ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sri Madhusudan Sai: ಸೇವಾಸಂಸ್ಥೆಗಳಿಗೆ ಸಿಗುವ ದೇಣಿಗೆಗಳಿಗೆ ತೆರಿಗೆ ವಿನಾಯ್ತಿ ಇರಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: ಭಾರತದಲ್ಲಿ ದಾನ, ದತ್ತಿ, ದೇಣಿಗೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರಿಯಾದ ನೀತಿ ರೂಪಿಸಬೇಕಾದ ಅಗತ್ಯವಿದೆ. ಅಮೆರಿಕದಲ್ಲಿ ಪ್ರತಿಷ್ಠಾನಗಳಿಗೆ (ಫೌಂಡೇಶನ್) ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. ಆಸ್ಟ್ರೇಲಿಯಾದಂಥ ದೇಶಗಳಲ್ಲಿ ದತ್ತಿ ಸಂಸ್ಥೆಗಳು ಹೂಡಿಕೆ ಮಾಡಲು ಅವಕಾಶವಿದೆ. ನಮ್ಮಲ್ಲಿಯೂ ಸೇವಾಸಂಸ್ಥೆಗಳಿಗೆ ಇಂಥ ಸೌಲಭ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದಿಸಿದ್ದಾರೆ.

ಸೇವಾಸಂಸ್ಥೆಗಳಿಗೆ ಸಿಗುವ ದೇಣಿಗೆಗಳಿಗೆ ತೆರಿಗೆ ವಿನಾಯ್ತಿ ಇರಬೇಕು

-

Profile Siddalinga Swamy Oct 15, 2025 8:23 PM

ಚಿಕ್ಕಬಳ್ಳಾಪುರ: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ಸಿಗುವ ವಿಚಾರದಲ್ಲಿ ಸ್ಪಷ್ಟ ನೀತಿಗಳು ರೂಪುಗೊಳ್ಳಬೇಕಿದೆ. ಬ್ರಿಟನ್‌ನಲ್ಲಿ ದೇಣಿಗೆ ಕೊಡುವ ಹಣಕ್ಕೆ ತೆರಿಗೆ ರಿಯಾಯ್ತಿ ಸಿಗುವುದಷ್ಟೇ ಅಲ್ಲ, ಅದರ ದುಪ್ಪಟ್ಟು ಮೊತ್ತದಷ್ಟು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ' ದ 61ನೇ ದಿನವಾದ ಬುಧವಾರ ಆಶೀರ್ವಚನ ನೀಡಿದ ಸದ್ಗುರು ಅವರು, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರೊಂದಿಗೆ ನಡೆದ ಮಾತುಕತೆಯನ್ನು ನೆನಪಿಸಿಕೊಂಡರು.

ಭಾರತದಲ್ಲಿ ದಾನ, ದತ್ತಿ, ದೇಣಿಗೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರಿಯಾದ ನೀತಿ ರೂಪಿಸಬೇಕಾದ ಅಗತ್ಯವಿದೆ. ಅಮೆರಿಕದಲ್ಲಿ ಪ್ರತಿಷ್ಠಾನಗಳಿಗೆ (ಫೌಂಡೇಶನ್) ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. ಆಸ್ಟ್ರೇಲಿಯಾದಂಥ ದೇಶಗಳಲ್ಲಿ ದತ್ತಿ ಸಂಸ್ಥೆಗಳು ಹೂಡಿಕೆ ಮಾಡಲು ಅವಕಾಶವಿದೆ. ನಮ್ಮಲ್ಲಿಯೂ ಸೇವಾಸಂಸ್ಥೆಗಳಿಗೆ ಇಂಥ ಸೌಲಭ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ನಾವು ಹೆಚ್ಚಿನ ಮೊತ್ತವನ್ನು ಕಾಯ್ದಿರಿಸಿಕೊಳ್ಳುವಂತೆಯೂ ಇಲ್ಲ. ಷೇರುಪೇಟೆ ಅಥವಾ ಬಾಂಡ್‌, ಆಸ್ತಿಗಳಲ್ಲಿ ಹಣ ತೊಡಗಿಸುವಂತಿಲ್ಲ. ಯಾರಾದರೂ ಅಂಥ ಹೂಡಿಕೆಗಳನ್ನು ನಮಗೆ ದಾನ ಮಾಡಿದರೂ ಒಂದು ವರ್ಷದ ಒಳಗೆ ಅದನ್ನು ಮಾರಬೇಕು. ಇಲ್ಲದಿದ್ದರೆ ಅದರ ಮೇಲೆ ನಿಮಗೆ ತೆರಿಗೆ ಹಾಕುತ್ತಾರೆ. ಎಫ್‌ಡಿಯಲ್ಲಿ ಹಣ ತೊಡಗಿಸಲು ಅವಕಾಶವಿದೆ. ದೊಡ್ಡಮೊತ್ತದ ಎಫ್‌ಡಿಗೆ ಶೇ.3 ರಿಂದ 4 ಬಡ್ಡಿ ಸಿಗುತ್ತದೆ. ಆದರೆ ಆರೋಗ್ಯ ಸೇವೆಗಳ ವೆಚ್ಚವು ವರ್ಷಕ್ಕೆ ಶೇ.20 ರಷ್ಟು ಹೆಚ್ಚಾಗುತ್ತಿದೆ. ನಾವು ಈವರೆಗೆ 250 ಕೋಟಿ ರೂಪಾಯಿಗೂ ಹೆಚ್ಚು ಜಿಎಸ್‌ಟಿ ಕಟ್ಟಿದ್ದೇವೆ. ಇವೆಲ್ಲವೂ ನಮ್ಮ ಮೇಲೆ ಹೆಚ್ಚಿನ ಹೊರೆ ಆಗುತ್ತದೆ ಎಂದು ವಿವರಿಸಿದರು.

