Gururaj Gantihole Column: ಶತಕೋಟಿ ಸರದಾರ ಬಿಎಸ್ʼಎನ್ʼಎಲ್ ಪುಟಿದೆದ್ದು ನಿಲ್ಲುವುದೇ !?
ಎಂಬತ್ತರ ದಶಕವನ್ನು ಟೆಲಿಗ್ರಾಮ್ ಸೇವೆಯ ಸುವರ್ಣ ವರ್ಷಗಳೆಂದು ಕರೆಯಲಾಗಿತ್ತು. ದಹಲಿಯ ಪ್ರಧಾನ ಕಚೇರಿಯೊಂದರ ದಿನವೊಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಟೆಲಿಗ್ರಾಮ್‌ಗಳನ್ನು ಕಳುಹಿಸ ಲಾಗುತ್ತಿತ್ತು. ಇಂಗ್ಲೆಂಡಿನ ಓರಿಯೆಂಟಲ್ ಟೆಲಿಫೋನ್ ಕಂಪನಿಯು 1882ರ ಜನವರಿ 28ರಂದು ಭಾರತ ದಲ್ಲಿ ಟೆಲಿಫೋನ್ ಸೇವೆ ಪ್ರಾರಂಭಿಸಿತಲ್ಲದೆ, ಅಂದಿನ ಕಲ್ಕತ್ತಾ, ಬಾಂಬೆ, ಅಹಮದಾಬಾದ್ ಮತ್ತು ಮದ್ರಾಸ್ ನಗರಗಳಲ್ಲಿ ತನ್ನ ಟೆಲಿಫೋನ್ ಎಕ್ಸ್ ಚೇಂಜ್ ಸ್ಥಾಪಿಸಿತ್ತು.
-
ಗುರುರಾಜ್ ಗಂಟಿಹೊಳೆ
Oct 30, 2025 7:18 AM
ಗಂಟಾಘೋಷ
ಅತ್ಯಾಧುನಿಕ ಯುಗದಲ್ಲಿ ಸಂಪರ್ಕ ಕ್ರಾಂತಿಯಿಂದ ಉಂಟಾದ ಬದಲಾವಣೆಯ ಗತಿಯನ್ನು ಬೆಳಕಿನ ಮಾನದಂಡದಲ್ಲಿ ಅಳೆದರೂ ಕಡಿಮೆಯೇ ಎಂದೆನಿಸುತ್ತದೆ. ಇಂದಿನ ಮಾಹಿತಿ ಯುಗದಲ್ಲಿ ಅಂತರ್ಜಾಲ ಹೊಂದಿದವನೇ ಚಾಣಕ್ಯ ಅಥವಾ ಬುದ್ಧಿವಂತ ಎಂದೆನ್ನುವಷ್ಟರ ಮಟ್ಟಿಗೆ ಮಾನವ ಜೀವನ ಬಂದುನಿಂತಿದೆ.
ಭಾರತದಲ್ಲೂ ತನ್ನ ಬಿರುಗಾಳಿಯನ್ನೆಬ್ಬಿಸಿದ್ದು, ಇಂದಿನ ಯುವಜನತೆ ತಮ್ಮ ಬೆರಳ ತುದಿಯ ಎಲ್ಲವನ್ನು ನಿಯಂತ್ರಿಸಬಲ್ಲರು, ಸಂಪರ್ಕ ಸಾಧಿಸಬಲ್ಲರು ಮತ್ತು ತಾವಿದ್ದಲ್ಲಿಗೇ ತಮ್ಮ ಅಭಿಲಾಷೆ ಗಳನ್ನು ಆಹ್ವಾನಿಸಿ ಆನಂದಿಸಬಲ್ಲರು. ಇಂತಹ ಸಂಪರ್ಕ ಯುಗಕ್ಕೆ ಭಾರತದಲ್ಲಿ ಅಡಿಪಾಯ ವಾಗಿದ್ದು ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಎಂಬ ಸರಕಾರಿ ಸ್ವಾಯತ್ತ ಸಂಸ್ಥೆ!
ಈ ಸಂಸ್ಥೆಯ ಬಗ್ಗೆ ಹೇಳುವುದೇ ಒಂದು ಹೆಮ್ಮೆಯ ವಿಚಾರವಾಗಿದ್ದ ಕಾಲವೊಂದಿತ್ತು. ಮೊಬೈಲ್ ಸಿಮ್ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಅದನ್ನು ಪಡೆಯಲು ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ಐದರಿಂದ ಎಂಟತ್ತು ಸಾವಿರ ಹಣ ಕೊಟ್ಟು ಖರೀದಿಸಿದ ಕ್ರೇಜ್ ಕಾಲಘಟ್ಟವೊಂದಿತ್ತು.
