Bengaluru Stampede: ಕಾಲ್ತುಳಿತ ಎಫೆಕ್ಟ್: ಚಿನ್ನಸ್ವಾಮಿ ಸ್ಟೇಡಿಯಂಗೆ ವಿದ್ಯುತ್ ಸಂಪೂರ್ಣ ಕಟ್
ಕಾಲ್ತುಳಿತ (Bengaluru Stampde) ಘಟನೆಯ ನಂತರ, ಕ್ರೀಡಾಂಗಣದ ಸುರಕ್ಷತಾ ವ್ಯವಸ್ಥೆಗಳ ಕುರಿತು ತೀವ್ರ ಚರ್ಚೆ ಆರಂಭವಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ಕೆಎಸ್‌ಸಿಎ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿತ್ತು. ಇದರ ಜೊತೆಗೆ, ಕ್ರೀಡಾಂಗಣವು ಅಗ್ನಿಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.


ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ (Chinnaswamy Stadium) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಶಾಕ್ ನೀಡಿದೆ. ಸ್ಟೇಡಿಯಂಗೆ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದೆ. ಕ್ರೀಡಾಂಗಣವು (Bengaluru Stampede) ಅಗತ್ಯ ಅಗ್ನಿಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದು ಮತ್ತು ಫೈರ್ ಸೇಫ್ಟಿ ಸರ್ಟಿಫಿಕೇಟ್ (NOC) ಪಡೆಯದಿರುವುದು ಇದಕ್ಕೆ ಕಾರಣವಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (KSFES) ಮಹಾನಿರ್ದೇಶಕರು ಬೆಸ್ಕಾಂಗೆ (BESCOM) ಪತ್ರ ಬರೆದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಒಡೆತನದ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದ್ದಾರೆ.
ಜೂನ್ 4, 2025ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆಯ ನಂತರ, ಕ್ರೀಡಾಂಗಣದ ಸುರಕ್ಷತಾ ವ್ಯವಸ್ಥೆಗಳ ಕುರಿತು ತೀವ್ರ ಚರ್ಚೆ ಆರಂಭವಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ಕೆಎಸ್‌ಸಿಎ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿತ್ತು. ಇದರ ಜೊತೆಗೆ, ಕ್ರೀಡಾಂಗಣವು ಅಗ್ನಿಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಇದೀಗ ಪವರ್ ಕಟ್ ಆದೇಶವನ್ನೂ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಚಿನ್ನಸ್ವಾಮಿ ಕ್ರೀಡಾಂಗಣವು ಅಗ್ನಿಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದಿರುವುದರಿಂದ ಮತ್ತು ಫೈರ್ ಸೇಫ್ಟಿ ಎನ್‌ಒಸಿ ಪಡೆಯದಿರುವುದರಿಂದ, ಕ್ರೀಡಾಂಗಣದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಸ್ಕಾಂನ ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದ ಆಧಾರದ ಜೊತೆಗೆ, ಜೂನ್ 30, 2025 ರಂದು ಬೆಸ್ಕಾಂ ಕ್ರೀಡಾಂಗಣಕ್ಕೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿತು.
ಕೆಎಸ್‌ಎಫ್‌ಇಎಸ್ ಮಹಾನಿರ್ದೇಶಕರು ತಮ್ಮ ಪತ್ರದಲ್ಲಿ, ಸಾವಿರಾರು ಜನರು ಸೇರುವ ಚಿನ್ನಸ್ವಾಮಿ ಕ್ರೀಡಾಂಗಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಸುರಕ್ಷತಾ ಕ್ರಮಗಳು ಕಡ್ಡಾಯವಾಗಿರುವುದನ್ನು ಒತ್ತಿ ಹೇಳಿದ್ದಾರೆ. ಕ್ರೀಡಾಂಗಣವು ಈ ಮಾನದಂಡಗಳನ್ನು ಉಲ್ಲಂಘಿಸಿರುವುದರಿಂದ, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Bengaluru Stampede: ಚಿನ್ನಸ್ವಾಮಿ ಕಾಲ್ತುಳಿತ ಕುರಿತು ಕೇಂದ್ರಕ್ಕೆ ರಾಜ್ಯ ವರದಿ; ʼಇದೇ ಕಾರಣʼ ಎಂದ ಸರಕಾರ