ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯದ ಆದಾಯ, ಖರ್ಚುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಬೇಕು: ಬಜೆಟ್‌ ಲೆಕ್ಕಾಚಾರದ ಕುರಿತು ಶಾಸಕರಿಗೆ ಸಿಎಂ ಪಾಠ

ಬಜೆಟ್‌ ಅನ್ನು ಅರ್ಥ ಮಾಡಿಕೊಳ್ಳುವ ಶಾಸಕರ ಸಂಖ್ಯೆಯೇ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಬಹುದೆಂದು ನಾನು ಭಾವಿಸಿದ್ದೇನೆ. ಬಜೆಟ್ ಎಷ್ಟೆ ಒಳ್ಳೆಯದಾಗಿದ್ದರೂ ಅದನ್ನು ಅರ್ಥಪೂರ್ಣವಾಗಿ ಖರ್ಚು ಮಾಡುವುದರಲ್ಲಿ ಶಾಸಕರ ಪಾತ್ರ ದೊಡ್ಡದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಜೆಟ್‌ ಲೆಕ್ಕಾಚಾರದ ಕುರಿತು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪಾಠ

ವಿಧಾನಸೌಧದಲ್ಲಿ ನಡೆದ ಶಾಸಕರ ತರಬೇತಿ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯ. -

Prabhakara R
Prabhakara R Mar 9, 2026 9:33 PM

ಬೆಂಗಳೂರು, ಮಾರ್ಚ್ 9: ಬಜೆಟ್‌ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗಲು ಆಯವ್ಯಯ ರಾಜಸ್ವಗಳ ಸಂಗ್ರಹಣೆ, ಅನುದಾನ ವರ್ಗೀಕರಣ, ಹಂಚಿಕೆ, ಅನುದಾನ ಬಳಕೆ, ನಿರ್ವಹಣೆ ವಿಷಯ ಕುರಿತು ಶಾಸಕರಿಗೆ ತರಬೇತಿ ಶಿಬಿರವನ್ನು (Budget special camp) ನಗರದ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಮಾನ್ಯ ಸ್ಪೀಕರ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ಅನೇಕ ಶಾಸಕರಿಗೆ ಬಜೆಟ್ಟನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಕುರಿತು ತಿಳಿವಳಿಕೆ ಕಡಿಮೆ ಇದೆ. ಎಲ್ಲ ಶಾಸಕರಿಗೂ ಸ್ಪಷ್ಟ ತಿಳಿವಳಿಕೆಯಿದ್ದರೆ ಹಣಕಾಸು ಖಾತೆ ನಿರ್ವಹಿಸುವವರಿಗೆ ಸಂಕಷ್ಟವಾಗುವುದಿಲ್ಲ. ರಾಜ್ಯದ ಆದಾಯ ಮತ್ತು ಖರ್ಚುಗಳ ಕುರಿತು ಎಲ್ಲರಿಗೂ ಸ್ಪಷ್ಟ ತಿಳಿವಳಿಕೆಯಿರಬೇಕು.

ಇದೊಂದು ತರಬೇತಿ ಮಾದರಿಯ ಕಾರ್ಯಕ್ರಮ ಎಂದು ನಾನು ಭಾವಿಸುತ್ತೇನೆ. ಈ ರೀತಿಯ ತರಬೇತಿಗಳು ಬಹಳ ಉಪಯುಕ್ತವಾಗಲಿವೆ. ಅದಕ್ಕಾಗಿ ಮತ್ತೊಮ್ಮೆ ಸಭಾಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ. ಈ ಸಭೆಗೆ ವಿರೋಧ ಪಕ್ಷದ ನಾಯಕರಾದಿಯಾಗಿ ಅನೇಕರು ಹಾಜರಾಗಿದ್ದೀರಿ. ಸಭೆಯಲ್ಲಿ ಎಂಎಲ್‌ಎ ಮತ್ತು ಎಂಎಲ್‌ಸಿಗಳನೇಕರು ಇಲ್ಲಿ ಸೇರಿದ್ದೀರಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ನೀರಿನ ಸಮಸ್ಯೆ ಕುರಿತು ಮಕ್ಕಳ ಪತ್ರಕ್ಕೆ ಸ್ಪಂದಿಸಿದ ಸಿಎಂ; ಬಜೆಟ್‌ನಲ್ಲಿ ನೀರಾವರಿ ಯೋಜನೆ ಘೋಷಣೆ

ಬಜೆಟ್ ಎನ್ನುವುದು ಒಬ್ಬ ವ್ಯಕ್ತಿಯಾಗಲಿ, ಕುಟುಂಬ, ಪಂಚಾಯ್ತಿ, ರಾಜ್ಯ, ರಾಷ್ಟ್ರಗಳಿಗೆ ಬಹಳ ಮುಖ್ಯವಾದ ಪ್ರಕ್ರಿಯೆ. ಸಂಗ್ರಹವಾಗುವ/ಸಗ್ರಹಿಸುವ ಪ್ರತಿ 1 ರೂಪಾಯಿ ಆದಾಯವು ಯಾವ ಯಾವ ಮೂಲದಿಂದ ಬರುತ್ತದೆ? ಅದನ್ನು ಯಾವ ಬಾಬತ್ತುಗಳಿಗೆ ಖರ್ಚು ಮಾಡಬೇಕು? ಖರ್ಚು ವೆಚ್ಚಗಳ ನಿರ್ವಹಣೆ ಹೇಗೆ ಮಾಡಬೇಕು? ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿಯೇ ಬಜೆಟ್. ಅಥವಾ ಆದಾಯ ಮತ್ತು ಖರ್ಚುಗಳ ಅಂದಾಜು ವಿವರ ಎಂದೂ ಕರೆಯಲಾಗುತ್ತದೆ.

_budget special camp (1)

ಬಜೆಟ್ ಕುರಿತಂತೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಸಂವಿಧಾನದ ಆರ್ಟಿಕಲ್ 112 ರಿಂದ 119 ರವರೆಗೆ ಕೇಂದ್ರದ ಬಜೆಟ್ ಕುರಿತು ವಿವರಿಸಲಾಗಿದೆ. ಆರ್ಟಿಕಲ್ 202 ರಿಂದ 209 ರವರೆಗಿನ ಆರ್ಟಿಕಲ್‌ಗಳಲ್ಲಿ ರಾಜ್ಯಗಳ ಬಜೆಟ್ ಬಗ್ಗೆ ವಿವರಿಸಲಾಗಿದೆ.

ಆರ್ಟಿಕಲ್ 202 ರಲ್ಲಿ 1. “ರಾಜ್ಯಪಾಲರು ಪ್ರತಿ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯದ ಅಂದಾಜು ಜಮೆಗಳ ಮತ್ತು ವೆಚ್ಚದ ವಿವರಣೆಯನ್ನು ರಾಜ್ಯ ವಿಧಾನಮಂಡಲದ ಸದನದ ಅಥವಾ ಸದನಗಳ ಮುಂದೆ ಇಡುವಂತೆ ಮಾಡತಕ್ಕದ್ದು. ಈ ಭಾಗದಲ್ಲಿ ಅದನ್ನು “ವಾರ್ಷಿಕ ಹಣಕಾಸು ವಿವರ ಪತ್ರ” ಎಂದು ಉಲ್ಲೇಖಿಸಲಾಗಿದೆ. 202 [2] ರಲ್ಲಿ ವಾರ್ಷಿಕ ಹಣಕಾಸು ವಿವರ ಪತ್ರದಲ್ಲಿ ಒಳಗೊಂಡಿರುವ ವೆಚ್ಚದ ಅಂದಾಜುಗಳಲ್ಲಿ,

[ಅ] ರಾಜ್ಯದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚವೆಂದು ಈ ಸಂವಿಧಾನದಲ್ಲಿ ವಿವರಿಸಿರುವ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು; ಮತ್ತು

[ಬಿ] ರಾಜ್ಯದ ಸಂಚಿತ ನಿಧಿಯಿಂದ ಖರ್ಚು ಮಾಡಬೇಕೆಂದು ಉದ್ದೇಶಿಸಿರುವ ಇತರ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು;

ಪ್ರತ್ಯೇಕವಾಗಿ ತೋರಿಸತಕ್ಕದ್ದು ಮತ್ತು ರಾಜಸ್ವ ಲೆಕ್ಕಕ್ಕೆ ಖರ್ಚು ಬೀಳುವ ವೆಚ್ಚವನ್ನು ಮತ್ತು ಇತರ ವೆಚ್ಚದಿಂದ ಪ್ರತ್ಯೇಕಿಸಿ ತೋರಿಸತಕ್ಕದ್ದು ಎಂದು ಹೇಳಲಾಗಿದೆ.

ಸಂಚಿತ ನಿಧಿ ಎಂದರೆ, “The Consolidated Fund is the primary repository for all government revenue and loans, requiring prior parliamentary approval for expenditures” ಎಂದು ಅರ್ಥವಿದೆ. ಅಂದರೆ ಸರ್ಕಾರವೊಂದು ಸಾಲವೂ ಸೇರಿದಂತೆ ಸ್ವೀಕರಿಸುವ ಸಂಪೂರ್ಣ ಸಂಪನ್ಮೂಲಗಳ ವಿವರ. ಅಂದರೆ ರಾಜ್ಯವು ಸಂಗ್ರಹಿಸುವ ಎಲ್ಲಾ ರೀತಿಯ ತೆರಿಗೆ [ಸ್ವಂತ ತೆರಿಗೆ, ತೆರಿಗೆಯೇತರ ರಾಜಸ್ವ, ಕೇಂದ್ರದ ತೆರಿಗೆ ಹಂಚಿಕೆ, ಕೇಂದ್ರದ ಸಹಾಯಾನುದಾನಗಳು, ಹಣಕಾಸು ಆಯೋಗದ ಶಿಫಾರಸ್ಸುಗಳ ಮೂಲಕ ಬರುವ ಇತರೆ ಅನುದಾನಗಳು, ಸಾಲಗಳು, ಸರ್ಕಾರವು ನೀಡುವ ಸಾಲಗಳಿಂದ ಸ್ವೀಕರಿಸುವ ಬಡ್ಡಿಗಳು, ಸರ್ಕಾರದ ಅಧೀನದ ಕಂಪೆನಿಗಳು ಮತ್ತು ಸಂಸ್ಥೆಗಳಿಂದ ಸ್ವೀಕರಿಸುವ ಲಾಭಾಂಶಗಳು ಇತ್ಯಾದಿಗಳು ಸೇರುತ್ತವೆ] ಗಳು.

ರಾಜಸ್ವ ಅಂದರೆ ಸರ್ಕಾರವು ಸ್ವೀಕರಿಸುವ ರೆವಿನ್ಯೂ ಆದಾಯಗಳು. ಅಂದರೆ ಸಂವಿಧಾನವೇ ಸ್ಪಷ್ಟವಾಗಿ ಹೇಳಿರುವಂತೆ ಬಜೆಟ್ ಅಂದರೆ ವಾರ್ಷಿಕ ಹಣಕಾಸು ವಿವರ ಪತ್ರ ಎಂದೂ ಕರೆಯಲಾಗುತ್ತದೆ.

