CET Exam: ಸಿಇಟಿ ಪರೀಕ್ಷೆಯಲ್ಲಿ ಮತ್ತೆ ಅಭ್ಯರ್ಥಿಯ ಜನಿವಾರ ತೆಗೆಸಿದ ಸಿಬ್ಬಂದಿ!
ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಜಗ್ಗಾಟ ಸದ್ದು ಮಾಡ್ತಿದೆ. ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಸಿಬ್ಬಂದಿಯೇ ಬಲವಂತವಾಗಿ ತೆಗೆಸಿದ್ದು, ಬಳಿಕ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ.24: ರಾಜ್ಯದಾದ್ಯಂತ ಸಿಇಟಿ (CET Exam) ಪರೀಕ್ಷೆಗಳು ಆರಂಭವಾಗಿದೆ. ಮೊದಲ ದಿನವೇ ಬೆಂಗಳೂರಿನ (Bengaluru) ಕಾಲೇಜಿನಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ (sacred thread) ತೆಗೆಸಿರುವ ಘಟನೆ ನಡೆದಿದ್ದು, ವಿವಾದ ಮತ್ತೆ ಮರುಕಳಿಸಿದೆ. ಮಡಿವಾಳದ ಕೃಪಾನಿಧಿ ಕಾಲೇಜು (Kripanidhi College) ಪರೀಕ್ಷಾ ಕೇಂದ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ.
ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಜಗ್ಗಾಟ ಸದ್ದು ಮಾಡ್ತಿದೆ. ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಸಿಬ್ಬಂದಿಯೇ ಬಲವಂತವಾಗಿ ತೆಗೆಸಿದ್ದು, ಬಳಿಕ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗುರುವಾರ (ಏಪ್ರಿಲ್ 23) ನಡೆದ ಪರೀಕ್ಷೆ ವೇಳೆ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ ಸಿಬ್ಬಂದಿಗಳು ಬಲವಂತವಾಗಿ ಜನಿವಾರ ತೆಗೆಯುವಂತೆ ಒತ್ತಡ ಹೇರಿದರು ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದಾಗ, ‘ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರದಿಂದ ಹೊರಹೋಗಿ’ ಎಂದು ಧಮಕಿ ಹಾಕಿದರು ಎಂದು ಆರೋಪಿಸಲಾಗಿದೆ.
ಜನಿವಾರ ಹಾಕಿದ್ದ ವಿದ್ಯಾರ್ಥಿಗಳನ್ನು ಸಿಬ್ಬಂದಿ ತಡೆದ ಬಳಿಕ ಪೋಷಕರೇ ಮಧ್ಯ ಪ್ರವೇಶ ಮಾಡಿದ್ದು, ಮಕ್ಕಳ ಭವಿಷ್ಯಕ್ಕಾಗಿ ಜನಿವಾರ ತೆಗೆಸಿ ಮಗನನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿದರು ಎಂದು ತಿಳಿದು ಬಂದಿದೆ.
Janivara Row: ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಇಬ್ಬರು ಸಿಬ್ಬಂದಿ ಮೇಲೆ ಎಫ್‌ಐಆರ್
ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಗೊತ್ತಾಗ್ತಿದ್ದಂತೆ ಶಿಕ್ಷಣ ಇಲಾಖೆ ಮತ್ತು ಸಿಇಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು, ಈ ಬಗ್ಗೆ ದೂರು ನೀಡಬೇಡಿ ಎಂದು ಪತ್ರ ಬರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜನಿವಾರ ತೆಗೆಸುವ ಮೂಲಕ ಧಾರ್ಮಿಕ ಹಕ್ಕಿಗೆ ಧಕ್ಕೆ ತರುವವರ ವಿರುದ್ಧ ಕ್ರಮ ಆಗಬೇಕು ಎಂದು ಪೋಷಕರು ಹಾಗೂ ಧಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಗುತಿಗೆ ಗಮ್ ಟೇಪ್
ಚಿಕ್ಕಮಗಳೂರು ನಗರದ MES ಕಾಲೇಜಿನಲ್ಲಿ ಮೂಗು ಬೊಟ್ಟು ಧರಿಸಿ CET ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರನ್ನು ಗೇಟ್ನಲ್ಲೇ ತಡೆದು ನಿಲ್ಲಿಸಲಾಗಿದೆ. ಮೆಟಲ್ ಹಾಕಿ ಬರುವಂತಿಲ್ಲ ಎಂಬ ಆದೇಶವಿದೆ. ಹೀಗಾಗಿ ಮೂಗು ಬೊಟ್ಟು ಧರಿಸಿದವರನ್ನು ಸಿಬ್ಬಂದಿ ತಡೆದಿದ್ದಾರೆ. ಮೂಗುತಿ ತೆಗೆಯಲು ಪ್ರಯತ್ನಿಸಿ, ಅದು ಬಾರದೇ ಇದ್ದಾಗ ಮೂಗು ಬೊಟ್ಟಿಗೆ ಗಮ್ ಟೇಪ್ ಅಂಟಿಸಿ ಪರೀಕ್ಷಾ ಕೊಠಡಿಗೆ ಕಳುಹಿಸಿದ್ದಾರೆ.