ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muda Case: ಮುಡಾ ಪ್ರಕರಣ; ಸುಪ್ರೀಂ ಕೋರ್ಟ್ ಆದೇಶ ಕೇಂದ್ರದ ಕಪಾಳಕ್ಕೆ ಬಾರಿಸಿದ ತಪರಾಕಿ ಎಂದ ಸಿಎಂ

Muda Case: ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿಯ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದುದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮುಡಾ ಪ್ರಕರಣದಲ್ಲಿ ಸುಪ್ರೀಂನಿಂದ ಕೇಂದ್ರದ ಕಪಾಳಕ್ಕೆ ತಪರಾಕಿ: ಸಿಎಂ

Profile Prabhakara R Jul 21, 2025 1:59 PM

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ಪಾರ್ವತಿ ಅವರ ವಿರುದ್ಧ ತನಿಖೆ ನಡೆಸಲು ಇ.ಡಿ. ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿ ನೀಡಿರುವ ಐತಿಹಾಸಿಕ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಡಾ ನಿವೇಶನ ಅಕ್ರಮ ಪ್ರಕರಣ (Muda Case) ಸಂಬಂಧ ಸುಪ್ರೀಂಕೋರ್ಟ್‌ಗೆ ಇಡಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಜಾಗೊಂಡಿರುವ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರ ಅವರ ಆದೇಶವನ್ನು ನಾನು ವಿನೀತನಾಗಿ ಸ್ವಾಗತಿಸುತ್ತೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವನು. ಈ ನಂಬಿಕೆಯನ್ನು ಸುಪ್ರೀಂ ಕೋರ್ಟ್ ಆದೇಶ ಉಳಿಸಿಕೊಂಡು ಕಾಪಾಡಿದೆ ಎಂದು ತಿಳಿಸಿದ್ದಾರೆ.

ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿಯ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದುದು. ಇದರಿಂದ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಮಾನಸಿಕವಾದ ಕಿರುಕುಳವನ್ನು ನಾನೆಂದೂ ಮರೆಯಲಾರೆ.



ನನ್ನ ಮನದಾಳದ ಮಾತನ್ನೇ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾದ ಗೌರವಾನ್ವಿತ ಗವಾಯಿ ಅವರು ಹೇಳಿದ್ದಾರೆ. ‘’ರಾಜಕೀಯ ಸಮರಕ್ಕೆ ಮತದಾರರನ್ನು ಬಳಸಿಕೊಳ್ಳಬೇಕೇ ಹೊರತು, ಇದಕ್ಕಾಗಿ ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಬಾರದು‘’ ಎಂಬ ಅವರ ಮಾತುಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲರಲ್ಲಿಯೂ ಈ ತೀರ್ಪು ಸಮಾಧಾನ ಉಂಟುಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ.

ಸುಪ್ರೀಂಕೋರ್ಟ್‌ನ ಈ ಕಣ್ಣುತೆರೆಸುವ ಆದೇಶದ ನಂತರವಾದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಎಚ್ಚೆತ್ತುಕೊಂಡು ಐಟಿ, ಸಿಬಿಐ ಮತ್ತು ಇ.ಡಿ.ಯಂತಹ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯನ್ನು ನಿಲ್ಲಿಸಿ ಅವುಗಳಿಗೆ ಇರಬೇಕಾಗಿರುವ ಸ್ವಾಯತ್ತತೆಯನ್ನು ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | MUDA Case: ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿಗೆ ಬಿಗ್‌ ರಿಲೀಫ್‌; ಇಡಿಗೆ ಸುಪ್ರೀಂ ಕೋರ್ಟ್‌ನಿಂದ ಕ್ಲಾಸ್‌

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ ಬಂದಿರುವ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಕಿಂಚಿತ್ತಾದರೂ ಮಾನ-ಮರ್ಯಾದೆ ಎನ್ನುವುದು ಉಳಿದುಕೊಂಡಿದ್ದರೆ ಅವರೆಲ್ಲರೂ ತಕ್ಷಣ ತಮ್ಮ ತಪ್ಪಿಗಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.