ಸಾರ್ವಜನಿಕ ನಿಧಿ ಎಂದರೆ ಜನರ ಹಣ. ಈ ಹಣವನ್ನು ನಾವು ಎಲ್ಲಿಗೆ ಖರ್ಚು ಮಾಡುತ್ತೇವೆ? ನಮ್ಮ ಜನರ ಜೀವನದ ಗುಣಮಟ್ಟ ಸುಧಾರಿಸಬೇಕು ಅಂತ ನಾವು ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಪೊಲೀಸ್ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಮುಂತಾದವುಗಳಿಗೆ ಈ ಹಣವನ್ನು ಖರ್ಚು ಮಾಡಲಾಗುತ್ತದೆ.

ಸಂಪನ್ಮೂಲಗಳು ಹೇಗೆ ಸಂಗ್ರಹ ಆಗ್ತಾ ಇವೆ? ಅದನ್ನ ಖರ್ಚು ಮಾಡೋಕೆ ಹೇಗೆ ಪ್ಲಾನ್ ಮಾಡಲಾಗುತ್ತದೆ? ಅದೆಲ್ಲಕ್ಕಿಂತ ಮುಖ್ಯವಾಗಿ, ನಾವು ಖರ್ಚು ಮಾಡಿದ ಹಣದಿಂದ ಜನರಿಗೆ ನಿಜವಾಗಲೂ ಅನುಕೂಲ ಆಗ್ತಾ ಇದೆಯೇ? ಎಂದು ಶಾಸಕರುಗಳು ಪ್ರತಿಯೊಂದನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಸಾರ್ವಜನಿಕ ನಿಧಿಯನ್ನು ಸರ್ಕಾರ ಹೇಗೆ ಬಳಸುತ್ತದೆ ? ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.

ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ

ಪ್ರತಿ ವರ್ಷ ಹೊಸ ಆರ್ಥಿಕ ವರ್ಷ ಪ್ರಾರಂಭವಾಗುವ ಮುಂಚೆ ಮಂಡನೆ ಮಾಡುವ ಬಜೆಟ್ಟಿನಲ್ಲಿ ಮುಂದಿನ ವರ್ಷಕ್ಕೆ ನಮ್ಮ ಆದ್ಯತೆಗಳೇನು? ಜನರಿಗೆ ಎಲ್ಲೆಲ್ಲಿ ಖರ್ಚು ಮಾಡಬೇಕು? ಹೊಸದಾಗಿ ಟ್ಯಾಕ್ಸ್ ಏನಾದ್ರು ಹಾಕ್ತಾ ಇದ್ದೀವಾ? ಅಥವಾ ಸರ್ಕಾರಕ್ಕೆ ಸಾಲ ಮಾಡೋ ಅವಶ್ಯಕತೆ ಇದೆಯಾ? ಇದ್ದರೆ ಯಾಕಿದೆ? ಸಾಲದಿಂದ ಜನರಿಗೆ ಅನುಕೂಲ ಆಗ್ತಾ ಇದೆಯಾ ಇಲ್ಲವಾ? ಮುಂತಾದ ವಿಷಯಗಳ ಬಗ್ಗೆಯೂ ಶಾಸಕರು ವಿಧಾನಸಭೆಯಲ್ಲಿ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು.

ಇದರ ಜೊತೆಗೆ, ಬಜೆಟ್ಟಿನಲ್ಲಿ ಹಂಚಿಕೆ ಮಾಡಿರುವ ಹಣವನ್ನು ಪರಿಣಾಮಕಾರಿಯಾಗಿ ಖರ್ಚು ಮಾಡಿದ್ದಾರಾ ಇಲ್ವಾ? ಬಜೆಟ್ಟಿನಲ್ಲಿ ಹೇಳಿದ ಹಾಗೆ ಕೆಲಸ ಆಗಿದೆಯಾ? ಅನುಮೋದನೆ ಕೊಟ್ಟ ಸಂಪನ್ಮೂಲಗಳು ಪೋಲಾಗದೆ ಸರಿಯಾಗಿ ಬಳಕೆಯಾಗಿವೆಯಾ? ಎಂದು ಗಮನಿಸಬೇಕು. ಇದನ್ನು ಇಲಾಖಾವಾರು Performance Report ಎನ್ನುತ್ತಾರೆ.

ಇದಾದ ಮೇಲೆ ಪ್ರತಿಯೊಂದು ಇಲಾಖೆಗೆ ಎಷ್ಟೆಷ್ಟು ಸಂಪನ್ಮೂಲಗಳು ಬೇಕು ಎಂದು ವಿವರವಾಗಿ ಚರ್ಚಿಸುವುದನ್ನು Demands for Grants ಎನ್ನುತ್ತಾರೆ.

