Chikkanayakanahalli News: ಸಮಾಲೋಚನೆ ಇಲ್ಲದೆ ಪ್ರತಿಮೆಗಳಿಗೆ ಶಂಕುಸ್ಥಾಪನೆ; ತಾಲೂಕು ಆಡಳಿತದ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
Gandhi and Ambedkar Statue: ಪ್ರತಿಮೆಗಳ ಸ್ಥಾಪನೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ದಲಿತ ಸಂಘಟನೆಗಳ ಪ್ರತಿನಿಧಿಗಳು, ಗಾಂಧಿವಾದಿಗಳು ಹಾಗೂ ಸಂಬಂಧಪಟ್ಟ ಯಾವುದೇ ಪಾಲುದಾರರೊಂದಿಗೆ ತಾಲೂಕು ಆಡಳಿತ ಚರ್ಚಿಸಿಲ್ಲ. ಯಾವುದೇ ಸಮಾಲೋಚನೆ ಇಲ್ಲದೆ, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಆಡಳಿತದ ವಿರುದ್ಧ ದಲಿತ ಸಂಘಟನೆಗಳು ಕಿಡಿಕಾರಿವೆ.
-
Prabhakara R
Oct 29, 2025 8:09 PM
ಚಿಕ್ಕನಾಯಕನಹಳ್ಳಿ, ಅ.29: ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯ ಸ್ಥಳ ಮತ್ತು ವಿನ್ಯಾಸದ ಕುರಿತು ಯಾವುದೇ ಸಾರ್ವಜನಿಕ ಚರ್ಚೆ ಅಥವಾ ಸಮಾಲೋಚನೆ ನಡೆಸದೆ, ಏಕಪಕ್ಷೀಯವಾಗಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ಶಂಕುಸ್ಥಾಪನೆ ನೆರವೇರಿಸಿರುವ ತಾಲೂಕು ಆಡಳಿತದ (Chikkanayakanahalli News) ಕ್ರಮಕ್ಕೆ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಕ್ರಮವು ಪ್ರಜಾಪ್ರಭುತ್ವದ ಮೂಲಭೂತ ಮನೋಭಾವಕ್ಕೆ ಧಕ್ಕೆ ತಂದಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಯರೇಕಟ್ಟೆ ರಮೇಶ್, ತಹಸೀಲ್ದಾರ್ ಪುರಂದರ್ ಅವರು ಸಂಪೂರ್ಣವಾಗಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ ಎಂದು ದೂರಿದರು.
ಪ್ರತಿಮೆಗಳ ಸ್ಥಾಪನೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ದಲಿತ ಸಂಘಟನೆಗಳ ಪ್ರತಿನಿಧಿಗಳು, ಗಾಂಧಿವಾದಿಗಳು ಹಾಗೂ ಸಂಬಂಧಪಟ್ಟ ಯಾವುದೇ ಪಾಲುದಾರರೊಂದಿಗೆ ತಾಲೂಕು ಆಡಳಿತ ಚರ್ಚಿಸಿಲ್ಲ. ಯಾವುದೇ ಸಮಾಲೋಚನೆ ಇಲ್ಲದೆ, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ಆಪಾದಿಸಿದರು.
ಮುಂದುವರಿದು, ರಾಷ್ಟ್ರೀಯ ನಾಯಕರ ಪ್ರತಿಮೆಗಳು ಮತ್ತು ಭಾವಚಿತ್ರಗಳನ್ನು ಅಳವಡಿಸುವಂತಹ ಸೂಕ್ಷ್ಮ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳಲು ಒಂದು ಪ್ರತ್ಯೇಕ ಸಮಿತಿಯನ್ನು ರಚಿಸಬೇಕು. ಆ ಸಮಿತಿಯೊಂದಿಗೆ ಚರ್ಚಿಸಿದ ನಂತರವಷ್ಟೇ ತೀರ್ಮಾನ ಕೈಗೊಳ್ಳಬೇಕು. ಆದರೆ, ಈ ವಿಚಾರದಲ್ಲಿ ಪ್ರಜಾಪ್ರಭುತ್ವದ ವಿಧಾನಗಳನ್ನು ತಾಲೂಕು ಆಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಟೀಕಿಸಿದರು.
ಬಾಬು ಜಗಜೀವನರಾಂ ಪ್ರತಿಮೆ ಸ್ಥಾಪನೆಗೂ ಒತ್ತಾಯ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗಳೊಂದಿಗೆ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಪ್ರತಿಮೆಯನ್ನು ಸಹ ಸಮಾನ ಗೌರವದಿಂದ ಸ್ಥಾಪಿಸಬೇಕು ಎಂದು ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಒತ್ತಾಯಿಸಿದರು.
ಅಲ್ಲದೆ, ಪ್ರತಿಮೆಗಳ ವಿನ್ಯಾಸ, ಗುಣಮಟ್ಟ ಮತ್ತು ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ತಜ್ಞರು ಮತ್ತು ಎಲ್ಲಾ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ತಕ್ಷಣವೇ ರಚಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | V N Reddy: ಸರ್ಕಾರಿ ಗೌರವಗಳೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ಅಂತ್ಯಸಂಸ್ಕಾರ
ಸಭೆಯಲ್ಲಿ ಛಲವಾದಿ ಮಹಾಸಭಾದ ಆನಂದ್, ವಸಂತಕುಮಾರ್, ನಾಗರಾಜ್, ದಲಿತ ಸಂಘರ್ಷ ಸಮಿತಿಯ ಲಿಂಗದೇವರು, ರುದ್ರೇಶ್ ಸೇರಿದಂತೆ ಇತರ ಹಲವು ದಲಿತಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ತಾಲೂಕು ಆಡಳಿತದ ವಿರುದ್ಧ ಧ್ವನಿ ಎತ್ತಿದರು.