Sameer M D: ವಿಚಾರಣೆಗಾಗಿ ಧರ್ಮಸ್ಥಳಕ್ಕೆ ಬರಲು ಸಾಧ್ಯವಿಲ್ಲ; ಪೊಲೀಸರಿಗೆ ಸಮೀರ್ ಪತ್ರ, ಮತ್ತೊಂದು ದೂರು ದಾಖಲು
Dharmasthala Case: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ಸಮೀರ್‌ಗೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ ಸಮೀರ್ ವಿರುದ್ಧ ಚಿಕ್ಕಮಗಳೂರಿನ ಕಡೂರು ತಾಲೂಕಿನ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.


ಚಿಕ್ಕಮಗಳೂರು: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ(Sameer M D) ನಿರೀಕ್ಷಣಾ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಯೂಟ್ಯೂಬರ್ ಸಮೀರ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಪೊಲೀಸ್ ಠಾಣೆಯಲ್ಲಿ ಮಂಜು ಜೈನ್ ಎಂಬುವವರು ಸಮೀರ್ ಎಂ.ಡಿ. ವಿರುದ್ಧ ದೂರು ದಾಖಲಿಸಿದ್ದಾರೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆರೋಪ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ಸಮೀರ್‌ಗೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ಧರ್ಮಸ್ಥಳ ಠಾಣೆ ಪೊಲೀಸರು ನೆನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಮನೆಯಲ್ಲಿ ಸಮೀರ್ ಇರಲಿಲ್ಲ. ಬಳಿಕ ಸಮೀರ್‌ಗೆ ನಿರೀಕ್ಷಣಾ ಜಾಮೀನು ಮಂಜೂತಾಗಿತ್ತು.
ವಿಚಾರಣೆಗಾಗಿ ಧರ್ಮಸ್ಥಳಕ್ಕೆ ಬರಲು ಸಾಧ್ಯವಿಲ್ಲ; ಸಮೀರ್ ಪತ್ರ
ಬಂಧನ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್‌ಗೆ ಪತ್ರ ಬರೆದಿದ್ದಾನೆ. ನನ್ನ ಮೇಲೆ ಆಗಿರುವ ಎಫ್ಐಆರ್‌ಗೆ ಸಂಬಂಧಿಸಿ ಪತ್ರ ಬರೆಯುತ್ತಿದ್ದೇನೆ. ನಾನು ಧರ್ಮಸ್ಥಳ ಠಾಣೆಗೆ ಬರಲು ಸಿದ್ಧವಾಗಿದ್ದೆ, ಆದರೆ ನನ್ನ ಸ್ನೇಹಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗಿದೆ. ಟಾರ್ಗೆಟ್ ಮಾಡಿ ಯೂಟ್ಯೂಬ್ ಸ್ನೇಹಿತರಿಗೆ ಹಲ್ಲೆ ಮಾಡಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದೆ ಹಾಗೂ ಅಪಾಯವಿದೆ ಎಂದು ತಿಳಿದು ನಾನು ಸೆಷನ್ ನ್ಯಾಯಾಲಯದಲ್ಲಿ ಜಾಮಿನಿಗೆ ಅಪ್ಲೈ ಮಾಡಿದ್ದೇನೆ ಎಂದು ಹೇಳಿದ್ದಾನೆ.
ಒಂದು ವೇಳೆ ನಾನು ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದರೆ ನನಗೆ ರಕ್ಷಣೆ ನೀಡಿ, ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದು ಏನೆಂದರೆ ವಿಡಿಯೋ ಕಾಲ್ ಮುಖಾಂತರ ಇನ್ವೆಸ್ಟಿಗೇಷನ್‌ಗೆ ಸಹಕರಿಸುತ್ತೇನೆ. ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ತನಿಖೆಗೆ ಸಹಕರಿಸುತ್ತೇನೆ. ತನಿಖೆಗೆ ಸಹಕರಿಸಲು ವಿಳಾಸ ಹಾಗೂ ದಿನಾಂಕ ಹಾಗೂ ನನ್ನ ರಕ್ಷಣೆ ಬಗ್ಗೆ ತಿಳಿಸಿದರೆ ಬರುತ್ತೇನೆ. 15 ದಿನಗಳ ಕಾಲಾವಕಾಶದ ಒಳಗಡೆ ನಿಮ್ಮ ಮುಂದೆ ಹಾಜರಾಗುತ್ತೇನೆ ದಯವಿಟ್ಟು ನನಗೆ ರಕ್ಷಣೆ ನೀಡಿ ಎಂದು ಎಂದು ಪತ್ರದಲ್ಲಿ ತಿಳಿಸಿದ್ದಾನೆ.
ಈ ಸುದ್ದಿಯನ್ನೂ ಓದಿ | ತಿಮರೋಡಿ, ಗಿರೀಶ್, ಸಮೀರ್, ಸುಜಾತ ಭಟ್ ಮೇಲೆ ಸ್ನೇಹಮಯಿ ಕೃಷ್ಣ ದೂರು