ಬಜೆಟ್ ಪ್ರಕ್ರಿಯೆಯ ಅಂತಿಮ ಹಂತಗಳು:

  1. ಬಜೆಟ್ ಮಂಡಿಸಿದ ಮೇಲೆ ನಡೆಯುವ ಪ್ರಕ್ರಿಯೆಯ ಅಂತಿಮ ಹಂತಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ವಿಧಾನಸಭೆಯಲ್ಲಿ ಅನುದಾನಗಳ ಬೇಡಿಕೆಗಳನ್ನು ಅಂಗೀಕರಿಸಿದ ನಂತರ, ಆ ಎಲ್ಲಾ ಬೇಡಿಕೆಗಳನ್ನು ಒಟ್ಟುಗೂಡಿಸಿ, ‘ ಧನ ವಿನಿಯೋಗ ಮಸೂದೆ'ಯಾಗಿ (Appropriation Bill)ಮಂಡಿಸಲಾಗುತ್ತದೆ. ನಮ್ಮ ರಾಜ್ಯದ 'ಸಂಚಿತ ನಿಧಿ' (Consolidated Fund of the State) ಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ಜಮೆಗಳು ಮತ್ತು ಸಾಲಗಳು ಇರುತ್ತವೆ. ಇದು ಸಾರ್ವಜನಿಕರ ಆಸ್ತಿ. ಈ ಸಂಚಿತ ನಿಧಿಯಿಂದ ಬಡವರ, ರೈತರ, ಮಹಿಳೆಯರ, ಮಕ್ಕಳ, ಹಾಗೂ ಇನ್ನಿತರೆ ವರ್ಗಗಳ ಅಭಿವೃದ್ಧಿಗೆ ಮತ್ತು ನಾಡಿನ ಅಭಿವೃದ್ಧಿಗಾಗಿ ಹಣವನ್ನು ಖರ್ಚು ಮಾಡಲು ಸರ್ಕಾರಕ್ಕೆ ಅಧಿಕಾರ ಕೇಳುವುದು ಮತ್ತು ಆ ಅಧಿಕಾರವನ್ನು ನೀಡುವುದೇ ಧನ ವಿನಿಯೋಗ ಮಸೂದೆ.

ಹಣಕಾಸು ಮಸೂದೆ

ಕೇವಲ ಧನ ವಿನಿಯೋಗ ಮಸೂದೆ ಅಂಗೀಕಾರವಾದ ತಕ್ಷಣ ಬಜೆಟ್ ಪ್ರಕ್ರಿಯೆ ಮುಗಿಯುವುದಿಲ್ಲ. ಇದಾದ ನಂತರ ಮತ್ತೊಂದು ಪ್ರಮುಖವಾದ 'ಹಣಕಾಸು ಮಸೂದೆ'ಯನ್ನು (Finance Bill) ಸಹ ಸದನದಲ್ಲಿ ಪರಿಗಣನೆಗೆ ತೆಗೆದುಕೊಂಡು ಅಂಗೀಕಾರ ಮಾಡಬೇಕಾಗುತ್ತದೆ. ಈ ಹಣಕಾಸು ಮಸೂದೆಯಲ್ಲಿ ಏನಿರುತ್ತದೆ ಎಂದರೆ, ಹೊಸದಾಗಿ ತೆರಿಗೆ ದರಗಳಲ್ಲಿ ಏನಾದರೂ ಬದಲಾವಣೆ ಮಾಡಲಾಗಿದೆಯೇ? ವಿವಿಧ ಘಟಕಗಳ ಮೇಲೆ ತೆರಿಗೆಗಳನ್ನು ವಿಧಿಸುವ ವಿವರಗಳೇನು? ಎಂಬುದೆಲ್ಲ ಇರುತ್ತದೆ.

Supplementary Demands - ಪೂರಕ ಅಂದಾಜುಗಳು

ಆರ್ಥಿಕ ವರ್ಷದ ಮಧ್ಯದಲ್ಲಿ ಸರ್ಕಾರಕ್ಕೆ ಏನಾದ್ರು ಹೆಚ್ಚುವರಿ ಹಣ ಬೇಕಾದರೆ ಏನು ಮಾಡೋದು? ವಿಧಾನಸಭೆ ಒಪ್ಪಿಗೆ ಕೊಟ್ಟಿರೋದಕ್ಕಿಂತ ಹೆಚ್ಚು ಖರ್ಚು ಬಂದರೆ ಸುಮ್ಮನೆ ಖರ್ಚು ಮಾಡೋದಕ್ಕೆ ಆಗುತ್ತಾ? ಅಂದರೆ, ಇಲ್ಲ. ಆಗ ಸರ್ಕಾರ ಶಾಸಕಾಂಗದ ಮುಂದೆ 'ಪೂರಕ ಅನುದಾನಗಳ ಬೇಡಿಕೆಗಳನ್ನು' (Supplementary Demands for Grants) ತರಬೇಕಾಗುತ್ತದೆ. ಇದನ್ನು ವಿಧಾನಸಭೆಯ ಯಾವುದೇ ಅಧಿವೇಶನದಲ್ಲಾದರೂ ಮಂಡಿಸಬಹುದು. ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಕಠಿಣ ಸಂದರ್ಭಗಳು ಬಂದAತಹ ಸಂದರ್ಭಗಳಲ್ಲಿ ಇದನ್ನು ತರಲೇಬೇಕಾಗುತ್ತದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಆರ್ಥಿಕ ವರ್ಷ ಮುಗಿದ ಮೇಲೆ, ಜನರ ಟ್ಯಾಕ್ಸ್ ಹಣವನ್ನು ಸರ್ಕಾರ ಸರಿಯಾಗಿ ಖರ್ಚು ಮಾಡಲಾಗಿದೆಯೇ ಇಲ್ಲವೇ ಎಂದು ಲೆಕ್ಕ ಹಾಕಿ ಸಿಎಜಿ (CAG) ಅವರು ವಿಧಾನಸಭೆಗೆ ಒಂದು ರಿಪೋರ್ಟ್ ಕೊಡುತ್ತಾರೆ. ಆದರೆ ಪ್ರತಿಯೊಂದನ್ನೂ ವಿಧಾನಸಭೇಲಿ ಕೂತು ಚರ್ಚೆ ಮಾಡೋಕೆ ಕಷ್ಟ ಆಗುತ್ತೆ ಅಂತ, ಆ ಜವಾಬ್ದಾರಿಯನ್ನ 'ಸಾರ್ವಜನಿಕ ಲೆಕ್ಕಪತ್ರ ಸಮಿತಿ'ಯು ನಿರ್ವಹಿಸುತ್ತದೆ. ಶಾಸಕಾಂಗ ಯಾವ ಉದ್ದೇಶಕ್ಕೆ ಅನುದಾನ ಮಂಜೂರು ಮಾಡಿದೆಯೋ, ಅದೇ ಉದ್ದೇಶಕ್ಕೆ ಸರ್ಕಾರ ಖರ್ಚು ಮಾಡಿದೆಯಾ ಅಂತ ನೋಡೋದೆ ಈ ಸಮಿತಿಯ ಕೆಲಸ. ಸಿಎಜಿ ಅಧಿಕಾರಿಗಳು ಕೊಟ್ಟ ವರದಿಗೆ ನೀಡಲಾಗುವ ಉತ್ತರದ ಆಧಾರದ ಮೇಲೆ, ಸಮಿತಿಯು 'ಕೈಗೊಂಡ ಕ್ರಮಗಳ ವರದಿ' (Action Taken Reports) ರೆಡಿ ಮಾಡಿ ಮತ್ತೆ ವಿಧಾನಸಭೇಲಿ ತಂದು ಮಂಡಿಸಲಾಗುತ್ತದೆ. ಪ್ರಜಾಪ್ರಭುತ್ವದ ಸೌಂದರ್ಯವೇನೆಂದರೆ, ಸಾರ್ವಜನಿಕ ಲೆಕ್ಕ ಸಮಿತಿಯ (Public Accounts committee) ಅಧ್ಯಕ್ಷರನ್ನಾಗಿ ವಿರೋಧ ಪಕ್ಷದ ನಾಯಕರನ್ನೆ ನೇಮಿಸಲಾಗುತ್ತದೆ. ಅಥವಾ ವಿರೋಧ ವಿರೋಧ ಪಕ್ಷದ ನಾಯಕರು ಸೂಚಿಸಿದವರನ್ನು ನೇಮಕ ಮಾಡಲಾಗುತ್ತದೆ.