ಭಾರತವು ಜಗತ್ತಿನ ಆತ್ಮವಾಗಿದೆ. ಆತ್ಮವಿಲ್ಲದ ದೇಹವು ಏನು ಮಾಡಲಾರದು. ಭಾರತವು ಬಲಿಷ್ಠವಾಗಿರುವುದು ವಿಶ್ವದ ಕಲ್ಯಾಣಕ್ಕೆ ಎಂಬುದು ಅತ್ಯಂತ ಮುಖ್ಯ ವಿಚಾರ. ಭಾರತದ ಆಧ್ಯಾತ್ಮಿಕ ಸಂಸ್ಕೃತಿಯು ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಏಕೈಕ ಪರಿಹಾರವಾಗಿದೆ. ಅದಕ್ಕಾಗಿಯೇ ನಾವು ಶ್ರಮಿಸುತ್ತಿದ್ದೇವೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯಲು ಆಕ್ಸಿಜನ್ ಬಿಲ್ ದಿನಕ್ಕೆ 3 ಸಾವಿರ ರೂಪಾಯಿ ಆಗುತ್ತದೆ. ಆದರೆ ಸತ್ಯ ಸಾಯಿ ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಎಲ್ಲವೂ ಸಂಪೂರ್ಣ ಉಚಿತವಾಗಿವೆ. ನೀವು ಇತರರಿಗೆ ಸಹಾಯ ಮಾಡಿದರೆ ಅದು ನೀವು ದೇವರಿಗೆ ಸಲ್ಲಿಸುವ ತೆರಿಗೆಯಾಗಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಮ್ಮ ಸೇವೆಗಳ ಮೂಲಕ ಸರ್ವಶಕ್ತ ದೇವರಿಗೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಶೀಘ್ರ ಹೆಲ್ತ್ ಡೇಟಾ ಕಮಾಂಡ್ ಸೆಂಟರ್‌, ಕ್ಯಾಥ್‌ ಲ್ಯಾಬ್ ಆರಂಭ: ಶ್ರೀ ಮಧುಸೂದನ ಸಾಯಿ ಘೋಷಣೆ

ಅನ್ನಪೂರ್ಣ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ 'ಯುನಿವರ್ಸಲ್ ಸೊಂಪೊ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್' ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಕ್ಲಸ್ಟರ್ ಸೇಲ್ಸ್ ಮ್ಯಾನೇಜರ್ ಪ್ರೇಮ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ವೆನೆಜುವೆಲಾ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಅನ್ನೆಲ್ಲಿ ಅಕೋಸ್ಟಾ (Annely Acosta) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ' ಪುರಸ್ಕಾರ ಘೋಷಣೆ ಮಾಡಲಾಯಿತು. ಅಕೋಸ್ಟಾ ಅನುಪಸ್ಥಿತಿಯಲ್ಲಿ ಅವರ ಪುತ್ರಿ ಧಾರಿಯಾಣಿ ಗೊಂಜಾಲಿಸ್ ಪ್ರಶಸ್ತಿ ಸ್ವೀಕರಿಸಿದರು. ವೆನೆಜುವೆಲಾದ ಪ್ರತಿನಿಧಿಗಳಾದ ಬೆಲ್ಕಿಸ್ ಕ್ವಾರ್ಟಿನ್ (Belkis Cuartin), ಗಾರ್ಡಿಮರ್ ಹೆರ್ನಾಂಡೆಜ್ (Gardimar hernandez) ತಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಪರಿವರ್ತನೆಯ ಬಗ್ಗೆ ಮಾಹಿತಿ ಹಂಚಿಕೊಂಡರು.