Karnataka high court: ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರ ಆಗೊಲ್ಲ: ಕರ್ನಾಟಕ ಹೈಕೋರ್ಟ್
Physical Abuse: ಮಹಿಳೆ, ಆಂಥೋಣಿ ಜತೆ ಒಂದು ವರ್ಷದವರೆಗೂ ಪರಸ್ಪರ ಚಾಟಿಂಗ್, ಕಾಲ್ನಲ್ಲಿ ಮಾತನಾಡಿದ್ದು, ಇಬ್ಬರೂ ಆತ್ಮಿಯರಾಗಿದ್ದರು. ನಂತರ ಯುವಕ ಮಹಿಳೆಯನ್ನು ಓಯೋ ರೂಮ್‌ಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಬಳಿಕ ಮಹಿಳೆ ಅದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ಸಾಂಪ್ರಸ್ ಆಂಥೋಣಿ ವಿರುದ್ಧ ಅತ್ಯಾಚಾರ ದೂರು ನೀಡಿದ್ದಳು.
-
ಹರೀಶ್ ಕೇರ
Oct 28, 2025 10:33 AM
ಬೆಂಗಳೂರು: ಜೋಡಿ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿ, ನಂತರ ಆ ಕ್ರಿಯೆಯಿಂದ ನಿರಾಸೆಗೊಂಡರೆ ಅದನ್ನು ಅಪರಾಧವಾಗಿ (Crime) ಪರಿಗಣಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka high court) ಸೋಮವಾರ ಮಹತ್ವದ ತೀರ್ಪು (Judgement) ನೀಡಿದ್ದು, ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ. "ಪರಸ್ಪರ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ. ನಿರ್ಧಿಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಕ್ರಿಮಿನಲ್ ಕಾನೂನಿನಡಿಯಲ್ಲಿ ಇದನ್ನು ಅಪರಾಧವಾಗಿ (Physical Abuse) ಪರಿವರ್ತಿಸಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ಹೇಳಿದೆ.
ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಮಹಿಳೆ ತನ್ನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ರದ್ದು ಕೋರಿ 23 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ವಾಟ್ಸ್ಯಾಪ್‌ನಲ್ಲಿ ಇಬ್ಬರು ಪರಸ್ಪರ ಚಾಟಿಂಗ್ ಮಾಡಿದ್ದು, ಹಾಗೇ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ಹೇಳಿ, ಆರೋಪಿ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದೆ.
ಕಳೆದ ವರ್ಷ ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಸಾಂಪ್ರಸ್ ಆಂಥೋಣಿ, ಒಯೋ ರೂಮ್‌ಗೆ ತನ್ನನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಬಳಿಕ ಆಂಥೋಣಿ ತಮ್ಮ ವಿರುದ್ಧದ ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: BS Yediyurappa: ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕೇಸ್; ಆದೇಶ ಕಾಯ್ದಿರಿಸಿದ ಹೈಕೋರ್ಟ್
ಮಹಿಳೆ, ಆಂಥೋಣಿ ಜತೆ ಒಂದು ವರ್ಷದವರೆಗೂ ಪರಸ್ಪರ ಚಾಟಿಂಗ್, ಕಾಲ್ನಲ್ಲಿ ಮಾತನಾಡಿದ್ದು, ಇಬ್ಬರೂ ಆತ್ಮಿಯರಾಗಿದ್ದರು. ಒಂದು ವರ್ಷದ ನಂತರ 2024ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಭೇಟಿಯಾಗಲು ನಿರ್ಧರಿಸಿ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ್ದರು. ನಂತರ ಯುವಕ ಮಹಿಳೆಯನ್ನು ಓಯೋ ರೂಮ್‌ಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಮರುದಿನ ಯುವಕ ಆಕೆಯನ್ನು ಅಪಾರ್ಟ್ಮೆಂಟ್ಗೆ ಡ್ರಾಪ್ ಮಾಡಿದ್ದ. ಆದರೆ ಇದರ ಬಳಿಕ ಮಹಿಳೆ ಅದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ಸಾಂಪ್ರಸ್ ಆಂಥೋಣಿ ವಿರುದ್ಧ ಕೋಣಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಳು. ಲೈಂಗಿಕ ಕ್ರಿಯೆಗೆ ಮುಂದಾದಾಗ ಒಪ್ಪಿಗೆ ನಿರಾಕರಿಸಿದ್ದಾಗಿ ಮಹಿಳೆ ದೂರು ನೀಡಿದ್ದು, ಒಪ್ಪಿಗೆ ಸೂಚಿಸಿಲ್ಲವಾದರೂ ಆತ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪಿಸಿದ್ದರು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ದೂರು, ಚಾರ್ಜ್‌ಶೀಟ್ ಮತ್ತು ಕಕ್ಷಿದಾರರ ನಡುವಿನ ಮಾತುಕತೆಗಳನ್ನು ಒಳಗೊಂಡ ಅರ್ಜಿದಾರರು ಸಲ್ಲಿಸಿದ ದಾಖಲೆಗಳ ಜ್ಞಾಪಕ ಪತ್ರ ಸೇರಿದಂತೆ ದಾಖಲೆಯಲ್ಲಿರುವ ವಿಷಯವನ್ನು ಪರಿಶೀಲಿಸಿದರು. "ಚಾಟ್‌ಗಳು ಉತ್ತಮ ಅಭಿರುಚಿಯಲ್ಲಿಲ್ಲ. ಆದೇಶದ ಸಮಯದಲ್ಲಿ ಅವುಗಳನ್ನು ಪುನರುತ್ಪಾದಿಸಲಾಗುವುದಿಲ್ಲ. ಇದು ಅರ್ಜಿದಾರರು ಮತ್ತು 2 ನೇ ಪ್ರತಿವಾದಿ/ದೂರುದಾರರ ನಡುವಿನ ಎಲ್ಲಾ ಕೃತ್ಯಗಳು ಒಪ್ಪಿಗೆಯಿಂದ ಕೂಡಿವೆ ಎಂಬುದನ್ನು ಮಾತ್ರ ಸೂಚಿಸುತ್ತದೆ" ಎಂದು ಅಭಿಪ್ರಾಯಪಟ್ಟರು.