Minister Byrati Suresh: ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಬೈರತಿ ಸುರೇಶ್
ವಾಟದ ಹೊಸಹಳ್ಳಿ ಕೆರೆಯ ಭಾಗದ ರೈತರಿಗೆ ಒಂದು ತಪ್ಪು ಕಲ್ಪನೆಯನ್ನು ಬಿತ್ತಲಾಗಿದೆ, ಈ ಯೋಜನೆ ಯಡಿ ನಾವುಗಳು ಕೆರೆಯಲ್ಲಿನ ಶೇಕಡಾ 40℅ ನೀರನ್ನು ಮಾತ್ರ ತೆಗೆಯುತ್ತೇವೆ, ಮತ್ತು ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು,ಕೆರೆ ಕಟ್ಟೆಯನ್ನು ಭದ್ರ ಪಡಿಸಿ, ನಗರ ಸೇರಿದಂತೆ ಒಟ್ಟು ಎಂಟು ಹಳ್ಳಿಗಳ ವ್ಯಾಪ್ತಿಯ ಸುಮಾರು 83 ಸಾವಿರ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತೇವೆ


ಗೌರಿಬಿದನೂರು: ಕುಡಿಯುವ ನೀರು ಪ್ರತಿಯೊಬ್ಬರಿಗೂ ಅವಶ್ಯವಾಗಿ ಬೇಕಾಗಿರುವುದರಿಂದ, ಕುಡಿಯುವ ನೀರಿನ ವಿಚಾರದಲ್ಲಿ ರಾಜೀ ಆಗುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.
ಅವರು ನಗರದ ಬೈಪಾಸ್ ಸಮೀಪ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆ ಯಡಿಯಲ್ಲಿ,ತಾಲೂಕಿನ ವಾಟದ ಹೊಸಹಳ್ಳಿ ಕೆರೆಯ ಮೂಲದಿಂದ ನಗರಕ್ಕೆ ಸುಮಾರು 66.60 ಕೋಟಿ ರೂಪಾಯಿಗಳ ವೆಚ್ಚದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.
ವಾಟದ ಹೊಸಹಳ್ಳಿ ಕೆರೆಯ ಭಾಗದ ರೈತರಿಗೆ ಒಂದು ತಪ್ಪು ಕಲ್ಪನೆಯನ್ನು ಬಿತ್ತಲಾಗಿದೆ,ಈ ಯೋಜನೆಯಡಿ ನಾವುಗಳು ಕೆರೆಯಲ್ಲಿನ ಶೇಕಡಾ 40℅ ನೀರನ್ನು ಮಾತ್ರ ತೆಗೆಯುತ್ತೇವೆ,ಮತ್ತು ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು,ಕೆರೆ ಕಟ್ಟೆಯನ್ನು ಭದ್ರ ಪಡಿಸಿ, ನಗರ ಸೇರಿದಂತೆ ಒಟ್ಟು ಎಂಟು ಹಳ್ಳಿಗಳ ವ್ಯಾಪ್ತಿಯ ಸುಮಾರು 83 ಸಾವಿರ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತೇವೆ ಎಂದ ಅವರು ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ: Chintamani News: 26 ವರ್ಷದಿಂದ ಜಮೀನಿಗಾಗಿ ಹೋರಾಟ; ಕಾರ್ಗಿಲ್ ವಿಜಯ ದಿವಸದಂದು ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ಮಾತನಾಡುತ್ತಾ, ವಾಟದ ಹೊಸಹಳ್ಳಿ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಯೋಜನೆಯನ್ನು ಜಾರಿಗೆ ತರಲು ಹೊರಟಾಗ ಸಾಕಷ್ಟು ಅಡ್ಡಿ ಆತಂಕಗಳನ್ನು ನಾನು ಎದುರಿಸಬೇಕಾಯಿತು,ವಾಟದ ಹೊಸಹಳ್ಳಿ ಭಾಗದ ಜನರಿಗೆ ಯೋಜನೆಯ ಕುರಿತು ತಿಳುವಳಿಕೆ ಮೂಡಿಸುವ ದೃಷ್ಟಿಯಿಂದ ವಾಟದ ಹೊಸಹಳ್ಳಿ ಗ್ರಾಮದಲ್ಲಿ ರೈತರ ಸಭೆಯನ್ನು ಸೇರಿಸಿ ಚರ್ಚಿಸಲು ಪ್ರಯತ್ನಿಸಿದೆ. ಆದರೆ ಕೆಲವರ ಚಿತಾವಣೆಯಿಂದ ಸಭೆ ಗೊಂದಲಗೂಡಾಯಿತು.ಇದರ ನಂತರವೂ ನಾನು ಮಾಧ್ಯಮಗಳ ಮೂಲಕ ರೈತರಿಗೆ ಯೋಜನೆಯ ಕುರಿತು ತಿಳಿಸಿದ್ದೇನೆ.
ವಾಟದ ಹೊಸಹಳ್ಳಿ ಕೆರೆಗೆ ಏತ್ತಿನಹೊಳೆ ನೀರು ಬಂದ ನಂತರವೆ ಕೆರೆಯಿಂದ ನೀರನ್ನು ತೆಗೆಯುತ್ತೇವೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ಕೆರೆಯಿಂದ ತೆಗೆದುಕೊಂಡು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಈಗಲೂ ಕೂಡ ಮತ್ತೊಮ್ಮೆ ಪುನರುಚಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ.ಸುಧಾಕರ್ ಮಾತನಾಡುತ್ತಾ ವಾಟದ ಹೊಸಹಳ್ಳಿ ರೈತರು ನೀಡಿರುವ ಬೇಡಿಕೆಗಳನ್ನು ಕಂಡಿತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ಅವರು ಜನರ ಒಳಿತಿಗಾಗಿ ಜಾರಿಗೆ ತಂದಿರು ಯೋಜನೆಗೆ ಅಡ್ಡಿಪಡಿಸಬಾರದು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸದ ಡಾ ಕೆ ಸುಧಾಕರ್, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ಜಿಲ್ಲಾಧಿಕಾರಿ ಪಿಎನ್ ರವೀಂದ್ರ,ಜಿ.ಪಂ ಕಾರ್ಯನಿರ್ವಾಹಣಾಧಿಕಾರಿ ಡಾ ನವೀನ್ ಬಟ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಮುಖ್ಯ ಅಭಿಯಂತರ ಪ್ರವೀಣ್ ಲಿಂಗಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಮಂಜುನಾಥ್, ಕಾರ್ಯಪಾಲ ಅಭಿಯಂತರ ಚಂದ್ರಶೇಖರ್ ತಹಸೀಲ್ದಾರ್ ಅರವಿಂದ್, ನಗರಸಭೆ ಪೌರಾಯುಕ್ತ ರಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.