರ ಈಗಾಗಲೇ ನಿಗದಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು, ಉಳಿದ ವಿಷಯದ ಪರೀಕ್ಷೆಗಳು ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯಲಿದೆ ಎಂದು ಪರೀಕ್ಷಾ ಮಂಡಲಿ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ)ರವರು ತಮ್ಮ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಜಿಲ್ಲೆ ಮತ್ತು ತಾಲ್ಲೂಕು ಖಜಾನಾಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಿ ತೃತೀಯ ಭಾಷೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಮಾರ್ಚ್ 31ಕ್ಕೆ ಪಡೆಯಲು ಕಮವಹಿಸಬೇಕು. ಪ್ರಶ್ನೆಪತ್ರಿಕೆಯ ಪ್ಯಾಕೇಟ್ ಮೇಲ್ಮಾಗದಲ್ಲಿ ಮತ್ತು ಪ್ರಶ್ನೆಪತ್ರಿಕೆಯಲ್ಲಿ ತೃತೀಯ ಭಾಷಾ ವಿಷಯದ ಪರೀಕ್ಷೆ ಮಾರ್ಚ್ 30ರಂದು ಎಂದು ನಮೂದಾಗಿದ್ದು, ಸದರಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವ ಸಂದರ್ಭದಲ್ಲಿ ಈ ಕುರಿತು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಒಳಗೊಂಡಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು / ಸಿಬ್ಬಂದಿ / ಶಿಕ್ಷಕರುಗಳಿಗೆ ಮಾಹಿತಿ ನೀಡಬೇಕು. ತೃತೀಯ ಭಾಷೆ ವಿಷಯದ ಪರೀಕ್ಷೆ ದಿನಾಂಕವು ಬದಲಾಗಿರುವ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ ತರಬೇಕು.
SSLC, PUC Exam: ಎಸ್ಸೆಸ್ಸೆಲ್ಸಿ- ದ್ವಿತೀಯ ಪಿಯುಸಿಗೆ ಇನ್ನು ಎರಡೇ ಬಾರಿ ಪರೀಕ್ಷೆ, 3ನೇ ಪರೀಕ್ಷೆಗೆ ಬೈ
ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಕಾಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಿ ಪರೀಕ್ಷೆ ದಿನಾಂಕ ಬದಲಾವಣೆ ಮತ್ತು ಸದರಿ ಪರೀಕ್ಷಾ ದಿನದಂದು ಸೂಕ್ತ ಭದ್ರತೆ ನೀಡುವ ಕುರಿತು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಳಿ ಪರೀಕ್ಷಾ ಮಂಡಲಿ ತಿಳಿಸಿದೆ.