ವಿತ್ತೀಯ ಶಿಸ್ತು ಉಲ್ಲಂಘಿಸಿಲ್ಲ, ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಸಿಎಂ

ಸರ್ಕಾರದ ಹಣಕಾಸು

ಹಣಕಾಸು ಸಚಿವರು ಬಜೆಟ್ ಮಂಡಿಸುವಾಗ ಕೊಡುವ Annual Financial Statement ನಲ್ಲಿ ಏನಿರುತ್ತೆ? ಮುಂದಿನ ವರ್ಷಕ್ಕೆ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಖರ್ಚು ಮಾಡಲಾಗುತ್ತದೆ? ಹಾಗೆ ಖರ್ಚು ಮಾಡೋದಕ್ಕೆ ಟ್ಯಾಕ್ಸ್ ಮುಖಾಂತರ, ಬೇರೆ ಬೇರೆ ಮೂಲಗಳಿಂದ ಎಷ್ಟು ಹಣ ಸಂಗ್ರಹ ಮಾಡುತ್ತೇವೆ, ಕಳೆದ ವರ್ಷ ಅಂದಾಜು ಮಾಡಿದಷ್ಟು ಹಣ ಬಂತಾ, ಎಷ್ಟು ಖರ್ಚು ಆಯ್ತು ಎಂಬುದರ ಬಗ್ಗೆ ವಿವರ ಇರುತ್ತದೆ. ಜೊತೆಗೆ ಸರ್ಕಾರದ ಸಾಲದ ಅವಶ್ಯಕತೆ ಎಷ್ಟಿದೆ ಅನ್ನೋದನ್ನೂ ಇದು ಹೇಳುತ್ತದೆ.

ಸರ್ಕಾರಕ್ಕೆ ಈ ಖರ್ಚು ನಿಭಾಯಿಸುವುದಕ್ಕೆ ಸ್ವೀಕೃತಿಗಳು (Receipts)ಮುಖ್ಯವಾಗಿ ಮೂರು ಮೂಲಗಳಿಂದ ಬರುತ್ತದೆ.

ಅ. ರಾಜ್ಯದ ಸ್ವಂತ ಆದಾಯ,

ಬಿ. ಕೇಂದ್ರ ಸರ್ಕಾರದಿಂದ ಬರುವ ರಾಜ್ಯದ ಪಾಲು ಮತ್ತು ಸಹಾಯಾನುಧನಗಳು

ಸಿ. ಸಾಲ

ರಾಜ್ಯದ ಸ್ವಂತ ಆದಾಯದಲ್ಲಿ 'ತೆರಿಗೆ' (Tax) ಮತ್ತು 'ತೆರಿಗೆಯೇತರ' (Non-tax) ಎಂದು ಎರಡು ವಿಧಗಳಿವೆ. ಜಿಎಸ್‌ಟಿ, ಅಬಕಾರಿ, ಸೇಲ್ಸ್ ಟ್ಯಾಕ್ಸ್, ಸ್ಟ್ಯಾಂಪ್‌ಡ್ಯೂಟಿ, ಸಾರಿಗೆ ಇಲಾಖೆಯಿಂದ ಬರುವ ಆದಾಯ ಮುಂತಾದವು. ಬೇರೆ ಬೇರೆ ಇಲಾಖೆಗಳು ಹಾಕೋ ಫೀಸ್, ಫೈನ್, ಸಾಲದ ಮೇಲಿನ ಬಡ್ಡಿ, ಗಣಿಗಾರಿಕೆ ರಾಯಲ್ಟಿಯಿಂದ ಬರೋದು ತೆರಿಗೆಯೇತರ ಆದಾಯ.

ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಸ್ವೀಕೃತವಾಗುವ ತೆರಿಗೆ ಪಾಲು (Devolution of taxes) ಬರಲೇಬೇಕು. ಇದಲ್ಲದೆ, ಕೇಂದ್ರದಿಂದ ಬರುವ 'ಸಹಾಯಾನುದಾನ' (Grants-in-aid) ಬರುತ್ತದೆ. ಆ ಅನುದಾನಗಳನ್ನು ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಬಳಸಬೇಕು.

ನಮ್ಮ ರಾಜ್ಯದ ಆದಾಯ ಮತ್ತು ಕೇಂದ್ರದ ಪಾಲು ಎರಡೂ ಸೇರಿಸಿದರೂ ಅನುದಾನ ಸಾಕಾಗಲ್ಲ ಎಂದಾಗ ಸಾಲ ಮಾಡಬೇಕಾಗುತ್ತದೆ. ಸಾಲ ತೆಗೆದುಕೊಂಡಾಗ ಸರ್ಕಾರದ ಹೊಣೆಗಾರಿಕೆ (Liability)ಹೆಚ್ಚಾಗುತ್ತದೆ. ಇವುಗಳನ್ನು 'ಬಂಡವಾಳ ಜಮೆಗಳು' (Capital Receipts) ಎಂದು ಕರೆಯುತ್ತೇವೆ.

ಸರ್ಕಾರ ಅನುದಾನವನ್ನು ಹೇಗೆ ಖರ್ಚು ಮಾಡುತ್ತದೆ? ಇದರಲ್ಲಿ ಎರಡು ವಿಧ. ನೌಕರರ ಸಂಬಳ, ಪಿಂಚಣಿ, ಸಾಲದ ಮೇಲಿನ ಬಡ್ಡಿ, ಸಬ್ಸಿಡಿ ಕೊಡೋದು- ಇವೆಲ್ಲವನ್ನೂ 'ರೆವೆನ್ಯೂ ವೆಚ್ಚ' (revenue expenditure) ಎನ್ನಲಾಗುತ್ತದೆ. ಶಾಲೆ, ಆಸ್ಪತ್ರೆ ಕಟ್ಟಿದ್ರೆ, ರಸ್ತೆ ಮಾಡಿದ್ರೆ, ಹೊಸ ಆಸ್ತಿ ಸೃಷ್ಟಿ ಮಾಡಿದ್ರೆ ಅದನ್ನು 'ಬಂಡವಾಳ ವೆಚ್ಚ' (capital expenditure) ಎನ್ನಲಾಗುತ್ತದೆ.

ವಿತ್ತೀಯ ಕೊರತೆ- Fiscal deficit

ಇನ್ನೊಂದು ಬಹಳ ಮುಖ್ಯವಾದ ವಿಚಾರ. ನಮಗೆ ಬರೋ ಆದಾಯಕ್ಕಿಂತ ಖರ್ಚು ಜಾಸ್ತಿ ಆದ್ರೆ ನಾವು ಸಾಲ ಮಾಡುತ್ತೇವೆ. ಈ ಅಂತರವನ್ನೇ 'ವಿತ್ತೀಯ ಕೊರತೆ' (fiscal deficit) ಎಂದು ಕರೆಯುತ್ತೇವೆ. ಅಂದರೆ, ರಾಜ್ಯದ ಒಟ್ಟು ರಾಜಸ್ವ ಸಂಗ್ರಹಕ್ಕಿಂತ [ಸಾಲ ಹೊರತು ಪಡಿಸಿ] ಹೆಚ್ಚಿನ ವೆಚ್ಚಗಳಾಗುವಂತಿದ್ದರೆ ಅದನ್ನು ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫ್ಸಿಟ್ ಎನ್ನುತ್ತೇವೆ.

ರಾಜಸ್ವ ಕೊರತೆ- Revenue deficit

ರಾಜಸ್ವ ಕೊರತೆ ಅಥವಾ ರೆವಿನ್ಯೂ ಡೆಫಿಸಿಟ್ ಎಂದರೆ, ರಾಜ್ಯವು ಒಟ್ಟಾರೆ ಸ್ವೀಕರಿಸುವ ರಾಜಸ್ವಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವೆಚ್ಚ ಮಾಡಬೇಕಾದರೆ ಅದನ್ನು ರಾಜಸ್ವ ಕೊರತೆ ಎನ್ನಲಾಗುತ್ತದೆ. ರಾಜ್ಯದ ದೈನಂದಿನ ಆಡಳಿತ, ಸಂಬಳ, ಬಡ್ಡಿ ಪಾವತಿ, ಸಹಾಯಧನ ಮುಂತಾದವು ಸೇರುತ್ತವೆ.