ಅಧಿಕಾರಿಗಳ ನಿರ್ಲಕ್ಷ್ಯತನವೋ, ಆಡಳಿತ ವ್ಯವಸ್ಥೆಯ ನಿರ್ಲಜ್ಜನತನೋ ಅಥವಾ ಬಿಎಸ್‌ಎನ್ ಎಲ್ ಸಂಸ್ಥೆ ಯದೇ ಕೆಟ್ಟಕಾಲವೋ ಏನೋ ಎಂಬಂತೆ ಜನಾನುರಾಗಿ, ಲಾಭದಾಯಕವಾಗಿ ಬೆಳೆಯಬೇಕಿದ್ದ ಸಂಸ್ಥೆಯೊಂದು ವ್ಯವಹಾರಿಕ ಸ್ಪರ್ಧೆಯಲ್ಲಿ ಹಿಂದೆ ಬಿದ್ದು, ನಷ್ಟ ಅನುಭವಿಸುತ್ತ, ಜನರಿಂದ ದೂರ ಸರಿದುಬಿಟ್ಟಿತು.
ಇದನ್ನೂ ಓದಿ: Gururaj Gantihole Column: ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಕೊನೆ ಬಾಣ ಆರೆಸ್ಸೆಸ್ ನಿಷೇಧ
ಸದ್ಯ ಭಾರತದಲ್ಲಿ ರಿಲಯನ್ಸ್, ಭಾರ್ತಿ ಏರ್ಟೆಲ್, ವೊಡೋಫೋನ್ ಐಡಿಯ, ಟಾಟಾ ಕಮ್ಯೂನಿ ಕೇಷನ್ಸ್, ಇಂಡಸ್ ಟವರ್ಸ್ ಸೇರಿದಂತೆ ಮುಂಚೂಣಿಯಲ್ಲಿರುವ ಪ್ರಮುಖ ಟೆಲಿಕಾಂ ಕಂಪನಿಗಳ ಜತೆಗೆ ಬಿಎಸ್‌ಎನ್‌ಎಲ್, ಎಮ್‌ಟಿಎನ್ ಎಲ್ ಕೂಡ ಸೇರಿವೆ. ಎಮ್‌ಟಿಎನ್‌ಎಲ್ ( Mahanagar Telephone Nigam Ltd) ಎಂಬುದು ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರದ ಸಂಸ್ಥೆಯಾಗಿದೆ.
TRAI ಪ್ರಕಾರ, ಜಿಯೋ ಶೇ.41.1ರಷ್ಟು ಷೇರು ಹೊಂದುವ ಮೂಲಕ, ಹೆಚ್ಚು ಬಳಕೆದಾರರನ್ನು ಹೊಂದಿರುವ ಮೊಬೈಲ್ ಕಂಪನಿಯಾಗಿದ್ದು, ಇತರೆ ಏರ್ಟೆಲ್ (ಶೇ.33.6), ವೊಡೋಫೋನ್ (ಶೇ.17.4%), ಬಿಎಸ್‌ಎನ್‌ಎಲ್ (ಶೇ.7.86), ಎಮ್‌ಟಿಎನ್‌ಎಲ್ (ಶೇ.0.03) ಕಂಪನಿಗಳಾಗಿವೆ.
ಫೆಬ್ರವರಿ 27ರ 1997ರಂದು ಸೆಕ್ಷನ್-೩ರ ಅಡಿಯಲ್ಲಿ Telecom Regulatory Authority of India Act ಕಾನೂನು ಪರಿಚಯಿಸಿ, ಇದರಡಿಯಲ್ಲಿ TRAI ಎಂಬ ಒಂದು ಸ್ವಾಯತ್ತ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಭಾರತದಲ್ಲಿನ ದೂರವಾಣಿ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಆಗುಹೋಗುಗಳನ್ನು TRAI ನೋಡಿಕೊಳ್ಳುತ್ತದೆ.
