Eid Milad: ಸಡಗರ ಸಂಭ್ರಮದ ಈದ್ ಮಿಲಾದ್ ಆಚರಣೆ -ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ
ಪ್ರವಾದಿ ಮಹಮ್ಮದ್ ಪೈಗಂಬರ್ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿ ಕೊಳ್ಳ ಬೇಕು. ಶಾಂತಿಯ ಹಾದಿಯಲ್ಲಿ ಸಾಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಹಿಂದೂಗಳು, ಮುಸ್ಲಿ ಮರು ಸಹೋದರರಿದ್ದಂತೆ. ನಾವೆಲ್ಲರೂ ಒಂದಾಗಿ ಬಾಳಬೇಕು. ಅರ್ಥಪೂರ್ಣವಾಗಿ ಹಬ್ಬ ಆಚರಿಸ ಬೇಕು

-

ಚಿಂತಾಮಣಿ: ಹಜರತ್ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಆಚರಿಸುವ ಈದ್ ಮಿಲಾದ್ ಹಬ್ಬವನ್ನು ವಾಣಿಜ್ಯ ನಗರಿ ಚಿಂತಾಮಣಿ ಯಲ್ಲಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಹಬ್ಬದ ಅಂಗವಾಗಿ ನಗರದ ಹಲವು ಬೀದಿಗಳು ಹಾಗೂ ಮಸೀದಿಗಳ ಸಂಪರ್ಕಿಸುವ ರಸ್ತೆಯನ್ನು ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.ಪ್ರವಾದಿಯವರನ್ನು ಗೌರವಿಸುವ ಬರಹಗಳನ್ನು ದೀಪದ ಬೆಳಕಿನಲ್ಲಿ ವಿನ್ಯಾಸಗೊಳಿಸಲಾಗಿತ್ತು.
ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಮೆರವಣಿಗೆ ನಡೆಸಿದರು. ನಗರದ ಹೃದಯ ಭಾಗದ ದೊಡ್ಡಪೇಟೆ ಜಾಮಿಯಾ ಮಸೀದಿ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: Chikkaballapur News: ಭಾಗ್ಯನಗರದಲ್ಲಿ ಆರಂಭವಾಗಿದೆ ಆರೋಗ್ಯ ಸೇವೆಯ ಹೊಸ ಅಧ್ಯಾಯ!
ಹಸಿರು ವರ್ಣದ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.ಮೆಕ್ಕಾ ಮದೀನಾ,ಮಸೀದಿ, ಪ್ರತಿಕೃತಿಗಳು ಗಮನ ಸೆಳೆದವು.
ಮೆರವಣಿಗೆ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಮೆಹಬೂಬ್ ನಗರ, ಶಾಂತಿನಗರ, ಹೂವಿನ ಪೇಟೆ, ನೆಕ್ಕುಂದಿಪೇಟೆ, ಚೇಳೂರು ರಸ್ತೆ ಮುಖಾಂತರ ಗಜಾನನ ವೃತ್ತದಿಂದ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನದ ವರಿವಿಗೆ ಹೋಗಿ ಅಲ್ಲಿ ಅಸರ್ ನಮಾಜ್ ಸಲ್ಲಿಸಲಾಯಿತು.
ಜಾಮಿಯಾ ಮಸೀದಿ ಅಧ್ಯಕ್ಷರಾದ ಮೂನ್ ಸ್ಟಾರ್ ಗೌಸ್ ಪಾಷಾ ಮಾತನಾಡಿ, ಭಾವೈಕ್ಯದಿಂದ ಕೂಡಿದ ರಾಷ್ಟ್ರ ಭಾರತ.ನಾವೆಲ್ಲರೂ ಭಿನ್ನಾಭಿಪ್ರಾಯ ಮರೆತು, ಸಹಬಾಳ್ವೆಯಿಂದ ಬದುಕಬೇಕು ಎಂದು ಹೇಳಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು. ಶಾಂತಿಯ ಹಾದಿಯಲ್ಲಿ ಸಾಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಹಿಂದೂಗಳು, ಮುಸ್ಲಿಮರು ಸಹೋದರರಿದ್ದಂತೆ. ನಾವೆಲ್ಲರೂ ಒಂದಾಗಿ ಬಾಳಬೇಕು. ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.
ಜಾಮಿಯಾ ಮಸೀದಿ ಕಮಿಟಿಯ ಎಲ್ಲಾ ಸದಸ್ಯರು ಸೇರಿದಂತೆ ನಗರ ಭಾಗದ ಎಲ್ಲ ಮಸೀದಿಗಳ ಮುಖ್ಯಸ್ಥರು,ಮುಸ್ಲಿಂ ಬಾಂಧವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇನ್ನು ಮೆರವಣಿಗೆ ವೇಳೆ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಮುರಳಿಧರ್ ರವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.