Karntaka Fiscal Responsibility Act -2002 - FRBM ಕಾಯ್ದೆ

ವಿತ್ತೀಯ ಕೊರತೆ-ರಾಜಸ್ವ ಕೊರತೆಗಳು ಹೆಚ್ಚಾಗದಂತೆ ಕಡಿವಾಣ ಹಾಕುವ ಮೂಲಕ ಆರ್ಥಿಕತೆಯನ್ನು ಆರೋಗ್ಯಕರವಾಗಿಟ್ಟುಕೊಳ್ಳಲು 2002ರಲ್ಲಿ ' FRBM ಕಾಯ್ದೆ' ತರಲಾಗಿದೆ. ಕೇಂದ್ರ ಸರ್ಕಾರ 2003 ರಲ್ಲಿ ಕಾಯ್ದೆ ತಂದಿತು. ನಮ್ಮಲ್ಲಿ ಒಂದು ವರ್ಷ ಮೊದಲೇ ಕಾಯ್ದೆಯನ್ನು ತಂದು ಅಳವಡಿಸಿಕೊಂಡೆವು. ಚಾಲ್ತಿ ವರ್ಷದಲ್ಲಿ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಒಳಗೆ ಇರಬೇಕು. ಒಟ್ಟು ಸಾಲವು ಜಿಎಸ್‌ಡಿಪಿಯ ಶೇ.25 ಕ್ಕಿಂತ ಹೆಚ್ಚು ಇರಬಾರದು ಎಂದು ನಿಯಮ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಈ ನಿಯಮಗಳನ್ನು ನಮ್ಮ ಸರ್ಕಾರವು ಕಟ್ಟು ನಿಟ್ಟಾಗಿ ಪಾಲಿಸುತ್ತಿದೆ.

ಬಜೆಟ್ ದಾಖಲೆಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಸಿದ್ಧಪಡಿಸಿ ತಮಗೆ ನೀಡಲಾಗುತ್ತದೆ.

ಅ- ಬಜೆಟ್ಟಿನ ಒಟ್ಟು ಸಾರಾಂಶ ಹೇಳುವ ದಾಖಲೆಗಳು- 'Summary Documents',

ಬಿ- ಇಲಾಖೆಗಳ ಖರ್ಚಿನ ಸಂಪೂರ್ಣ ವಿವರಗಳುಳ್ಳ ದಾಖಲೆ-‘‘Expenditure Documents',

ಸಿ- ಸರ್ಕಾರಕ್ಕೆ ಬರುವ ಆದಾಯದ ಲೆಕ್ಕ ಕೊಡುವ ದಾಖಲೆ- 'Receipts Documents',

ಡಿ- ಸರ್ಕಾರದ ಆರ್ಥಿಕ ಶಿಸ್ತು, ರಾಜ್ಯದ ಪ್ರಗತಿ ಹಾಗೂ ಮುನ್ನೋಟವನ್ನು ತೋರಿಸುವ ಮಧ್ಯಮಾವಧಿ ವಿತ್ತೀಯ ಯೋಜನೆ- Medium term fiscal plan

ಇದಕ್ಕೂ ಮೊದಲು ಆರ್ಥಿಕ ಸಮೀಕ್ಷೆಯ ವಿವರಗಳನ್ನು ಕೊಡಲಾಗುತ್ತದೆ. 

ಪ್ರಮುಖ ಪದಗಳ ಅರ್ಥಕೋಶ (Glossary of key terms)

ಜಮೆಗಳು (Receipts): ಇದು ಸರ್ಕಾರಕ್ಕೆ ಬರುವ ಒಟ್ಟು ಹಣ. ಇದರಲ್ಲಿ ನಾವು ಟ್ಯಾಕ್ಸ್ ಮೂಲಕ ಗಳಿಸಿದ ಹಣ, ಕೇಂದ್ರದಿಂದ ನಮಗೆ ಬಂದ ಹಣ ಮತ್ತು ನಾವು ತಂದ ಸಾಲ ಅಥವಾ ಬೇರೆಯವರಿಗೆ ಕೊಟ್ಟಿದ್ದ ಸಾಲ ವಸೂಲಿ ಮಾಡಿದ್ದು ಮುಂತಾದವು ಸೇರಿರುತ್ತವೆ.

ಪರಿಣಾಮಕಾರಿ ರೆವೆನ್ಯೂ ಕೊರತೆ (Effective revenue deficit): ಈ ರೆವೆನ್ಯೂ ಕೊರತೆಯಲ್ಲಿ, ಬೇರೆ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ಸೃಷ್ಟಿ ಮಾಡೋದಕ್ಕೆ ಸರ್ಕಾರ ಕೊಟ್ಟಿರುವ ಅನುದಾನವನ್ನ ಕಳೆದಾಗ ಸಿಗುವ ಅಸಲಿ ಮೊತ್ತ.

ಪ್ರಾಥಮಿಕ ಕೊರತೆ (Primary deficit): ನಮ್ಮ ಒಟ್ಟು ವಿತ್ತೀಯ ಕೊರತೆಯಿಂದ, ನಾವು ಹಳೆಯ ಸಾಲಕ್ಕೆ ಕಟ್ಟುವ ಬಡ್ಡಿಯನ್ನ ಕಳೆದರೆ ಬರುವ ಮೊತ್ತ. ಬಡ್ಡಿ ಹೊರತುಪಡಿಸಿ, ಅಸಲಿಗೆ ನಮ್ಮ ಖರ್ಚು ಮತ್ತು ಆದಾಯದ ಮಧ್ಯೆ ಎಷ್ಟು ಅಂತರ ಇದೆ ಅಂತ ಇದು ತೋರಿಸುತ್ತದೆ.

ರಾಜ್ಯ ದೇಶೀಯ ಉತ್ಪನ್ನ GSDP): ಒಂದು ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾದ ಒಟ್ಟು ಸರಕು ಮತ್ತು ಸೇವೆಗಳ ಮೌಲ್ಯ. ನಮ್ಮ ನಾಡಿನ ಆರ್ಥಿಕತೆ ಎಷ್ಟು ಬೆಳೆದಿದೆ ಅನ್ನುವುದನ್ನು ಅಳೆಯುವ ಅಳತೆಗೋಲು.

ರಾಜ್ಯದ ಸಂಚಿತ ನಿಧಿ (Consolidated Fund of the State): ಇದು ರಾಜ್ಯ ಸರ್ಕಾರದ ಅತಿ ದೊಡ್ಡ ನಿಧಿ. ಸರ್ಕಾರಕ್ಕೆ ಬರುವ ಎಲ್ಲಾ ಆದಾಯವೂ ಈ ನಿಧಿಗೆ ಹೋಗುತ್ತದೆ ಮತ್ತು ನಮ್ಮ ಎಲ್ಲಾ ಖರ್ಚುಗಳನ್ನೂ ಇದೇ ನಿಧಿಯಿಂದಲೇ ಮಾಡಲಾಗುತ್ತದೆ.

Charged expenditure: ಈ ಖರ್ಚಿಗೆ ವಿಧಾನಸಭೆಯಲ್ಲಿ ಶಾಸಕರು ವೋಟ್ ಹಾಕೋ ಅಗತ್ಯ ಇಲ್ಲ. ಇದು ನೇರವಾಗಿ ಸರ್ಕಾರದ ನಿಧಿಯಿಂದ (ಸಂಚಿತ ನಿಧಿ) ಖರ್ಚಾಗುತ್ತದೆ. ಉದಾಹರಣೆಗೆ, ಸಾಲದ ಬಡ್ಡಿ ಕಟ್ಟುವುದು, ಹೈಕೋರ್ಟ್ ಜಡ್ಜ್ಗಳು ಮತ್ತು ರಾಜ್ಯಪಾಲರ ಸಂಬಳ. ಇವುಗಳ ಬಗ್ಗೆ ಚರ್ಚೆ ಮಾಡಬಹುದು ಅಷ್ಟೇ.

ಮತದಾನದ ವೆಚ್ಚ (Voted expenditure): Charged expenditure ಬಿಟ್ಟು ಉಳಿದೆಲ್ಲಾ ಖರ್ಚುಗಳಿಗೆ ವಿಧಾನಸಭೆಯಲ್ಲಿ, ‘ಅನುದಾನಗಳ ಬೇಡಿಕೆ'ಯಾಗಿ ಬಂದು, ಶಾಸಕರು ವೋಟ್ ಹಾಕಿ ಒಪ್ಪಿಗೆ ಕೊಟ್ಟರೆ ಮಾತ್ರ ಖರ್ಚು ಮಾಡೋದಕ್ಕೆ ಸಾಧ್ಯವಾಗೋದು.

ಹಣಕಾಸು ಮಸೂದೆ (Finance Bill): ಬಜೆಟ್ ಜೊತೆ ತರುವ ಮಸೂದೆ ಇದು. ಮುಂದಿನ ವರ್ಷಕ್ಕೆ ಟ್ಯಾಕ್ಸ್ ದರಗಳಲ್ಲಿ ಏನೇನು ಬದಲಾವಣೆ ಮಾಡ್ತಾ ಇದ್ದೀವಿ ಅನ್ನೋದನ್ನ ಇದು ಒಳಗೊಂಡಿರುತ್ತದೆ.

ಧನ ವಿನಿಯೋಗ ಮಸೂದೆ (Appropriation Bill): ಬಜೆಟ್ ಪಾಸ್ ಆದ ಮೇಲೆ, ಸರ್ಕಾರದ ನಿಧಿಯಿಂದ (ಸಂಚಿತ ನಿಧಿ) ಅಧಿಕೃತವಾಗಿ ಹಣ ತೆಗೆಯುವುದಕ್ಕೆ ಸರ್ಕಾರಕ್ಕೆ ಅಧಿಕಾರ ಕೊಡುವ ಮಸೂದೆ ಇದು.

ಈ ಎಲ್ಲ ವಿಚಾರಗಳನ್ನು ಶಾಸಕರು ಅರಿತು ಅರ್ಥಪೂರ್ಣ ಚರ್ಚೆ ನಡೆಸಬೇಕು. ಬಜೆಟ್ಟನ್ನು ಅರ್ಥ ಮಾಡಿಕೊಳ್ಳುವ ಶಾಸಕರ ಸಂಖ್ಯೆಯೇ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಬಹುದೆಂದು ನಾನು ಭಾವಿಸಿದ್ದೇನೆ.

ಸಿದ್ದರಾಮಯ್ಯ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?; ಯೋಜನೆ, ಅನುದಾನದ ಮಾಹಿತಿ ಇಲ್ಲಿದೆ

ಬಜೆಟ್ ಎಷ್ಟೆ ಒಳ್ಳೆಯದಾಗಿದ್ದರೂ ಅದನ್ನು ಅರ್ಥ ಪೂರ್ಣವಾಗಿ ಖರ್ಚು ಮಾಡುವುದರಲ್ಲಿ ಶಾಸಕರ ಪಾತ್ರ ದೊಡ್ಡದು. ಇಲಾಖಾ ಮಂತ್ರಿಗಳು, ಶಾಸಕರು ಈ ಕುರಿತು ಕಾಳಜಿ ವಹಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಜೆಟ್ ಮಂಡಿಸಿದ ಮೇಲೆ ಕೂಡಲೆ ಆದೇಶಗಳನ್ನು ಹೊರಡಿಸಿದರೆ ಅರ್ಥಪೂರ್ಣವಾಗಿ ವೆಚ್ಚ ಮಾಡುವುದೂ ಸಾಧ್ಯವಾಗುತ್ತದೆ. ಈ ಕುರಿತೂ ಸಹ ನೀವು ಗಮನ ಹರಿಸಬೇಕಾಗುತ್ತದೆ ಎಂದು ಸಿಎಂ ಸಲಹೆ ನೀಡಿದ್ದಾರೆ.