Sigandur Bridge: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಿ; ಕೇಂದ್ರ ಸಚಿವ ಗಡ್ಕರಿಗೆ ಸಿಎಂ ಪತ್ರ
Sigandur Bridge: ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿತವಾಗಿದೆ. ಆದರೆ, ಈ ಬಗ್ಗೆ ನನಗೆ ಮೊದಲೇ ಮಾಹಿತಿ ನೀಡಿಲ್ಲ. ಜುಲೈ 14ರಂದೇ ವಿಜಯಪುರದಲ್ಲಿ ರಾಜ್ಯ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹೀಗಾಗಿ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.


ಬೆಂಗಳೂರು, ಜುಲೈ 13: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ಸೇತುವೆ (Sigandur Bridge) ಲೋಕಾರ್ಪಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ನಡುವೆ, ಸೋಮವಾರ (ಜು.14) ನಡೆಯಲಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೂಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿತವಾಗಿದೆ. ಆದರೆ, ಈ ಬಗ್ಗೆ ನನಗೆ ಮೊದಲೇ ಮಾಹಿತಿ ನೀಡಿಲ್ಲ. ಇದೇ ದಿನ ಕರ್ನಾಟಕ ಸರ್ಕಾರದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹೀಗಾಗಿ ನಾಳೆಯ ಕಾರ್ಯಕ್ರಮ ಮುಂದೂಡಿ, ಮತ್ತೊಂದು ದಿನ ಕಾರ್ಯಕ್ರಮ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 11ರಂದು ಪತ್ರ ಬರೆದಿದ್ದಾರೆ.

ಸಿಎಂ ಬರೆದ ಪತ್ರದಲ್ಲಿ ಏನಿದೆ?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಜುಲೈ 14, 2025 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೆಹರು ಮೈದಾನದಲ್ಲಿ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಆದರೆ, ಈ ಕಾರ್ಯಕ್ರಮದ ಬಗ್ಗೆ ನನಗೆ ಮುಂಚಿತವಾಗಿ ತಿಳಿಸಿಲ್ಲ. ಮತ್ತು ಅದೇ ದಿನ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಲಾಗಿದೆ.
ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿಗದಿಪಡಿಸುವ ಮೊದಲು ಹೆದ್ದಾರಿ ಸಚಿವಾಲಯವು, ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು. ಆದ್ದರಿಂದ, ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಇಲಾಖೆಗೆ ಸೂಚಿಸಬೇಕೆಂದು ನಾನು ವಿನಂತಿಸುತ್ತೇನೆ. ಅಲ್ಲದೆ, ಈ ಕಾರ್ಯಕ್ರಮವನ್ನು ಮುಂದೂಡಲು ಮತ್ತು ನಿಮಗೆ ಅನುಕೂಲಕರವಾದ ಒಂದೆರಡು ದಿನಾಂಕಗಳನ್ನು ನನಗೆ ಒದಗಿಸುವಂತೆ ನಾನು ವಿನಂತಿಸುತ್ತೇನೆ, ಇದರಿಂದ ನಾನು ಈ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಭಾಗಿಯಾಗಲು ಸಾಧ್ಯವಾಗುತ್ತದೆ ಎಂದು ಕೋರಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ಸತೀಶ್ ಜಾರಕಿಹೊಳಿ ಭಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಂದು ಇಂಡಿ ತಾಲೂಕಿನಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಲಿದ್ದಾರೆ.
ಈ ಸುದ್ದಿಯನ್ನೂ ಓದಿ | Sigandur Bridge: ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡಿ; ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