ಪ್ರಸ್ತುತ ಭಾರತದಲ್ಲಿ ಸರ್ವೇ ಆಫ್ ಇಂಡಿಯಾ (1767), ಕಾಲೇಜ್ ಆಫ್ ಎಂಜನಿಯರಿಂಗ್, ಗಿಂಡಿ (1794), ಐಐಟಿ-ರೂರ್ಕೀ (1847), ಐಎಂಡಿ (1875), ಭಾರತೀಯ ರೈಲ್ವೆ (1853) ಹೊರತುಪಡಿಸಿದರೆ, ಸಂಪರ್ಕ ಮಾಧ್ಯಮವಾಗಿ ಟೆಲಿಗ್ರಾಫ್ ಎಂಬ ವ್ಯವಸ್ಥೆಯನ್ನು 1850ರಲ್ಲಿ ಸ್ಥಾಪಿಸಲಾಯಿತು.
ಪ್ರಸ್ತುತ ವಿವಿಧ ರೂಪದಲ್ಲಿ ಮಾರ್ಪಟ್ಟು ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಸಂಸ್ಥೆಗಳಾಗಿವೆ. ಸಂಪರ್ಕ ವ್ಯವಸ್ಥೆಯ ಇತಿಹಾಸವನ್ನು ಬ್ರಿಟಿಷ್ ಆಡಳಿತದ ಭಾರತದಲ್ಲಿ ಗುರುತಿಸ ಬಹುದು. ಭಾರತದಲ್ಲಿ ಟೆಲಿಕಾಂ ನೆಟ್ ವರ್ಕ್‌ಗಳ ಅಡಿಪಾಯವನ್ನು 19ನೇ ಶತಮಾನದಲ್ಲಿ ಬ್ರಿಟಿಷರು ಹಾಕಿದರು. ಬ್ರಿಟಿಷರ ಕಾಲದಲ್ಲಿ, ಮೊದಲ ಟೆಲಿಗ್ರಾಫ್ ಲೈನ್ ವ್ಯವಸ್ಥೆಯನ್ನು ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ 1850ರಲ್ಲಿ ಸ್ಥಾಪಿಸಲಾಯಿತು.
ಬ್ರಿಟಿಷ್ ಈ ಇಂಡಿಯಾ ಕಂಪನಿ 1851ರಲ್ಲಿ ಟೆಲಿಗ್ರಾಫ್ ಗಳನ್ನು ಬಳಸಲು ಪ್ರಾರಂಭಿಸಿತು ಮತ್ತು 1854ರವರೆಗೆ ದೇಶದಾದ್ಯಂತ ಟೆಲಿಗ್ರಾಫ್ ಲೈನ್‌ಗಳನ್ನು ಹಾಕಲಾಯಿತು. 1854ರಲ್ಲಿ, ಟೆಲಿಗ್ರಾಫ್ ಸೇವೆಯನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಯಿತು ಮತ್ತು ಮೊದಲ ಟೆಲಿಗ್ರಾಮ್ ಅನ್ನು ಮುಂಬೈನಿಂದ ಪುಣೆಗೆ ಕಳುಹಿಸಲಾಯಿತು.
1885ರಲ್ಲಿ, ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬ್ರಿಟಿಷ್ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅಂಗೀಕರಿಸಿತು. ಸ್ವಾತಂತ್ರ್ಯಕ್ಕೂ ಮೊದಲು ಗವರ್ನರ್ ಜನರಲ್ ಅಡಿಯಲ್ಲಿ ಮಿನಿಸ್ಟ್ರಿ ಆಫ್ ಕಮ್ಯೂನಿಕೇಷನ್ಸ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಟೆಲಿಗ್ರಾಫ್ ವ್ಯವಸ್ಥೆಯು, 1980ರ ದಶಕದಲ್ಲಿ ಟೆಲಿಗ್ರಾಮ್ ಸೇವೆಯ ಉತ್ತುಂಗದಲ್ಲಿತ್ತು.
ಎಂಬತ್ತರ ದಶಕವನ್ನು ಟೆಲಿಗ್ರಾಮ್ ಸೇವೆಯ ಸುವರ್ಣ ವರ್ಷಗಳೆಂದು ಕರೆಯಲಾಗಿತ್ತು. ದೆಹಲಿಯ ಪ್ರಧಾನ ಕಚೇರಿಯೊಂದರ ದಿನವೊಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಟೆಲಿಗ್ರಾಮ್‌ಗಳನ್ನು ಕಳುಹಿಸಲಾಗುತ್ತಿತ್ತು. ಇಂಗ್ಲೆಂಡಿನ ಓರಿಯೆಂಟಲ್ ಟೆಲಿಫೋನ್ ಕಂಪನಿಯು 1882ರ ಜನವರಿ ೨೮ರಂದು ಭಾರತದಲ್ಲಿ ಟೆಲಿಫೋನ್ ಸೇವೆ ಪ್ರಾರಂಭಿಸಿತಲ್ಲದೆ, ಅಂದಿನ ಕಲ್ಕತ್ತಾ, ಬಾಂಬೆ, ಅಹಮದಾಬಾದ್ ಮತ್ತು ಮದ್ರಾಸ್ ನಗರಗಳಲ್ಲಿ ತನ್ನ ಟೆಲಿಫೋನ್ ಎಕ್ಸ್ ಚೇಂಜ್ ಸ್ಥಾಪಿಸಿತ್ತು.
ಸುಧಾರಣೆಯ ಕಾರಣದಿಂದ 1985ರ ಜನವರಿ ೧ರಂದು ಪೋ ಟೆಲಿಗ್ರಾಫ್ ಬೋರ್ಡ್ ಇಲಾಖೆಯ ಅಡಿಯಲ್ಲಿದ್ದ ಅಂಚೆ ಮತ್ತು ದೂರಸಂಪರ್ಕ ಇಲಾಖೆಗಳು ಪ್ರತ್ಯೇಕಗೊಂಡವು. 1985ರ ನಂತರ ಡಿಪಾರ್ಟ್‌ಮೆಂಟ್ ಆಫ್ ಟೆಲಿಕಮ್ಯೂನಿಕೇಷನ್ಸ್ ಇಲಾಖೆ ಅಡಿಯಲ್ಲಿ ದೂರ ಸಂಪರ್ಕ ವ್ಯವಸ್ಥೆ ಕಾರ್ಯನಿರ್ವಹಿಸಲಾರಂಭಿಸಿತು. 1995ರ ಜುಲೈ 31ರಂದು ಮೊದಲ ಮೊಬೈಲ್ ಫೋನ್ ಪರಿಚಯಿಸಲಾಯಿತು.
ಅಕ್ಟೋಬರ್ 1, 2000ರಲ್ಲಿ ಭಾರತ ಸರಕಾರವು DTO (Department of Telecom Operations) ಮತ್ತು DTS (Department of Telecom Services) ಇಲಾಖೆಗಳನ್ನು ಹಿಡಿತಕ್ಕೆ ತೆಗೆದುಕೊಂಡು BSNL ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಂಪರ್ಕ ವ್ಯವಸ್ಥೆಯನ್ನು ಇದರಡಿಯಲ್ಲಿ ಬರುವಂತೆ ಮಾರ್ಪ ಡಿಸಿತು.
ಪ್ರಸ್ತುತ, 45 ಲಕ್ಷಕ್ಕೂ ಹೆಚ್ಚು BSNL ಸ್ಥಿರ ದೂರವಾಣಿ ಬಳಕೆದಾರರು ದೇಶದಲ್ಲಿ ಇದ್ದಾರೆಂದು ಅಂದಾಜಿಸಲಾಗಿದೆ. ಸಂಸ್ಥೆಯ 182 ಕಚೇರಿಗಳ ನಡುವಿನ ಟೆಲೆಕ್ಸ್ ನೆಟ್‌ವರ್ಕ್ ಅನ್ನು 2010ರಲ್ಲಿ ವೆಬ್ ಆಧಾರಿತ ಟೆಲಿಗ್ರಾಮ್ ಮೆಸೇಜಿಂಗ್ ಸಿಸ್ಟಮನೊಂದಿಗೆ ಬದಲಾಯಿಸಲಾಯಿತು, ಅಸಮರ್ಪಕ ವಿದ್ಯುತ್ ಕಾರಣಗಳಿಂದಾಗಿ ಸೇವೆಯಲ್ಲಿ ಕುಸಿತಕ್ಕೆ ಕಾರಣವಾಯಿತು ಮತ್ತು 15 ಜುಲೈ 2013 ರಂದು ಸಾರ್ವಜನಿಕ ಟೆಲಿಗ್ರಾಮ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.
