Chikkaballapur News: ಗೌರಿಬಿದನೂರು ನಗರಕ್ಕೆ ಕುಡಿಯುವ ನೀರು ಪೂರೈಸುವ 66 ಕೋಟಿ ರೂ ಯೋಜನೆಯ ಕಾಮಗಾರಿಗೆ ಭೂಮಿಪೂಜೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮೃತ್ 2 ಯೋಜನೆಯಡಿ 313 ಕೋಟಿ ರೂಪಾಯಿಗಳ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ,ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣಗಳ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ ಯಾಗಲಿದೆ. ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು ಬವಣೆಯ ಬಗ್ಗೆ ಅರಿವಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಮೊದಲ ಆದ್ಯತೆಯನ್ನಾಗಿ ರಾಜ್ಯ ಸರ್ಕಾರ ಪರಿಗಣಿಸಿದೆ.


ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ ಪಾಲುದಾರಿಕೆಯಲ್ಲಿ ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ ಹದಿನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಖಾತೆ ಸಚಿವ ಬಿ.ಎಸ್.ಸುರೇಶ್ ಅವರು ತಿಳಿಸಿದರು.
ಅವರು ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗೊಟಕನಾಪುರದಲ್ಲಿ ಅಮೃತ್ 2 ಯೋಜನೆಯಡಿ ವಾಟದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ಕುಡಿಯುವ ನೀರು ಪೂರೈಸುವ 66 ಕೋಟಿ ರೂಪಾಯಿಗಳ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಗಳಿಗೆ 14,000 ಕೋಟಿಖರ್ಚು ಮಾಡಲಾಗಿದೆ.
ಇದನ್ನೂ ಓದಿ: Chintamani News: 26 ವರ್ಷದಿಂದ ಜಮೀನಿಗಾಗಿ ಹೋರಾಟ; ಕಾರ್ಗಿಲ್ ವಿಜಯ ದಿವಸದಂದು ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮೃತ್ 2 ಯೋಜನೆಯಡಿ 313 ಕೋಟಿ ರೂಪಾಯಿಗಳ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ,ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣಗಳ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ ಯಾಗಲಿದೆ. ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು ಬವಣೆಯ ಬಗ್ಗೆ ಅರಿವಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಮೊದಲ ಆದ್ಯತೆಯನ್ನಾಗಿ ರಾಜ್ಯ ಸರ್ಕಾರ ಪರಿಗಣಿಸಿದೆ.
ವಾಟದಹೊಸಹಳ್ಳಿ ಕೆರೆಯಿಂದ ನೀರನ್ನು ಗೌರಿಬಿದನೂರು ನಗರಕ್ಕೆ ಕುಡಿಯುವ ಉದ್ದೇಶದಿಂದ ತೆಗೆದುಕೊಂಡು ಹೋಗಲಾಗುತ್ತಿದ್ದು, ಇದರಿಂದ ಗೌರಿಬಿದನೂರು ನಗರಕ್ಕೆ ಮಾತ್ರವಲ್ಲದೆ ಮಾರ್ಗ ಮಧ್ಯದ 08 ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ವಾಟದಹೊಸಹಳ್ಳಿ ಕೆರೆಯ ಶೇ.40 ರಷ್ಟು ನೀರನ್ನು ಮಾತ್ರ ಉದ್ಧೇಶಿತ ಯೋಜನೆಗೆ ಬಳಸಿಕೊಳ್ಳಲಾಗುವುದು. ಉಳಿದ ಶೇ.60 ರಷ್ಟು ನೀರು ಈ ಮೊದಲಿನಂತೆ ನೆರೆಹೊರೆಯ ಗ್ರಾಮಗಳ ಕೃಷಿ ಮತ್ತಿತರ ಉದ್ಧೇಶಗಳಿಗೆ ಬಳಕೆ ಯಾಗಲಿದೆ.
ಗೌರಿಬಿದನೂರು ನಗರಕ್ಕೆ ನೀರು ತೆಗೆದುಕೊಂಡು ಹೋದರೆ ಕೆರೆಯ ನೀರು ಖಾಲಿಯಾಗುತ್ತದೆ, ತೊಂದರೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಈ ತಪ್ಪು ಕಲ್ಪನೆಯಿಂದ ಈ ಭಾಗದ ಜನತೆ ಹೊರಬಂದು ಈ ವಿಷಯವನ್ನು ಕುಡಿಯುವ ನೀರಿನ ಸಮಸ್ಯೆ ಮತ್ತು ಆದ್ಯತೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಉದ್ದೇಶಿತ ಯೋಜನೆಯಿಂದ 83000 ಜನರ ಕುಡಿಯುವ ನೀರಿಗೆ ಸಹಾಯವಾಗಲಿದೆ.
ಇದೇ ವಾಟದಹೊಸಹಳ್ಳಿ ಕೆರೆಗೆ ಎತ್ತಿನಹೊಳೆ ಯೋಜನೆಯ ನೀರನ್ನೂ ಹರಿಸಲಾಗುವುದು. ಹೀಗಾಗಿ ಕೆರೆಯಲ್ಲಿ ನೀರಿಗೆ ಯಾವುದೇ ಸಮಸ್ಯೆ ಮತ್ತು ಕೊರತೆ ಆಗುವುದಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ.
ಕುಡಿಯುವ ನೀರಿನ ಯೋಜನೆಗೆ ಯಾರೂ ತಕರಾರು ತೆಗೆಯಬಾರದು ಮತ್ತು ಅಡ್ಡಿಪಡಿಸಬಾರದು. ರೈತರನ್ನು ಕಷ್ಟಕ್ಕೆ ದೂಡಿ ನೀರನ್ನು ತೆಗೆದುಕೊಂಡು ಹೋಗುವುದಿಲ್ಲ. ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಬೇಡ. ಎತ್ತಿನಹೊಳೆ ಯೋಜನೆಯ ನೀರಿನ ಸಂಪರ್ಕ ವಾಟದ ಹೊಸ ಹಳ್ಳಿ ದೊರೆಯುವುದು ಖಚಿತ.
ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿಯಾಗಿ 3000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾತನಾಡಿ, ಇತ್ತೀಚಿಗೆ ನಗರೀಕರಣ ಹೆಚ್ಚಾಗುತ್ತಿದ್ದು, ನಗರಗಳು ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಮೂಲಭೂತ ಸೌಕರ್ಯದಡಿ ಕುಡಿಯುವ ನೀರನ್ನು ಆದ್ಯತೆಯ ಮೇಲೆ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ. ಎತ್ತಿನಹೊಳೆ ಯೋಜನೆ ನೀರು ಇನ್ನು ಎರಡು ವರ್ಷ ಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ದೊರೆಯಲಿದೆ.
ಯೋಜನೆಗೆ ಅಗತ್ಯವಿರುವ 3000 ಕೋಟಿ ರೂಪಾಯಿಗಳನ್ನೂ ನೀಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಕುಡಿಯುವ ನೀರಿಗೆ ಮೊದಲು ಒತ್ತು ಕೊಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅರಣ್ಯ ಇಲಾಖೆ ಒಪ್ಪಿಗೆ ಮತ್ತು ಭೂಸ್ವಾಧೀನ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ನೀಡಿದ ನಂತರ ಉಳಿದ ಯೋಜನೆಗಳು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದು, ಎತ್ತಿನಹೊಳೆ ಕಾಮಗಾರಿ ಯನ್ನು ತ್ವರಿತವಾಗಿ ಪೂರೈಸಲು ಒತ್ತು ನೀಡಲಾಗುತ್ತಿದೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಕೇಂದ್ರ ಸರ್ಕಾರದ ಅಮೃತ್ ಯೋಜನೆ ನಗರ ಪ್ರದೇಶಗಳ ನೀರಿನ ವಿಚಾರದಲ್ಲಿ ವರದಾನವಾಗಿದೆ. ವಾಟದಹೊಸಹಳ್ಳಿ ಕೆರೆಯ ಕುಡಿಯುವ ನೀರಿನ ಯೋಜನೆ ಆಡಳಿತಾತ್ಮಕ ಅನುಮೋದನೆ ಸೇರಿ ಎಲ್ಲಾ ಅನುಮೋದನೆ ಗಳೂ ಆಗಿರುವುದರಿಂದ ಶಂಕುಸ್ಥಾಪನೆಯಾದ ಮೇಲೆ ಕಾಮಗಾರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಈ ಕೆರೆಗೆ ಎತ್ತಿನಹೊಳೆ ನೀರನ್ನು ಹರಿಸುವವರೆಗೂ ಗೌರಿಬಿದನೂರು ನಗರಕ್ಕೆ ಒಂದು ಹನಿ ನೀರು ತೆಗೆಯುವುದಿಲ್ಲ ಎಂದು ಸ್ಥಳೀಯ ಶಾಸಕರು ಸ್ಪಷ್ಟವಾಗಿ ಹೇಳಿರುವುದು ಸ್ವಾಗತಾರ್ಹ. ಈ ಭಾಗದ ಜನತೆ ಅವರ ಮೇಲೆ ನಂಬಿಕೆ ಇಟ್ಟು ಕುಡಿಯುವ ನೀರಿನ ಯೋಜನೆಗೆ ಸಹಕರಿಸಬೇಕು
ಅಮೃತ್ ಯೋಜನೆಗೆ ಕೇಂದ್ರ ಸರ್ಕಾರ ಶೇ.50 ಅನುದಾನ ನೀಡುತ್ತಿದ್ದು, ರಾಜ್ಯ ಸರ್ಕಾರದ ಶೇ.40 ಮತ್ತು ಯೋಜನೆಯ ಫಲಾನುಭವಿ ನಗರ ಸ್ಥಳೀಯ ಸಂಸ್ಥೆ ಶೇ.10 ಪಾಲನ್ನು ಭರಿಸಲಿದೆ. ಜಿಲ್ಲೆಯಲ್ಲಿ ಹಲವು ನಗರಗಳಲ್ಲಿ ಯುಜಿಡಿ ಸಮಸ್ಯೆ ಇದ್ದು, ಇದನ್ನು ನಗರಾಭಿವೃದ್ಧಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು. ಈ ಹಿನ್ನೆಲೆ ಯಲ್ಲಿ ಸಂಸದರಾಗಿ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಮಾತನಾಡಿ ಸಹಕರಿಸಲು ಬದ್ಧ ವಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ,ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ವೈ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ನಗರಸಭಾ ಉಪಾಧ್ಯಕ್ಷ ಲಕ್ಷೀನಾರಾಯಣ, ಪೌರಾಯುಕ್ತ ಕೆ ಜಿ ರಮೇಶ್ ,ಮುಖ್ಯ ಅಭಿಯಂತರ ಪ್ರವೀಣ್ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್ ಲತಾ, ನಗರಸಭಾ ಸದ್ಯಸರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು