ಜೈಲಿನಲ್ಲಿರೋ ಕೈದಿಗಾಗಿ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್ ರವಾನೆ; ಬೆಂಗಳೂರಿನಲ್ಲಿ ಯುವತಿ ಅರೆಸ್ಟ್
Bengaluru Central Prison: ಯುವತಿ ಸಾಗಿಸುತ್ತಿದ್ದ ನಿಷೇಧಿತ ವಸ್ತುಗಳನ್ನು ಬೆಂಗಳೂರು ಸೆಂಟ್ರಲ್ ಜೈಲಿನ ಸಿಬ್ಬಂದಿ ವಶಕ್ಕೆ ಪಡೆದು, ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ಯುವತಿ ಮೇಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರು ಸೆಂಟ್ರಲ್ ಜೈಲು. -
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಬಗ್ಗೆ ವಿಡಿಯೊವೊಂದು ವೈರಲ್ ಆದ ಬೆನ್ನಲ್ಲೇ ಮತ್ತೊಂದು ಅಕ್ರಮ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸೆಂಟ್ರಲ್ ಜೈಲಿನೊಳಗೆ (Bengaluru Central Prison) ನಿಷೇಧಿತ ವಸ್ತುಗಳನ್ನು ಸಾಗಣೆ ಮಾಡಲು ಯತ್ನಿಸಿದ ಯುವತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಡಿಜಿಪಿ ಅಲೋಕ್ ಕುಮಾರ್ ಅವರು ಹಲವು ಕಠಿಣ ಕ್ರಮ ತೆಗೆದುಕೊಂಡಿರುವ ನಂತರವೂ ಜೈಲುಗಳಲ್ಲಿ ಅವ್ಯವಹಾರ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಮಾರ್ಚ್ 26ರಂದು ಸಂಜೆ ಸಾಮಾನ್ಯ ಭೇಟಿಯ ವಿಭಾಗದಲ್ಲಿ ರಿತಿಕಾ ರೈ ಎಂಬಾಕೆ ವಿಚಾರಣಾಧೀನ ಕೈದಿ ಫರ್ಹಾನ್ ಖಾನ್‌ನ ಭೇಟಿಯಾಗಲು ಪಾಸ್ ಪಡೆದು ಹೋಗಿದ್ದಳು. ತಪಾಸಣೆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅನುಮಾನ ಉಂಟಾಗಿ ಪರಿಶೀಲನೆ ನಡೆಸಿದಾಗ, ಮಹಿಳೆಯ ಖಾಸಗಿ ಭಾಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್‌ಗಳು ಹಾಗೂ ಏರ್ಟೆಲ್ 5ಜಿ ಸಿಮ್ ಕಾರ್ಡ್‌ಗಳನ್ನು ಅಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ರಿತಿಕಾ ರೈ ಮತ್ತು ಫರ್ಹಾನ್ ಖಾನ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022 ಮತ್ತು ಬಿಎನ್‌ಎಸ್ ಸೆಕ್ಷನ್ 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.