ರಿಲೈಯ ಜಿಯೋ ಸಂಸ್ಥೆಯು 136000 ಟವರ್‌ಗಳನ್ನು ಹೊಂದಿದ್ದರೆ, ಏರ್‌ಟೆಲ್ 324500 ಟವರ್ ಗಳನ್ನು ಹೊಂದಿದೆ. ಇದರಂತೆ, ಬಿಎಸ್‌ಎನ್‌ಎಲ್ 67340ರಷ್ಟು 4ಜಿ( 4G ) ಟವರ್‌ಗಳನ್ನು ಮತ್ತು 70000ರಷ್ಟು ಆಕ್ಟೀವ್ ೪ಜಿ ( 4G- LTE ) ಟವರ್‌ಗಳನ್ನು ಹೊಂದಿದೆ. ಸುಮಾರು 8500ಕ್ಕೂ ಹೆಚ್ಚು ಟವರ್‌ಗಳನ್ನು ಜಿಯೋ ಜತೆಗೆ ಹಾಗೂ 12550ರಷ್ಟು ಟವರ್‌ಗಳನ್ನು ಏರ್‌ಟೆಲ್ ಜತೆಗೆ ಬಿಎಸ್‌ಎನ್ ಎಲ್ ಹಂಚಿಕೊಂಡಿದೆ.
ದೇಶಾದ್ಯಂತ ೧೦ ಕೋಟಿಯಷ್ಟು ಮೊಬೈಲ್ ಬಳಕೆದಾರರನ್ನು ಹೊಂದಿರುವ ಬಿಎಸ್‌ಎನ್‌ಎಲ್ ಸಂಸ್ಥೆಯು ಒಟ್ಟು ಮಾರುಕಟ್ಟೆಯ ಶೇ.೯ರಷ್ಟು ಪಾಲನ್ನು ಹೊಂದಿದೆ. ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯೊಂದು ಇತರ ಕಂಪನಿಗಳು ಬೆಳೆಯುತ್ತಿರುವ ವೇಗ ನೋಡಿಯಾದರೂ, ತನ್ನ ವ್ಯಾಪ್ತಿ ಪ್ರದೇಶವನ್ನು ಹಿಂದುಳಿದ, ಗ್ರಾಮೀಣ ಭಾರತಕ್ಕೆ ಹೆಚ್ಚು ಕೇಂದ್ರೀಕೃತಗೊಳಿಸಬೇಕಾದ ತನ್ನ ಜವಾಬ್ದಾರಿ, ಹೊಣೆಗಾರಿಕೆ ನಿಭಾಯಿಸದೆ ಎಡವುತ್ತಿದೆ ಎಂದೆನಿಸದಿರದು.
ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಬಂದ ಮೇಲೆ ಡಿಜಿಟಲ್ ಜಗತ್ತಿಗೆ ಭಾರತವನ್ನು ವಿನೂತನ ರೀತಿಯಲ್ಲಿ ಕೊಂಡೊಯ್ಯತೊಡಗಿದರು. 2014ಕ್ಕೂ ಮುಂಚೆ ಇಂಟರ್ ನೆಟ್ ಡಾಟಾ ದರವು 250 ರು.ಗೆ ಒಂದು ಜಿಬಿಯಷ್ಟಿದ್ದದ್ದು, 2014ರ ನಂತರ, ಒಂದು ಜಿಬಿಗೆ ೧೦ ರು.ಗಿಂತಲೂ ಕಡಿಮೆ ಬೆಲೆ ಹೊಂದಿರುವುದು ಡಿಜಿಟಲೈಜೇಷನ್ ಕ್ರಾಂತಿಯ ಸಂಕೇತವಾಗಿದೆ ಎನ್ನಬಹುದು.
ಇದೇ ಸಂದರ್ಭದಲ್ಲಿ ದಶಕಗಳಿಂದ ನಷ್ಟದಲ್ಲಿದ್ದ ಬಿಎಸ್‌ಎನ್ ಎಲ್ ಸಂಸ್ಥೆಯೊಂದಿಗೆ ಟಾಟಾ ಸಂಸ್ಥೆಯು ಮೇ 2023ರಲ್ಲಿ ಪ್ರಮುಖ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಪರ್ಕಕ್ರಾಂತಿಯಲ್ಲಿ ಹೊಸದೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಯಿತು. 4ಜಿ ಮತ್ತು 5ಜಿ ಸಂಪರ್ಕಜಾಲವನ್ನು ವಿಸ್ತರಿಸುವ ಹೊಣೆ ಹೊತ್ತು ಟಾಟಾ ಗ್ರೂಪ್ (TCS) ಸಂಸ್ಥೆಯು ಆರಂಭಿಕ ಪರಿಕರಗಳಿಗಾಗಿ 7500 ಕೋಟಿ ಒಪ್ಪಂದಕ್ಕೆ ಮುಂದಾಯಿತು.
ಇ-ಸಿಮ್ ಪರಿಚಯಿಸುವ ಮೂಲಕ, ದೇಶದ ಮೂಲೆಮೂಲೆಗೂ ಉತ್ತಮ ಸಂಪರ್ಕಜಾಲ ವಿಸ್ತರಿಸುವ ಗುರಿ ಟಾಟಾ ಸಂಸ್ಥೆಯದಾಗಿದೆ. ಸುಮಾರು ೨೦ ಸಾವಿರ ಕೋಟಿ ವ್ಯವಹಾರ ಒಪ್ಪಂದದ ಉದ್ದೇಶ ಹೊಂದಿರುವ ಸಂಸ್ಥೆಯು, 2025ರ ಕೊನೆಗೆ ಶೇ.೨೫ರಷ್ಟು ಮಾರುಕಟ್ಟೆ ವಿಸ್ತರಿಸುವ ಗುರಿ ಹೊಂದಿದೆ ಎಂದು ಹೇಳಿದೆ. 2025ರ ಅಂತ್ಯಕ್ಕೆ ಒಂದು ಲಕ್ಷ ಟವರ್ ಅಳವಡಿಕೆಯ ಗಡಿ ದಾಟುವ ಗುರಿ ಹಾಕಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇದೆಲ್ಲವೂ ಸಂಸ್ಥೆಯ ಕುರಿತು ಉತ್ತಮ ಅಭಿಪ್ರಾಯ ಹೇಳುತ್ತಿರುವುದರ ಜತೆಗೇ, ಕರೆ ಸಂಪರ್ಕ ಮತ್ತು ಅಂತರ್ಜಾಲ ವ್ಯವಸ್ಥೆ ಕುರಿತು ಕೆಲ ನೂನ್ಯತೆಗಳು ಗ್ರಾಮೀಣ ಭಾಗ ಮತ್ತು ಕರಾವಳಿ ಪ್ರದೇಶದ ಜನರನ್ನು ಸದಾ ಕಾಡುತ್ತಿವೆ.
ಕರ್ನಾಟಕದಲ್ಲಿ ‘ಟೆಲಿ ಡೆನ್ಸಿಟಿ’ (ಜನಸಂಖ್ಯೆಯನ್ನೂ ಮೀರಿದ ಮೊಬೈಲ್ ಬಳಕೆ)ಯು ಜಾಸ್ತಿ ಯಿದ್ದು, ಜೂನ್ ೩೦ರ 2024ರ ವೇಳೆಗೆ ಶೇ.105ರ ಗಡಿ ದಾಟಿದೆ. ‘ಟವರ್ ಡೆನ್ಸಿಟಿ’ (ಅಗತ್ಯವಿರುವಲ್ಲಿ ಟವರ್ ಸಂಖ್ಯೆ ಜಾಸ್ತಿ ಅಥವಾ ಕಡಿಮೆಯಾಗಿರುವುದು) ಲೆಕ್ಕದಲ್ಲಿ ಇನ್ನೂ ಹಿಂದಿರುವುದು ಕಂಡು ಬರುತ್ತಿದ್ದು, ಕರ್ನಾಟಕದಲ್ಲಿ 4158 ಟವರ್ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯಿದೆ.
ಕರ್ನಾಟಕದ ಇನ್ನೂ ೪ಜಿ ನೆಟ್‌ವರ್ಕ್ ತಲುಪದೇ ಇರುವ ಸಾವಿರಾರು ಗ್ರಾಮೀಣ ಪ್ರದೇಶಗಳಿವೆ ಎಂದು ಅಂದಾಜಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಹಾಕಿರುವ ಟವರ್‌ಗಳು ಕೆಲಸ ಮಾಡಿದರೆ ಮಾಡಿದವು, ಇಲ್ಲದಿದ್ದರೆ ಇಲ್ಲ ಎಂಬಂತಹ ಕಳಪೆ ಸಿಗ್ನಲ್ ಹೊಂದಿರುವ ಹೆಚ್ಚು ಅಂತರದಿಂದ ಕೂಡಿದ ನಿರ್ಮಾಣಗಳಾಗಿವೆ. ಈಗಾಗಲೇ ಹಾಕಿರುವ ಟವರ್ ಗಳ ಸಿಗ್ನಲ್ ವ್ಯವಸ್ಥೆಯನ್ನು ಉತ್ತಮ ಗೊಳಿಸಲು 144 ಹೆಚ್ಚುವರಿ ಟವರ್ ನಿರ್ಮಾಣದ ಗುರಿಯನ್ನು ಬಿಎಸ್‌ಎನ್ ಎಲ್ ಸಂಸ್ಥೆಯು ಹೊಂದಿದೆ ಎನ್ನಲಾಗಿದ್ದರೂ, ಸಮಸ್ಯೆಗಳು ಮಾತ್ರ ಹಾಗೇ ಉಳಿದುಕೊಂಡಿವೆ.
ಇದಕ್ಕಾಗಿ, ಸಿಗ್ನಲ್ ಕೊರತೆ ಎದುರಿಸುತ್ತಿರುವ ಸ್ಥಳಗಳನ್ನು ಗುರುತಿಸಿ, ಜಾರಿಗೊಳಿಸುವ ಕ್ರಮ ತ್ವರಿತಗೊಳಿಸಬೇಕಿದೆ. ಇಡೀ ರಾಜ್ಯದಲ್ಲಿ ಬೆಂಗಳೂರು ನಗರ ಹೊರತುಪಡಿಸಿದರೆ ಅತ್ಯಂತ ಶ್ರೀಮಂತ (PCI) ಜಿಲ್ಲೆಗಳೆನಿಸಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಮತ್ತು ಇವುಗಳ ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ವ್ಯವಸ್ಥೆ ಬಗ್ಗೆ ಅತಿ ಹೆಚ್ಚು ತಾರತಮ್ಯವಾಗಿರುವಂತೆ ಕಂಡುಬರುತ್ತಿದೆ ಎಂಬುದು ಇಲ್ಲಿನ ಜನರ ಬಹುದಿನಗಳ ದೂರು ಮತ್ತು ಆಪಾದನೆಯಾಗಿದೆ.
ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಒಂದು ಸಮರ್ಪಕ ತಾಂತ್ರಿಕ ‘ಸಿಂಗಲ್ ನೆಟ್‌ವರ್ಕ್ ಝೋನ್ ಸಿಸ್ಟಮ್’ (Single Network Zone)ಗೆ ತಂದು, ಸಿಲಿಕಾನ್ ಬೀಚ್ ( Silicon Beach) ಆಗಿ ಬೆಳೆಸುವಂತಹ ಎಲ್ಲ ಅರ್ಹತೆಗಳು ಕರ್ನಾಟಕದ ಕರಾವಳಿ ಪ್ರದೇಶಕ್ಕಿದೆ ಎಂಬುದನ್ನು ಗಮನಿಸ ಬೇಕಿದೆ ಮತ್ತು ಇದಕ್ಕಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರುವ ಅಗತ್ಯವಿದೆ.
ಕರಾವಳಿ ಜನರ ಬಹುದಿನಗಳ ಬೇಡಿಕೆಗೆ ಸ್ಪಂದನೆ ಎಂಬಂತೆ ಬಿಎಸ್‌ಎನ್‌ಎಲ್ 2023ರಲ್ಲಿ ದಕ್ಷಿಣ ಕನ್ನಡಕ್ಕೆ ೬೬ ಮತ್ತು ಉಡುಪಿ ಜಿಲ್ಲೆಗೆ ೩೬ ಹೊಸ ೪ಜಿ ಟವರ್ ನಿರ್ಮಾಣದ ಘೋಷಣೆ ಮಾಡಿತು. ಟವರ್ ಇದ್ದರೂ, ಕರೆಗಳನ್ನು ಮಾಡಿದಾಗ ಇತ್ತಲಿಂದ ಧ್ವನಿ ಕೇಳದಿರುವುದು, ಕರೆ ಸ್ವೀಕರಿಸಿದರೂ ಕಡೆಯ ಧ್ವನಿ ಕೇಳದಿರುವ ಖಾಯಂ ಸಮಸ್ಯೆಗಳನ್ನು ಕರಾವಳಿ ಜನರು ಎದುರಿಸುತ್ತಿದ್ದಾರೆ.
ಗರ್ಭಿಣಿಯರ ತುರ್ತುಪರಿಸ್ಥಿತಿಯಲ್ಲಿ, ಆಸ್ಪತ್ರೆ ಸಂಪರ್ಕಿಸುವಂತಹ ಎಮರ್ಜೆನ್ಸಿ ಸಂದರ್ಭಗಳಲ್ಲಿ ಮೊಬೈಲ್ ನೆಟ್‌ವರ್ಕ್ ನಂಬಿ ಕುಳಿತವರ ಕತೆ ಆ ದೇವರಿಗೇ ಗೊತ್ತು!
ಇಡೀ ಭಾರತದ ಜತೆಗೆ ಕರ್ನಾಟಕ ರಾಜ್ಯವೂ ಅತ್ಯಾಧುನಿಕತೆಗೆ ದಾಪುಗಾಲಿಡುತ್ತಿದ್ದರೂ, ಕರಾವಳಿ ಭಾಗದ, ಬೆಟ್ಟದ ತಪ್ಪಲಿನ ವಿದ್ಯಾರ್ಥಿಗಳು ಇನ್ನೂ ೪ಜಿ ಕೂಡ ಸರಿಯಾಗಿ ಬಳಸದಿರುವ, ಉತ್ತಮ ನೆಟ್‌ವರ್ಕ್ ಮೂಲಕ ಆನ್‌ಲೈನ್ ಸಂಬಂಧಿತ ಕಲಿಕಾ ಸೌಕರ್ಯಗಳನ್ನು ಪಡೆಯಲು ಹರಸಾಹಸ ಪಡುತ್ತಿರುವ ಪರಿಸ್ಥಿತಿಯಲ್ಲಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ೫೦ ಸಾವಿರದಷ್ಟು ಮೊಬೈಲ್ ಟವರ್ ಗಳಿದ್ದು, ಮುಕ್ಕಾಲು ಭಾಗ ಬೆಂಗಳೂರು ಸುತ್ತಮುತ್ತ ಮೀಸಲಾಗಿದ್ದರೆ, ಉಳಿದುದರಲ್ಲಿ ಮುಕ್ಕಾಲು ಹಳೇ ಮೈಸೂರು, ಬೆಳಗಾವಿ ವಿಭಾಗಕ್ಕೆ ಹಂಚಿ ಹೋಗಿವೆ. ಅಳಿದುಳಿದ ಸಂಖ್ಯೆಗಳಲ್ಲಿ ಹಲವು ಉತ್ತರ ಕರ್ನಾಟಕಕ್ಕೆ ಹೋಗಿದ್ದರೆ, ಉಳಿದಂತೆ ಟವರುಗಳು ಕರಾವಳಿ ಪ್ರದೇಶವನ್ನು ಕಂಡಿವೆ. ಕರಾವಳಿ, ಕರಾವಳಿಯ ಮಲೆನಾಡಿನ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿಚಾರಗಳನ್ನಂತೂ ಕೇಳುವುದೇ ಬೇಡ!
ಆಧುನಿಕ ತಂತ್ರಜ್ಞಾನಗಳು, ತಾಂತ್ರಿಕತೆಯುಳ್ಳ ಮೂಲಸೌಕರ್ಯಗಳು ಈ ಭಾಗವನ್ನು ತಲುಪು ವಷ್ಟರಲ್ಲಿ ಮತ್ತೊಂದು ಜನರೇಷನ್ ಬದಲಾಗಿ ಹೋಗಿರುತ್ತದೆ. ಸಕಾಲದಲ್ಲಿ, ಸಮರ್ಪಕವಾಗಿ ಸರಕಾರಿ ಸೌಲಭ್ಯಗಳು, ಜನರ ತೆರಿಗೆ ಹಣದಿಂದ ಜಾರಿಗೊಳ್ಳುವಂತಹ ಯೋಜನೆಗಳು ಎಲ್ಲ ಭಾಗದ ಜನರಿಗೂ ತಲುಪಬೇಕಾದ ಅಗತ್ಯ, ಇವುಗಳನ್ನು ಪಡೆದುಕೊಳ್ಳುವ ಹಕ್ಕು ಇಂದಿನ ತಲೆಮಾರಿನ ಜನತೆಗಿದೆ. ಇದಕ್ಕೆ ಪೂರಕವಾಗಿ ದೇಶದ ಹಳೆಯ ಇಲಾಖೆಯಾದ ಭಾರತ್ ಸಂಚಾರ ನಿಗಮ ಲಿಮಿಟೆಡ್, ನರೇಂದ್ರ ಮೋದಿಯಂತಹ ನೇತೃತ್ವದ ಸರಕಾರದಲ್ಲೂ ನಕಾರಾತ್ಮಕ ಸ್ಪಂದನೆ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಹೇಗೆ ಹೊರೆಯಾಗಬಲ್ಲದು ಎಂಬುದಕ್ಕೆ ಉದಾಹರಣೆ ಯಾಗಿ ಬಿದ್ದುಕೊಂಡಿದೆ !