Gudibande News: ಪ್ಲಾಸ್ಟಿಕ್ ಮುಕ್ತ, ಹಸಿರು ಯುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಉಪ ಕಾರ್ಯದರ್ಶಿ ಅತೀಕ್ ಪಾಷ
ಸ್ವಚ್ಛತಾ ಹೀ ಸೇವಾ" ಎಂಬುದು ಸೆಪ್ಟೆಂಬರ್ ೧೫ ರಿಂದ ಅಕ್ಟೋಬರ್ ೨ ರವರೆಗೆ ನಡೆಯುವ ಸ್ವಚ್ಛತಾ ಅಭಿಯಾನವಾಗಿದ್ದು, ಇದು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡುತ್ತದೆ. ಈ ಅಭಿಯಾನವು ಸ್ವಚ್ಛ ಭಾರತ್ ಮಿಷನ್‌ನ ಒಂದು ಭಾಗವಾಗಿದ್ದು, ಸಮುದಾಯದ ಸಹಭಾಗಿತ್ವದ ಮೂಲಕ ಸ್ವಚ್ಛ ಭಾರತ ನಿರ್ಮಾಣದ ಗುರಿಯನ್ನು ಹೊಂದಿದೆ

-

ಗುಡಿಬಂಡೆ: ತಾಲ್ಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ್ತೂರಿ ಬಾ ಶಾಲೆಯ ಸುತ್ತ ಮುತ್ತ ಹಾಗೂ ಬೀಚಗಾನಹಳ್ಳಿ ಕ್ರಾಸ್ ನ ಸುತ್ತಲೂ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷ ರವರ ಅಧ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನಾಗಮಣಿ.ಎಂ ಉಪಸ್ಥಿತಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷ ರವರು ಸ್ವಚ್ಛತಾ ಹಿ ಸೇವಾ ( Cleanliness and service) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ, ಪ್ಲಾಸ್ಟಿಕ್ ಮುಕ್ತ, ಹಸಿರು ಯುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ತಿಳಿಸಿದರು.
ಸ್ವಚ್ಛತಾ ಹೀ ಸೇವಾ" ಎಂಬುದು ಸೆಪ್ಟೆಂಬರ್ ೧೫ ರಿಂದ ಅಕ್ಟೋಬರ್ ೨ ರವರೆಗೆ ನಡೆಯುವ ಸ್ವಚ್ಛತಾ ಅಭಿಯಾನವಾಗಿದ್ದು, ಇದು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡುತ್ತದೆ. ಈ ಅಭಿಯಾನವು ಸ್ವಚ್ಛ ಭಾರತ್ ಮಿಷನ್‌ನ ಒಂದು ಭಾಗವಾಗಿದ್ದು, ಸಮುದಾಯದ ಸಹಭಾಗಿತ್ವದ ಮೂಲಕ ಸ್ವಚ್ಛ ಭಾರತ ನಿರ್ಮಾಣದ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಇದನ್ನೂ ಓದಿ: Gudibande News: ಗುಡಿಬಂಡೆಯ ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್, ಶೀಘ್ರ ಅಗಲೀಕರಣ ಕಾರ್ಯ
ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾಗಮಣಿ ಮಾತನಾಡಿ, ಪರಿಸರ ರಕ್ಷಣೆ ಮತ್ತು ಸಾಮಾಜಿಕ ಸೇವೆಗಳ ಮೂಲಕ ಸಮುದಾಯವನ್ನು ಅಭಿವೃದ್ಧಿಪಡಿಸುವ ಒಂದು ಮಹತ್ವದ ಕಾರ್ಯಕ್ರಮ ವಾಗಿದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಸಾರ್ವಜನಿಕರು ಗೃಹ ಆಧಾರಿತ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಮೂಲದಲ್ಲೇ ವಿಂಗಡಿಸಿ ಕಸ ಸಂಗ್ರಹಣೆ ವಾಹನಗಳಿಗೆ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುರಿಯಬಾರದು. ತ್ಯಾಜ್ಯ ಪುನರ್ಬಳಕೆ, ಮರುಬಳಕೆ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕಸ ಹಾಗೂ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡಿದರೆ ದಂಡ ವಿಧಿಸಲಾಗುತ್ತದೆ. ತಾಲ್ಲೂಕಿನ ೮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದು, ಒಂದು ದಿನ, ಒಂದು ಗಂಟೆ, ಎಲ್ಲರೂ ಒಟ್ಟಿಗೆ ಸೇರಿ ಶ್ರಮದಾನ ಮಾಡುವ ಮುಖಾಂತರ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳ ಲಾಗಿದೆ ಎಂದರು. ಈ ವೇಳೆ ಸ್ವಚ್ಚತಾ ಕಾರ್ಯದಲ್ಲಿ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ರಾಮಾಂಜನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವ್ಯವಸ್ಥಾಪಕ ಶ್ರೀನಿವಾಸ್ ರವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ, ನರಸಿಂಹ ಮೂರ್ತಿ, ಎ.ಆರ್. ಶ್ರೀನಿವಾಸ್, ಸತ್ಯ ಪ್ರಸಾದ್ ರವರು ಸೇರಿದಂತೆ ನರೇಗಾ ಸಿಬ್ಬಂದಿ, ಓಖಐಒ ಹಾಗೂ ಸ್ವ-ಸಹಾಯ ಸಂಘದವರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.