ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಹೆಣ್ಣು ಮಗು ಎಂಬ ಕಾರಣಕ್ಕೆ 13 ದಿನಗಳ ಮಗುವನ್ನು ಸಂಪ್‌ಗೆ ಎಸೆದು ಕೊಂದ ತಂದೆ!

Child murder: ಚಿಕ್ಕಬಳ್ಳಾಪುರ ನಗರದ ಶಾಂತಿನಗರ (ನಕ್ಕಲಕುಂಟೆ) ಪ್ರದೇಶದಲ್ಲಿ ಘಟನೆ ನಡೆದಿದೆ. ತಾಯಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮತ್ತೊಮ್ಮೆ ಹೆಣ್ಣು ಮಗು ಜನಿಸಿದ್ದೇ ಕೃತ್ಯಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

13 ದಿನಗಳ ಹೆಣ್ಣು ಮಗುವನ್ನು ಸಂಪ್‌ಗೆ ಎಸೆದು ಕೊಂದ ತಂದೆ!

-

Prabhakara R
Prabhakara R Jul 24, 2026 5:25 PM

ಚಿಕ್ಕಬಳ್ಳಾಪುರ : ಹೆಣ್ಣು ಮಗು ಜನಿಸಿದ್ದನ್ನು ಸಹಿಸಿಕೊಳ್ಳಲಾಗದೆ ಕೇವಲ 13 ದಿನಗಳ ನವಜಾತ ಶಿಶುವನ್ನು ಸ್ವಂತ ತಂದೆಯೇ ಮನೆಯ ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿರುವ ಆರೋಪ ಚಿಕ್ಕಬಳ್ಳಾಪುರ (Chikkaballapur News) ನಗರದ ಶಾಂತಿನಗರ (ನಕ್ಕಲಕುಂಟೆ) ಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು, ಈ ಘಟನೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ಶಾಂತಿನಗರ ನಿವಾಸಿ ಇಮ್ರಾನ್ ಅವರ ಪತ್ನಿ ಮುಸ್ಕಾನ್ ಅವರು ಎರಡನೇ ಹೆಣ್ಣು ಮಗುವಿಗೆ 13 ದಿನಗಳ ಹಿಂದೆ ಜನ್ಮ ನೀಡಿದ್ದರು. ಬುಧವಾರ ತಡರಾತ್ರಿ ಮನೆಯವರು ಮಲಗಿದ್ದ ವೇಳೆ ಇಮ್ರಾನ್, ಮಗುವನ್ನು ಎತ್ತಿಕೊಂಡು ಹೋಗಿ ಮನೆಯ ನೀರಿನ ಸಂಪ್‌ಗೆ ಹಾಕಿ, ಬಳಿಕ ಏನೂ ನಡೆದಿಲ್ಲ ಎಂಬಂತೆ ಬಂದು ಮಲಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಗುರುವಾರ ಬೆಳಿಗ್ಗೆ ಮಗುವಿಗೆ ಹಾಲುಣಿಸಲು ಎದ್ದ ತಾಯಿ, ಮಗು ಕಾಣಿಸದಿದ್ದರಿಂದ ಆತಂಕಗೊಂಡು ಕೂಗಾಡಿದ್ದಾರೆ. ಕುಟುಂಬದವರು ಹುಡುಕಾಟ ನಡೆಸಿದ ವೇಳೆ, "ಸಂಪ್‌ನಲ್ಲಿ ನೋಡಿ" ಎಂದು ತಂದೆಯೇ ಹೇಳಿದ್ದಾನೆ ಎಂದು ಮೃತ ಮಗುವಿನ ತಾತ ಆರೋಪಿಸಿದ್ದಾರೆ.

ತಕ್ಷಣ ಮಗುವನ್ನು ಹೊರತೆಗೆದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು. ಜಿಲ್ಲಾಸ್ಪತ್ರೆಯಿಂದ ಗುರುವಾರ ಬೆಳಗಿನ ಜಾವ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಹೇಳಲಾಗಿದ್ದರೂ, 13 ದಿನಗಳ ನವಜಾತ ಶಿಶು ಸ್ವತಃ ನಡೆದು ಹೋಗಿ ಸಂಪ್‌ಗೆ ಬೀಳಲು ಸಾಧ್ಯವಿಲ್ಲ ಎಂಬ ಅನುಮಾನದಿಂದ ಪೊಲೀಸರು ತನಿಖೆ ಆರಂಭಿಸಿದರು. ಕುಟುಂಬದ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ, ಮಗುವಿನ ತಂದೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಯಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮತ್ತೊಮ್ಮೆ ಹೆಣ್ಣು ಮಗು ಜನಿಸಿದ್ದೇ ಕೃತ್ಯಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ; ಮಕ್ಕಳಿಗೆ ಭಾರವಾಗಬಾರದೆಂದು ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ!

ಎಸ್‌ಪಿ ಹೇಳಿದ್ದೇನು?

ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಪ್ರತಿಕ್ರಿಯಿಸಿ, "ಜಿಲ್ಲಾಸ್ಪತ್ರೆಯಿಂದ 13 ದಿನಗಳ ಮಗುವಿನ ಸಾವಿನ ಕುರಿತು ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಹೇಳಲಾಗಿತ್ತು. ಆದರೆ 13 ದಿನಗಳ ಮಗು ಸ್ವತಃ ಸಂಪ್‌ಗೆ ಹೋಗಿ ಬೀಳುವುದು ಅಸಾಧ್ಯ ಎಂಬ ಕಾರಣಕ್ಕೆ ಕುಟುಂಬದವರನ್ನು ವಿಚಾರಣೆ ನಡೆಸಿದಾಗ, ಮಗುವಿನ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ತಾಯಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಕೃತ್ಯ ಎಸಗಿರುವ ಸಾಧ್ಯತೆ ಕಂಡುಬಂದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ."