ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Floods: ಪ್ರವಾಹದಿಂದ ಬೆಳೆ ಹಾನಿ; NDRF ಹಣದ ಜತೆಗೆ ಪ್ರತೀ ಹೆಕ್ಟೇರ್‌ಗೆ ಹೆಚ್ಚುವರಿ 8500 ರೂ. ಪರಿಹಾರ ಘೋಷಿಸಿದ ಸಿಎಂ

Crop damage: ಪ್ರವಾಹದಿಂದ ಬೆಳೆ ಜೊತೆಗೆ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ವೈಮಾನಿಕ ಸಮೀಕ್ಷೆ ಬಳಿಕ ಶಾಸಕರು, ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿ ನಾಲ್ಕು ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳೆ ಹಾನಿ; NDRF ಪರಿಹಾರದ ಜತೆಗೆ ಹೆಚ್ಚುವರಿ  ಪ್ಯಾಕೇಜ್  ಘೋಷಿಸಿದ ಸಿಎಂ

-

Prabhakara R Prabhakara R Sep 30, 2025 8:57 PM

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತ (Karnataka Floods) ಪ್ರದೇಶಗಳ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಎನ್‌ಡಿಆರ್‌ಎಫ್‌ ಪರಿಹಾರದ ಜತೆಗೆ ಹೆಚ್ಚುವರಿ ಪ್ಯಾಕೇಜ್ ಅನ್ನು ಸಿಎಂ ಸಿದ್ದರಾಮಯ್ಯ ಬುಧವಾರ ಘೋಷಿಸಿದ್ದಾರೆ. ವೈಮಾನಿಕ ಸಮೀಕ್ಷೆ ಮತ್ತು ಅಧಿಕಾರಿಗಳ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಮಾತನಾಡಿ, NDRF ಹಣದ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್‌ಗೆ 8500 ರೂ. ಪರಿಹಾರ ಕೊಡಲಿದೆ. ಎನ್‌ಡಿಆರ್‌ಎಫ್‌ ಮತ್ತು ರಾಜ್ಯ ಸರ್ಕಾರದ ಪ್ಯಾಕೇಜ್ ಸೇರಿ 2000 ರಿಂದ 2500 ಕ್ಕೂ ಹೆಚ್ಚು ಕೋಟಿ ಹಣ ಪರಿಹಾರ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ 8500 ರೂ, ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 17 ಸಾವಿರ, ಬಹು ವಾರ್ಷಿಕ ಬೆಳೆಗೆ 22,500 ರೂ. ಪರಿಹಾರ ಇದೆ. ಈ ಹಣವನ್ನು ಸಮೀಕ್ಷೆ ಮುಗಿದ ತಕ್ಷಣ ಬಿಡುಗಡೆ ಮಾಡಲಾಗುತ್ತದೆ.

ಎನ್‌ಡಿಆರ್‌ಎಫ್‌ ಹಣದ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8500 ರೂ ಪರಿಹಾರ ಕೊಡಲಿದೆ. ಇದರಿಂದಾಗಿ ಕುಷ್ಕಿ ಜಮೀನಿಗೆ ಹೆಕ್ಟೇರ್‌ಗೆ 8500 ರೂ+8500 ರೂ. ಸೇರಿ ಒಟ್ಟು 17000 ಆಗುತ್ತದೆ. ನೀರಾವರಿ ಜಮೀನಿಗೆ 17000+8500 ಸೇರಿ ಒಟ್ಟು 25500 ರೂ. ಆಗಲಿದೆ. ಬಹುವಾರ್ಷಿಕ ಬೆಳೆಗೆ ಹೆಕ್ಟೇರ್‌ಗೆ 22,500+ 8500 ಸೇರಿ ಒಟ್ಟು 31,000 ಸಾವಿರ ರೂಪಾಯಿ ಆಗುತ್ತದೆ. ಇದರಿಂದ 2000ರಿಂದ 2500ಕ್ಕೂ ಹೆಚ್ಚು ಕೋಟಿ ಹಣ ಪರಿಹಾರ ಕೊಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನೂ ಓದಿ | North Karnataka Floods: ಕಲಬುರಗಿ ಸೇರಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ



80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ

ಪ್ರವಾಹದಿಂದ ಬೆಳೆ ಜೊತೆಗೆ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿ ಆಗಿರುವುದರಿಂದ ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ವೈಮಾನಿಕ ಸಮೀಕ್ಷೆ ಬಳಿಕ ಶಾಸಕರು, ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ನಾಲ್ಕು ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ 117 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷ್ಣಾ ನದಿಯಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದು ಹಾಗೂ ನಾಲ್ಕೂ ಜಿಲ್ಲೆಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ನಲ್ಲಿ ವಿಪರೀತ ಮಳೆ ಆಗಿರುವುದೂ ಸೇರಿ ಅನಾಹುತ ಮತ್ತು ಸಂಕಷ್ಟದ ಪ್ರಮಾಣದ ಹೆಚ್ಚಾಗಿದೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಅಂದಾಜಿದೆ. ಈ ಪ್ರಮಾಣ ಇನ್ನೂ ಹೆಚ್ಚು ಆಗಬಹುದು. ಜಂಟಿ ಸಮೀಕ್ಷೆ ಪೂರ್ಣ ಆದ ಬಳಿಕ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸದ್ಯ 5 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಜಂಟಿ ಸಮೀಕ್ಷೆ ಮುಗಿದಿದೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣ ಹಣ ಅವರ ಖಾತೆಗಳಿಗೆ ಹಣ ಹೋಗುತ್ತದೆ.

ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೀದರ್, ರಾಯಚೂರು, ಗದಗ್, ಕಲಬುರಗಿ, ಧಾರವಾಡ ಸೇರಿ 8 ಜಿಲ್ಲೆಗಳಲ್ಲಿ ಶೇ.95 ರಷ್ಟು ಬೆಳೆ ಹಾನಿ ಆಗಿದೆ. ಕಳೆದ ವರ್ಷ ಶೇ.22 ರಷ್ಟು ಮಳೆ ಹೆಚ್ಚಾಗಿದೆ. ಈ ವರ್ಷ ಶೇ.26 ರಷ್ಟು ಹೆಚ್ವು ಮಳೆ ಬಿದ್ದು ವಾಡಿಕೆಗಿಂತ ವಿಪರೀತ ಹೆಚ್ಚಿನ ಮಳೆ ಬಿದ್ದಿದೆ. ಅಗತ್ಯ ಇರುವ ಕಡೆ ತಾತ್ಕಾಲಿಕ, ಶಾಶ್ವತ ತಡೆಗೋಡೆ ಕಟ್ಟಿಸಿ ಅನಾಹುತದ ಪ್ರಮಾಣ ತಪ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳ fitness ಪರೀಕ್ಷಿಸುವುದನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಗಮನಿಸಬೇಕು‌. Fitness ಇಲ್ಲದಿದ್ದರೆ ಶಾಲೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯವಾಗಿ ಮಾಡಬೇಕು. ಇದರಲ್ಲಿ ನಿರ್ಲಕ್ಷ್ಯ ಸಹಿಸಲ್ಲ. ರಕ್ಷಣೆ ಮತ್ತು ಪರಿಹಾರದ ಹಣಕ್ಕೆ ಕೊರತೆ ಇಲ್ಲ. PD ಖಾತೆಯಲ್ಲಿ ಹಣ ಸಂಗ್ರಹ ಇದೆ. ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಿರಂತರವಾಗಿ ನಡೆಸಲಾಗುತ್ತಿದೆ.

ಪ್ರವಾಹದಿಂದ ಕೃಷಿ ಭೂಮಿಯ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿರುತ್ತದೆ. ಇದರಿಂದ ಪರಿಹಾರ ಕೊಟ್ಟರೂ ಬೆಳೆ ಬೆಳೆಯುವುದು ಕಷ್ಟ. ಹೀಗಾಗಿ ಕೆರೆಗಳಲ್ಲಿರುವ ಫಲವತ್ತಾದ ಹೂಳನ್ನು ತೆಗೆದು ಫಲವತ್ತತೆ ಕಳೆದುಕೊಂಡ ಕೃಷಿ ಭೂಮಿಗೆ ಹಾಕಲು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡುವ ಬಗ್ಗೆ ಚರ್ಚಿಸಲಾಯಿತು.‌

ಪ್ರವಾಹ ಪೀಡಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಧ್ಯಂತರ ಅವಧಿಗೆ "ಪ್ರಕೃತಿ ವಿಕೋಪದಿಂದ ಆದ ಹಾನಿ" ಎಂದು ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಯಿತು. ಕೆಲವು ಜಿಲ್ಲಾಧಿಕಾರಿಗಳು ಮಾತ್ರ ಹೊರಡಿಸಿದ್ದು ಉಳಿದವರೂ ಹೊರಡಿಸಿ ಎಂದು ಸೂಚಿಸಿದರು.

ಕೃಷಿ ವಿಮೆ ಸಮರ್ಪಕವಾಗಿ ಒದಗಿಸುವಂತೆ ವಿಮಾ ಕಂಪನಿಗಳಿಗೆ ಖಡಕ್ ಸೂಚನೆ ನೀಡಬೇಕು. ಜಿಲ್ಲಾಧಿಕಾರಿಗಳು ಬ್ಯಾಂಕರ್ ಗಳ ಜೊತೆಗೆ ಚರ್ಚಿಸಬೇಕು. ಸಂತ್ರಸ್ಥ ರೈತರ ನೆರವಿಗೆ ಧಾವಿಸುವಂತೆ ಸೂಚಿಸಲಾಯಿತು. ಗ್ರಾಮೀಣ ನೀರು ಸರಬರಾಜು ವ್ಯವಸ್ಥೆ ಪರೀಕ್ಷಿಸಬೇಕು. ಅಂತರ್ಜಲ ಕಲುಷಿತಗೊಳ್ಳುವ ಅಪಾಯ ಇರುವುದರಿಂದ ನೀರಿನ ಸ್ಯಾಂಪಲ್ ಗಳನ್ನು ಪರೀಕ್ಷಿಸುವುದನ್ನು ಅಭಿಯಾನದ ರೂಪದಲ್ಲಿ ನಡೆಸಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.



ಸಾಂಕ್ರಾಮಿಕ ರೋಗಗಳು ಹೆಚ್ಚುವ ಅಪಾಯವಿದ್ದು ಆರೋಗ್ಯ ರಕ್ಷಣೆಗೆ ಗಮನ ಹರಿಸಿ. ಶಾಲಾ ಮಕ್ಕಳ ಹಾಸ್ಟೆಲ್ ಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿ ನಡೆಸಬೇಕು. ಮಳೆಯಲ್ಲಿ ದಾಖಲೆಗಳು, ಗುರುತಿನ ಚೀಟಿ ಕೊಚ್ಚಿ ಹೋಗಿರುವ , ಹಾಳಾಗಿರುವುದು ವರದಿಯಾಗಿದೆ. ಆ ಜನರು ಆತಂಕ ಪಡುವ ಅಗತ್ಯ ಇಲ್ಲದಂತೆ ಅಭಿಯಾನದ ರೂಪದಲ್ಲಿ ಹೊಸ ಗುರುತಿನ ಚೀಟಿ, ದಾಖಲೆಗಳು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಂಟಿ ಸಮೀಕ್ಷೆ ಅತ್ಯಂತ ಸಮರ್ಪಕ ಮತ್ತು ವೈಜ್ಞಾನಿಕವಾಗಿರುವಂತೆ ಎಚ್ಚರ ವಹಿಸಬೇಕು. ಹವಾಮಾನ ಬದಲಾವಣೆಯ ತೀವ್ರ ಪರಿಣಾಮವನ್ನು ರಾಜ್ಯ ಎದುರಿಸುತ್ತಿದೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಇದರ ಪರಿಣಾಮ ಮತ್ತು ಅನಾಹುತಗಳು ಆಗಿವೆ. ರಾಜ್ಯದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 29ರ ವರೆಗೆ ಸರಾಸರಿಯಂತೆ 845 ಮಿಮೀ ಮಳೆಯಾಗಬೇಕಾಗಿತ್ತು. ಆದರೆ 879 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.4 ರಷ್ಟು ಹೆಚ್ಚಿನ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯವರೆಗೆ 972 ಮಿಮೀ ಮಳೆಯಾಗಿತ್ತು. ಶೇ. 22 ರಷ್ಟು ಹೆಚ್ಚಿನ ಮಳೆಯಾಗಿತ್ತು.

ಆದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸರಾಸರಿ ಮಳೆಯಾಗಬೇಕಾಗಿದ್ದದ್ದು 472 ಮಿಮೀಗಳು. ಆದರೆ ಈ ವರ್ಷ 576 ಮಿಮೀಗಳಷ್ಟು ಅಂದರೆ ಶೇ. 22 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Karnataka Floods: ಉತ್ತರ ಕರ್ನಾಟಕದಲ್ಲಿ ಪ್ರವಾಹ; ಬೆಳೆ ಹಾನಿ ಸಮೀಕ್ಷೆ ನಂತರ ಪರಿಹಾರ ವಿತರಣೆ ಎಂದ ಸಿಎಂ

ಸುಮಾರು 9,60,578 ಹೆಕ್ಟೇರ್‌ನಲ್ಲಿ ಬೆಳೆ ಹಾನಿ

ರಾಜ್ಯದಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಇದುವರೆಗೆ ಸುಮಾರು 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದೆ. ಇದರಲ್ಲಿ 8,88,953 ಹೆಕ್ಟೇರುಗಳಷ್ಟು ಕೃಷಿ ಬೆಳೆಗಳು ಮತ್ತು 71,624 ಹೆಕ್ಟೇರುಗಳಷ್ಟು ತೋಟಗಾರಿಕಾ ಬೆಳೆಗಳು ನಷ್ಟವಾಗಿದೆಯೆಂಬುದು ಪ್ರಾಥಮಿಕ ಅಂದಾಜು.ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರ ಈ ಪ್ರಮಾಣ ಹೆಚ್ಚೂ ಆಗಬಹುದು.

ಇದುವರೆಗಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದ್ದರೆ, ಉತ್ತರ ಕರ್ನಾಟಕದ ಈ 8 ಜಿಲ್ಲೆಗಳಲ್ಲಿಯೇ 9,03,966 ಹೆಕ್ಟೇರುಗಳಷ್ಟು ಬೆಳೆಹಾನಿ ಸಂಭವಿಸಿದೆ. ಶೇ. 95 ರಷ್ಟು ಹಾನಿ ಈ ಜಿಲ್ಲೆಗಳಲ್ಲಿಯೇ ಸಂಭವಿಸಿದೆ. ಕಳೆದ ಎರಡು ತಿಂಗಳಿಂದ ನೆಲ ಒಣಗದಂತೆ ಮಳೆಯಾಗುತ್ತಿದೆ.

ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಣ ಹವೆಯ ಮೂಲಕ ಬೆಳೆಯುವ ಬೆಳೆಗಳಾದ ತೊಗರಿ, ಹತ್ತಿ, ಈರುಳ್ಳಿ ಮುಂತಾದ ಬೆಳೆಗಳನ್ನು ನಂಬಿ ರೈತರು ಬದುಕುತ್ತಾರೆ. ನಿರಂತರವಾಗಿ ಮಳೆ ಹಿಡಿದರೆ ಬೆಳೆಗಳು ಕೊಳೆಯಲಾರಂಭಿಸುತ್ತವೆ. ಈಗೀಗ ಮುಸುಕಿನ ಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳೂ ಹಾನಿಯಾಗಿವೆ. ಅಧಿಕಾರಿಗಳು ರೈತರ ಭೂಮಿಗಳಿಗೆ ಹೋಗಿ ಸಮೀಕ್ಷೆ ಮಾಡಲಾಗದಷ್ಟು ತೇವಾಂಶ ಹೊಲಗಳಲ್ಲಿದೆ.

ಪ್ರವಾಹದಿಂದಾಗಿ ಕಲ್ಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟಾರೆ 117 ಗ್ರಾಮಗಳು ತೊಂದರೆಗೊಳಗಾಗಿವೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. (ಕಲಬುರಗಿಯಲ್ಲಿ 56, ವಿಜಯಪುರದಲ್ಲಿ 17, ಯಾದಗಿರಿಯಲ್ಲಿ 7 ) ಕಾಳಜಿ ಕೇಂದ್ರಗಳಲ್ಲಿ 10576 ಜನರಿದ್ದಾರೆ.

ಮಾನವ ಪ್ರಾಣ ಹಾನಿ

ರಾಜ್ಯದಲ್ಲಿ ಜೂನ್ 1ರಿಂದ ಈವರೆಗೆ ಮಳೆ ಹಾನಿಯಿಂದಾಗಿ 52 ಮಂದಿ ಮರಣ ಹೊಂದಿದ್ದಾರೆ. ಸೆಪ್ಟೆಂಬರ್ 28 ರವರೆಗಿನ‌ ಎಲ್ಲಾ ಸಾವುಗಳಿಗೂ ವಾರಸುದಾರರಿಗೆ ಪರಿಹಾರ ನೀಡಲಾಗಿದೆ. (ಗೋಡೆ ಕುಸಿದು 15 ಮಂದಿ, ನೀರಿನಲ್ಲಿ ಮುಳಗಿ ಅಥವಾ ಕೊಚ್ಚಿ ಹೋಗಿ 23 ಮಂದಿ ಮರಣ ಹೊಂದಿದ್ದಾರೆ)

ಜಾನುವಾರು ಪ್ರಾಣ ಹಾನಿ

ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮರಣ ಹೊಂದಿವೆ. ಇದರಲ್ಲಿ ಯಾದಗಿರಿ ಜಿಲ್ಲೆ ಒಂದರಲ್ಲೇ 245 ಜಾನುವಾರುಗಳು ಮರಣ ಹೊಂದಿವೆ. ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರದಲ್ಲಿ 3, ಬೀದರ್ ಜಿಲ್ಲೆಯಲ್ಲಿ 38 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ 407 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ.

ಮನೆ ಹಾನಿ

547 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಇವುಗಳಿಗೆ ತಲಾ 1.20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ್ದ 62 ಮನೆಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ. ಭಾಗಶಃ ಹಾನಿಯಾದ ಮನೆಗಳು (ಶೇ.50 ರಿಂದ 75). ಇವುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ವಿತರಿಸಲಾಗಿದೆ. ಶೇ.20ರಿಂದ 50ರಷ್ಟು ಹಾನಿಯಾದ ಮನೆಗಳ ಸಂಖ್ಯೆ 3166. ಶೇ.15ರಿಂದ 20ರಷ್ಟು ಹಾನಿಯಾಗಿದ್ದ 3881 ಮನೆಗಳಿಗೆ 6500 ರೂ. ಪ್ರಕಾರ ಪರಿಹಾರ ನೀಡಲಾಗಿದೆ. ಒಟ್ಟಾರೆ ಇದುವರೆಗೆ 23.12 ಕೋಟಿ ರೂ.ಗಳನ್ನು ಪರಿಹಾರವಾಗಿ ಮನೆಗಳನ್ನು ಕಳೆದುಕೊಂಡವರಿಗೆ ನೀಡಲಾಗಿದೆ.

ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳನ್ನು ಕಳೆದುಕೊಂಡ 4858 ಕುಟುಂಬಗಳಿಗೆ ಈ ವರೆಗೆ 2.42 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ

ರಸ್ತೆ, ಸೇತುವೆ ಮುಂತಾದವುಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ 25 ರಿಂದ 50 ಕೋಟಿ ರೂ. ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.