ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka high court: ಆರ್‌ಎಸ್‌ಎಸ್‌ ಪಥಸಂಚಲನ ನಿರಾತಂಕ; ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

RSS: ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದರು.

ಆರ್‌ಎಸ್‌ಎಸ್‌ಗೆ ರಿಲೀಫ್‌; ಸರಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

-

ಹರೀಶ್‌ ಕೇರ ಹರೀಶ್‌ ಕೇರ Oct 28, 2025 12:44 PM

ಬೆಂಗಳೂರು: ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಸಂಸ್ಥೆಗಳು ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ‌ರಾಜ್ಯ ಸರಕಾರದ (Karnataka goverment) ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ (Karnataka high court) ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ (Interim stay) ನೀಡಿದೆ. ಇದರೊಂದಿಗೆ, ಚಿತ್ತಾಪುರ ಸೇರಿದಂತೆ ರಾಜ್ಯಾದ್ಯಂತ ರಾಷ್ಟ್ರೀಯ ಸ್ವಯಸೇವಕ ಸಂಘ ನಡೆಸಲು ಉದ್ದೇಶಿಸಿದ್ದ ಪಥಸಂಚಲನಗಳಿಗೆ ಉಂಟಾಗಿದ್ದ ತಡೆ ತೆರವಾಗಿದೆ.

2013ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳು, ಸಂಘಟನೆಗಳು ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ ನಿಯಮ ತಂದಿತ್ತು. ಇದನ್ನು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್‌ ಪದ ಬಳಕೆ ಮಾಡಿರಲಿಲ್ಲ. ಆದರೆ, ಇದಕ್ಕೂ ಮುನ್ನ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಆರೆಸ್ಸೆಸ್‌ ಚಟುವಟಿಕೆಗಳಿಗೆ ಮೂಗುದಾರ ಹಾಕುವಂತೆ ಸಿಎಂಗೆ ಪತ್ರ ಬರೆದಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನಂತರ, ಇದೇ ಆದೇಶವನ್ನು ಮುಂದಿಟ್ಟುಕೊಂಡು, ಚಿತ್ತಾಪುರದಲ್ಲಿ ನಡೆಯಬೇಕಿದ್ದ ಆರೆಸ್ಸೆಸ್‌ ಪಥಸಂಚಲನವನ್ನು ನಿರ್ಬಂಧಿಸಲಾಗಿತ್ತು.

ಧಾರವಾಡದ ಹೈಕೋರ್ಟ್ ಪೀಠದಲ್ಲಿ ಪುನಃಶ್ಚೇತನ ಸೇವಾ ಸಂಸ್ಥೆ ಹುಬ್ಬಳ್ಳಿಯ ಎನ್‌ಜಿಓ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ, ಈ ಆದೇಶ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರವಾಗಿದೆ. ಆದೇಶದಲ್ಲಿ 10 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಎಂದು ಸರಕಾರ ನಿರ್ಬಂಧ ವಿಧಿಸಿದೆ. ಈ ನಿರ್ಬಂಧ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದು ಸಂವಿಧಾನದ ಆರ್ಟಿಕಲ್ 91 ಎ ಪ್ರಕಾರ ಜನಗಳು ಸಭೆ ಸಮಾರಂಭ ಸೇರುವ ಹಕ್ಕನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರ ಆದೇಶ ಮೂಲಕ ಮುಂದಾಗಿದ್ದು ಇದು ಸಂವಿಧಾನ ಬಾಹಿರ ಎಂದು ಅಶೋಕ್ ಹಾರನಹಳ್ಳಿ ವಾದ ಮಾಡಿದರು.

ಇದನ್ನೂ ಓದಿ: RSS patha sanchalana: ಚಿತ್ತಾಪುರ ಪಥಸಂಚಲನ: ಶಾಂತಿ ಸಭೆ ನಿಗದಿ, ಆರ್‌ಎಸ್‌ಎಸ್‌ ಸೇರಿ 10 ಸಂಘಟನೆಗಳಿಗೆ ನೋಟಿಸ್

ಹೈಕೋರ್ಟ್ ಕೂಡ ಈ ವಾದವನ್ನು ಒಪ್ಪಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಇದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದರು. ರಾಜ್ಯ ಸರ್ಕಾರದ ಪರ ವಕೀಲರು ವಾದ ಮಾಡಲು ಒಂದು ದಿನದ ಕಾಲಾವಕಾಶ ಕೇಳಿದ್ದಾರೆ.

ಆದೇಶದಲ್ಲಿ ಏನಿದೆ?

ಸರಕಾರ ನೀಡಿದ್ದ ಆದೇಶದಂತೆ ಯಾವುದೇ ಖಾಸಗಿ ಸಂಘ, ಸಂಸ್ಥೆ, ಸಂಘಟನೆ, ಜನರ ಗುಂಪು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದೇ ಸರ್ಕಾರಿ ಸ್ಥಳ, ಮೈದಾನಗಳನ್ನು ಬಳಕೆ ಮಾಡಬೇಕು.‌ ಸರ್ಕಾರದ/ಸರ್ಕಾರಿ ಸಾಮ್ಯದ/ನಿಗಮ/ಮಂಡಳಿಗಳ, ಶಾಲಾ -ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು, ಕೆರೆಗಳು ಮತ್ತು ಇತರ ಆಸ್ತಿ/ಜಾಗಗಳನ್ನು ಬಳಕೆ ಮಾಡಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಅಗತ್ಯವಾಗಿದೆ.‌ ಪ್ರದೇಶ ವ್ಯಾಪ್ತಿಯ ಪೊಲೀಸ್ ಕಮಿಷನರ್ ಅಥವಾ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರಿಂದ ಅಥವಾ ಸರ್ಕಾರ ಅನುಮತಿಸಿದ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕಿತ್ತು.

ಯಾವುದೇ ಹೆಸರಿನಿಂದ ಕರೆಯಲ್ಪಡುವ 10ಕ್ಕಿಂತ ಅಧಿಕ ಜನರ ಗುಂಪನ್ನು ಮೆರವಣಿಗೆ, ರಾಲಿ ಎಂದು ಪರಿಗಣಿಸಲಾಗುತ್ತದೆ. ಅವರು ಸಂಗೀತ ಅಥವ ಇತರೆ ಚಟುವಟಿಕೆಗಳೊಂದಿಗೆ ಸರ್ಕಾರಿ ಸ್ಥಳಗಳಲ್ಲಿ ನಿರ್ದಿಷ್ಟ ಉದ್ದೇಶದೊಂದಿಗೆ ಒಟ್ಟಾಗಿ ಸಾಗುವುದು, ನಿಗದಿತ ಮಾರ್ಗದಲ್ಲಿ ಮೆರವಣಿಗೆ ಮಾಡಲು ಅನುಮತಿ ಕಡ್ಡಾಯವಾಗಿತ್ತು. ಖಾಸಗಿ ಸಂಘ, ಸಂಸ್ಥೆಗಳು, ಸಂಘಟನೆಗಳು ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಉದ್ದೇಶಿತ ಕಾರ್ಯಕ್ರಮ, ಮೆರವಣಿಗೆ ಮಾಡುವ ಮೂರು ದಿನ ಮುಂಚಿತವಾಗಿ ಅನುಮತಿಗೆ ಕೋರಿ ಲಿಖಿತವಾಗಿ ಸಕ್ಷಮ ಪ್ರಾಧಿಕಾರದ ಮುಂದೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು.